ಹರಿಹರ: ಎಸ್ಸೆಸ್ಸೆಲ್ಸಿ ನಂತರ ಐಟಿಐ ಕೋರ್ಸ್ ಮುಗಿಸಿದ ಅಭ್ಯರ್ಥಿಗಳಿಗೆ ದೇಶ, ವಿದೇಶಗಳ ಪ್ರತಿಷ್ಠಿತ ಕಂಪನಿಗಳಲ್ಲಿ ವಿಫುಲ ಉದ್ಯೋಗಾವಕಾಶಗಳು ಲಭ್ಯವಾಗುತ್ತವೆ ಎಂದು ಕೆಸಿವಿ ಐಟಿಐ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಪರಶುರಾಮ ಕಾಟ್ವೆ ಹೇಳಿದರು.
ನಗರದ ಕೆಸಿವಿ ಐಟಿಐ ಕಾಲೇಜಿನಲ್ಲಿ ಟೊಯೊಟಾ ಕಿರ್ಲೋಸ್ಕರ್ ಆಟೋ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಅಪ್ರಂಟಿಸ್ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದ ಅವರು, ಬಿ.ಇ ಪಾಸಾದ ಅಭ್ಯರ್ಥಿಗಳಿಗೆ ಉದ್ಯೋಗ ಸಿಗುವುದು ಕಷ್ಟವಾಗಬಹುದು, ಆದರೆ ಐಟಿಐ ಅಭ್ಯರ್ಥಿಗಳಿಗೆ ನಿರುದ್ಯೋಗದ ಆತಂಕವಿಲ್ಲ ಎಂದರು.
ಕಡಿಮೆ ಖರ್ಚಿನ, ಕಡಿಮೆ ಅವಧಿಯ ಐಟಿಐ ಕೋರ್ಸ್ ಬಡ, ಮಧ್ಯಮ ವರ್ಗದವರಿಗೆ ಸೂಕ್ತವಾಗಿದೆ. ಐಟಿಐ ಜೊತೆಗೆ ಸೂಕ್ತ ಕಂಪ್ಯೂಟರ್ ಜ್ಞಾನ ಹೊಂದಿದರೆ ಭಾರತದಲ್ಲಿರುವ ವಿದೇಶಿ ಕಂಪನಿಗಳು ಹಾಗೂ ವಿದೇಶದಲ್ಲೇ ಇರುವ ಕಂಪನಿಗಳಲ್ಲಿ ಉತ್ತಮ ಸಂಬಳದ ಉದ್ಯೋಗ ಪಡೆಯಲು ಸಾಧ್ಯ. ಈಗಿನ ಬೇಡಿಕೆಗಳನ್ನು ಗಮನದಲ್ಲಿಟ್ಟು ಕಾಲೇಜಿನಲ್ಲಿ ಉತ್ತಮ ಕೋರ್ಸ್‌ಗಳನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.
ಟೊಯೊಟಾ ಕಂಪನಿ ಅಧಿಕಾರಿ ಗಿರೀಶ್‌ಕುಮಾರ್ ಮಾತನಾಡಿ, ಕಿರ್ಲೋಸ್ಕರ್ ಟೊಯೊಟಾ ಬಹುರಾಷ್ಟ್ರೀಯ ಕಂಪನಿಯಾಗಿದೆ. ಅಪ್ರಂಟಿಸ್ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಕನಿಷ್ಠ ವೇತನ, ಕ್ಯಾಂಟೀನ್ ಸೌಲಭ್ಯ ದೊರೆಯುವ ಜೊತೆಗೆ ಅಂತಾರಾಷ್ಟ್ರೀಯ ಮಟ್ಟದ ವಾತಾವರಣದಲ್ಲಿ ಕೆಲಸ ಮಾಡಿದ ಅನುಭವ ಲಭ್ಯವಾಗುತ್ತದೆ ಎಂದರು.
ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಮತ್ತು ಹಾವೇರಿ ಜಿಲ್ಲೆಗಳ ಎಲೆಕ್ಟ್ರಾನಿಕ್ಸ್, ಮೆಕಾನಿಕ್ಸ್, ಎಲೆಕ್ಟ್ರಿಷಿಯನ್, ಫಿಟ್ಟರ್, ವೆಲ್ಡರ್, ಟರ್ನರ್, ಮೆಷಿನಿಸ್ಟ್, ಎಂ.ಎಂ.ವಿ ತರಬೇತಿ ಹೊಂದಿದ 130 ಅಭ್ಯರ್ಥಿಗಳು ಅಪ್ರಂಟಿಸ್ ನೇಮಕಾತಿ ಲಿಖೀತ ಪರೀಕ್ಷೆ ಹಾಗೂ ಸಂದರ್ಶನಕ್ಕೆ ಹಾಜರಾದರು.
ಟೊಯೊಟಾ ಕಂಪನಿಯ ರೋಹಿತ್, ಸಿದ್ಧಲಿಂಗಸ್ವಾಮಿ, ವಿಜಯ್, ಐಟಿಐ ಕಾಲೇಜು ಆಡಳಿತ ಮಂಡಳಿಯ ಖಜಾಂಚಿ ಮನೋಹರಸಾ ಸೋಳಂಕಿ, ಅಶೋಕ್ ಆರ್. ಭೂತೆ, ಸಂದೀಪ್ ಭೂತೆ, ಕೃಷ್ಣ ಪಿ. ರಾಜೊಳ್ಳಿ, ರಮೇಶ್ ಕಾಟ್ವೆ, ಪ್ರಾಚಾರ್ಯ ರಾಘವೇಂದ್ರ ಜಿ., ಜೆಟಿಒ ಹರೀಶ್ ಕೆ.ಜಿ. ಇತರರು ಇದ್ದರು.