Advertisement

ಕೆಂಪಾಗಿದೆ ನದಿ ನೀರು; ಕಾರಣ ಹೇಳುವಿರಾ?

11:44 AM Oct 22, 2018 | Team Udayavani |

ಬಂಟ್ವಾಳ: ಮಳೆಗಾಲ ಅಂತ್ಯಗೊಂಡಿದ್ದರೂ ಜಿಲ್ಲೆಯ ಪ್ರಮುಖ ನದಿಗಳ ನೀರು ಈಗಲೂ ಕೆಂಪು ಬಣ್ಣದಿಂದ ಕೂಡಿದ್ದು, ಇದು ಕುಡಿಯಲು ಯೋಗ್ಯವಾಗಿದೆಯೇ, ಕುಡಿದರೆ ಆರೋಗ್ಯ ಸಮಸ್ಯೆ ಎದುರಾದೀತೇ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ.

Advertisement

ಭಾರೀ ಮಳೆಯಾದಾಗ ಮಣ್ಣು ಕೊಚ್ಚಿಹೋಗಿ ನದಿಗಳ ನೀರು ಕೆಂಪಾಗುವುದು; ಮಳೆ ಕಡಿಮೆಯಾಗುತ್ತಿದ್ದಂತೆ ತಿಳಿಯಾಗುವುದು ಸಹಜ. ಆದರೆ ಈ ವರ್ಷ ಹಾಗಾಗಿಲ್ಲ ಎನ್ನುತ್ತಾರೆ ನದಿ ಪಾತ್ರದ ವಾಸಿಗಳು. ಪ್ರಸಕ್ತ ವರ್ಷ ಒರತೆಯ ಪ್ರಮಾಣವೇ ಕಡಿಮೆಯಾದಂತಿದ್ದು, ಮಳೆ ನಿಂತ ಕೂಡಲೇ ನದಿಗಳಲ್ಲಿ ಹರಿವು ತೀರಾ ಕನಿಷ್ಠ ಮಟ್ಟಕ್ಕೆ ಇಳಿದಿದೆ.

ಕಳೆದ ಒಂದು ವಾರದಿಂದ ವಾಯುಭಾರ ಕುಸಿತದಿಂದ ಕೆಲವೆಡೆ ಮಳೆಯಾಗುತ್ತಿದ್ದು, ನದಿ ನೀರಿನಲ್ಲಿ ಕೆಸರಿನ ಪ್ರಮಾಣ ಹೆಚ್ಚಾಗಿದೆ. ನೇತ್ರಾವತಿ, ಕುಮಾರಧಾರಾ, ಫಲ್ಗುಣಿ ಸಹಿತ ಪ್ರಮುಖ ನದಿಗಳ ಬದಿಯಲ್ಲಿ ಕಾಲಿಟ್ಟರೆ ಹೂತುಹೋಗುವ ಭಯ ಆಗುತ್ತಿದೆ. ಈ ಕೆಸರು ನೀರು ದೇಹಕ್ಕೆ ತಾಗಿದರೆ ತುರಿಕೆಯಾಗುತ್ತದೆ. ನೇತ್ರಾವತಿ ನದಿಯ ಶಂಭೂರು ಎಎಂಆರ್‌ ಅಣೆಕಟ್ಟು, ತುಂಬೆ ಅಣೆಕಟ್ಟು, ಫಲ್ಗುಣಿ ನದಿಯ ಪುಚ್ಚೇರಿ ಅಣೆಕಟ್ಟು ಪ್ರದೇಶದ ಮಂದಿ ಇದನ್ನು ದೃಢಪಡಿಸುತ್ತಾರೆ.

ಬಿರುಸಿನ ಮಳೆ ಇಲ್ಲದಿರುವಾಗಲೂ ಭೂಮಿಯ ಮಣ್ಣು ಕರಗುತ್ತಿರುವುದೇಕೆ ಎಂಬುದೇ ಪ್ರಶ್ನೆ. ಅಂತರ್ಜಲ ಕುಸಿತವಾಗಿರುವುದನ್ನು ಮೇಲ್ನೋಟಕ್ಕೇ ಕಂಡಿರುವ ಜನಸಾಮಾನ್ಯರು ನದಿಯ ನೀರಿನ ಬಣ್ಣವೂ ಬದಲಾಗುತ್ತಿರುವುದರಿಂದ ಇನ್ನು ಬೇಸಗೆಯಲ್ಲಿ ಹೇಗೋ ಎಂಬ ಚಿಂತೆಗೊಳಗಾಗಿದ್ದಾರೆ. ರಾಡಿಮಿಶ್ರಿತ ನೀರಿನಿಂದಾಗಿ ನದಿಯ ಒರತೆಗಳೂ ಮುಚ್ಚಿಹೋಗಬಹುದೇ ಎಂಬ ಭಯವೂ ಇದೆ.

ಸಾಮಾನ್ಯವಾಗಿ ಮಳೆಗಾಲದಲ್ಲಿ ಭೂಗರ್ಭ ಸೇರುವ ನೀರು ಒರತೆಯಾಗಿ ಹರಿಯುತ್ತದೆ. ಪ್ರಸ್ತುತ ಮಳೆಗಾಲದಲ್ಲಿ ಮಡಿಕೇರಿ ಪ್ರದೇಶದಲ್ಲಿ ಭೂ ಕುಸಿತದಿಂದ ಅಂತರ್ಜಲಕ್ಕೆ ಮಣ್ಣು ಸಹಿತ ನೀರು ಸೇರಿದೆ. ಮಳೆ ಬಿರುಸು ಕಡಿಮೆ ಆದಾಗ ಪಯಸ್ವಿನಿ ನದಿಯಲ್ಲಿ ರಾಡಿ ಅಥವಾ ಮಣ್ಣು ಮಿಶ್ರಿತ ನೀರು ಸುಮಾರು ಹದಿನೈದು ದಿನಕ್ಕೂ ಹೆಚ್ಚು ಕಾಲ ಹರಿದು ಬಂದಿತ್ತು. ಈಗ ತಿಳಿಯಾಗುತ್ತಾ ಬಂದಿದೆ.

Advertisement

ಈ ವಿದ್ಯಮಾನಕ್ಕೆ ಭೂಮಿಯ ಒಳ ಪದರ ಕಂಪಿಸಿರುವುದೂ ಕಾರಣ. ಸಡಿಲವಾಗಿರುವ ಮಣ್ಣು ಅಂತರ್ಜಲದೊಂದಿಗೆ ಮಿಶ್ರಿತವಾಗುತ್ತದೆ. ಇದರಿಂದ ಒರತೆಯೇ ಕೆಂಪಾಗುತ್ತದೆ. ಮಣ್ಣು ಮಿಶ್ರಿತ ಒರತೆಯ ಹರಿವು ತಿಳಿಯಾಗಲು ಸಾಕಷ್ಟು ಕಾಲ ಬೇಕಾಗಬಹುದು. ಅಂತರ್ಜಲ ಕುಸಿತಕ್ಕೂ ಇದು ಕಾರಣವಾಗಬಹುದು. ಮಳೆಗಾಲ ಮುಗಿಯುವಾಗ ಸಾಮಾನ್ಯವಾಗಿ ಬಾವಿ ಗಳಲ್ಲಿ ನೀರು ಮೇಲ್ಮಟ್ಟದಲ್ಲಿ ಇರುತ್ತದೆ. ಆದರೆ ಈ ಬಾರಿ ಅನೇಕ ಕಡೆ ಮಳೆಗಾಲ ಮುಕ್ತಾಯಕ್ಕೆ ಬಾವಿಗಳಲ್ಲಿ ನೀರು ಮಾರ್ಚ್‌ -ಎಪ್ರಿಲ್‌ ತಿಂಗಳ ಮಟ್ಟಕ್ಕೆ ಕುಸಿದಿದೆ. ಇದು ಭೂಗರ್ಭದಲ್ಲಿ ಅಂತರ್ಜಲ ಮಟ್ಟ ಕುಸಿದಿರುವುದರ ಸೂಚನೆ.
ಡಾ| ಉದಯಶಂಕರ ಎಚ್‌.ಎನ್‌. ಭೂ ವಿಜ್ಞಾನ ಪ್ರಾಧ್ಯಾಪಕರು,  ಎಂಐಟಿ, ಮಣಿಪಾಲ

ಪುರಸಭೆಯು ನೇತ್ರಾವತಿ ನದಿಯ ನೀರನ್ನು ನೇರವಾಗಿ ಕುಡಿಯಲು ನೀಡುತ್ತಿಲ್ಲ. ಮೂರು ವಿಧದಲ್ಲಿ ಶುದ್ಧೀಕರಿಸಲಾಗುತ್ತದೆ. ಸಾಮಾನ್ಯವಾಗಿ ಆಲಂ ಎಂಬ ರಾಸಾಯನಿಕವನ್ನು ವೈಜ್ಞಾನಿಕವಾಗಿ ಬಳಸಲಾಗುತ್ತದೆ. ಮಳೆಗಾಲದಲ್ಲಿ ಕೆಸರು ನೀರು ಇರುವಾಗಲಂತೂ ಹೊಸ ಮಾದರಿಯ ರಾಸಾಯನಿಕ ಬಳಸಲಾಗುತ್ತಿದೆ.
ರೇಖಾ ಜೆ. ಶೆಟ್ಟಿ, ಮುಖ್ಯಾಧಿಕಾರಿ, ಬಂಟ್ವಾಳ ಪುರಸಭೆ

ರಾಜಾ ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next