ಬಜಪೆ: ಜಾನಪದ ಸಂಸ್ಕೃತಿ ಆಚರಣೆಗೆ ಹೆಸರು ವಾಸಿಯಾಗಿದ್ದು, ಶೈಕ್ಷಣಿಕ, ಪ್ರವಾಸೋದ್ಯಮ, ಕೃಷಿ ಚಟುವಟಿಕೆಗಳ ಕೇಂದ್ರವಾಗಲು ಅರ್ಹವಾಗಿರುವ ಮುಚ್ಚೂರು ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳಿಗಾಗಿ ಬಾಗಿಲು ತೆರೆಯಬೇಕಿದೆ.
ಹೆಸರು ಪುರಾಣ
ಇಲ್ಲಿರುವ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಪಂಚಲಿಂಗಗಳಿಗೆ ಉತ್ಸವಗಳು ನಡೆಯುತ್ತಿತ್ತು. ಪಂಚಲಿಂಗಗಳ ಆರಾಧನೆ ಕಷ್ಟವನ್ನು ಮನಗಂಡು ಊರಿನ ಮುಖ್ಯಸ್ಥರು ಸೇರಿ ನಾಲ್ಕು ಲಿಂಗಗಳನ್ನು ಗರ್ಭಗುಡಿಯಲ್ಲಿ ಮುಚ್ಚಿ ಒಂದು ಲಿಂಗವನ್ನು ಮಾತ್ರ ಇರಿಸಿ ಪೂಜೆ ಪುನಸ್ಕಾರ ಪ್ರಾರಂಭಿಸಿದರು. ನಾಲ್ಕು ಲಿಂಗಗಳ ಗರ್ಭಗುಡಿಗಳಿಗೆ ಬಾಗಿಲು ಮುಚ್ಚಿರುವುದರಿಂದ ಊರಿಗೆ ಮುಚ್ಚೂರು ಎಂದು ಹೆಸರು ಬಂತು ಎನ್ನುವ ಪ್ರತೀತಿ ಇದೆ.
ಜಾನಪದ ಸಂಸ್ಕೃತಿ ಆಚರಣೆಗೆ ಹೆಸರುವಾಸಿಯಾಗಿರುವ ಈ ಗ್ರಾಮದಲ್ಲಿ ಹಿಂದೆ ಪದ್ಮಶಾಲಿ ಜನಾಂಗ ಕೈಮಗ್ಗಕ್ಕೆ ಪ್ರಖ್ಯಾತಿ ಹೊಂದಿದ್ದ ಪ್ರದೇಶವಾಗಿತ್ತು. ಕುಡುಬಿ ಜನಾಂಗದ ವನಭೋಜನ, ಹೋಳಿ ಹಬ್ಬ ಜಿಲ್ಲೆಯ ಜನಾಕರ್ಷಣೀಯಾಗಿ ಪ್ರಸಿದ್ಧಿ ಪಡೆದಿದೆ.
ಮುಚ್ಚೂರು ಗ್ರಾಮದಲ್ಲಿ 1099 ಪುರುಷರು, 1195 ಮಹಿಳೆಯರು ಸೇರಿದಂತೆ ಒಟ್ಟು ಜನಸಂಖ್ಯೆ 2,294. ಒಟ್ಟು 492 ಕುಟುಂಬಗಳಿವೆ. ಗ್ರಾಮದ ವಿಸ್ತೀರ್ಣ 1673.64 ಎಕರೆ.
ಒಂದೇ ಸೂರಿನಡೆ ಎಲ್ಲ ಸೇವೆ ಸಿಗಲಿ
ಮುಚ್ಚೂರು ಗ್ರಾಮ ಪಂಚಾಯತ್‌ನಲ್ಲಿ ಎಲ್ಲ ಸೇವೆಗಳನ್ನು ಒಂದೇ ಸೂರಿನಡಿ ತರುವ ಪ್ರಯತ್ನಗಳಾಗುತ್ತಿದ್ದು, ಅದು ಶೀಘ್ರ ಕಾರ್ಯಗತಗೊಂಡರೆ ಗ್ರಾಮಸ್ಥರಿಗೆ ಸಾಕಷ್ಟು ಅನುಕೂಲವಾಗಲಿದೆ.
ಅಭಿವೃದ್ಧಿಗೆ ಕಾಯುತ್ತಿದೆ ರಸ್ತೆಗಳು
ಮುಚ್ಚೂರು ದುರ್ಗಾಪರಮೇಶ್ವರಿ ದೇವಸ್ಥಾನ, ಶಾಲೆ ಹಾಗೂ ರಾಜ್ಯ ಹೆದ್ದಾರಿಯನ್ನು ಸಂಪರ್ಕಿಸುವ ತೌಡುಕ್ಕು- ಚೆನ್ನೊಟ್ಟು ರಸ್ತೆ ನಿರ್ಮಾಣ ಕಾಮಗಾರಿ ಪ್ರಾರಂಭಿಕ ಹಂತದಲ್ಲಿದ್ದು, ಅದು ಶೀಘ್ರ ಪೂರ್ಣಗೊಳ್ಳ ಬೇಕಿದೆ. ಮುಚ್ಚೂರು, ಕೈದುಮಾರ್, ನೆಲ್ಲಿಜೆ ರಸ್ತೆ, ಚೆನ್ನೊಟ್ಟು – ದುರ್ಗಾಪರಮೇಶ್ವರಿ ದೇವಸ್ಥಾನ ರಸ್ತೆ, ನೀರುಡೆ, ಮುಚ್ಚೂರು, ಅಮ್ನಿಕೋಡಿ- ನಿಡ್ಡೋಡಿ ಗಂಪ ರಾಜ್ಯ ಹೆದ್ದಾರಿಗೆ ಸಂಪರ್ಕ ರಸ್ತೆ, ಬಾಳಿಕೆ, ಮುಚ್ಚೂರು, ನೀರ್ಕೆರೆ ಸಂಪರ್ಕ ರಸ್ತೆ, ಕೀಲೆ- ಗುಂಡಾವು ಸಂಪರ್ಕ ರಸ್ತೆ, ಒಳ ರಸ್ತೆಗಳು ಅಭಿವೃದ್ಧಿಗಾಗಿ ಕಾಯುತ್ತಿವೆ.
ಹಲವು ಬೇಡಿಕೆ
ಗ್ರಾಮೀಣ ಶಿಕ್ಷಣ ಕೇಂದ್ರವಾಗಲು ಅರ್ಹವಿರುವ ಮುಚ್ಚೂರು ಗ್ರಾಮದಲ್ಲಿ ಅಂಗನವಾಡಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳಿದ್ದು, ಇಲ್ಲಿಗೆ ಮೂಲ ಸೌಕರ್ಯ ಒದಗಿಸುವ ಅವಶ್ಯಕತೆ ಇದೆ. ಅಂಬೇಡ್ಕರ್ ವಸತಿ ಶಾಲೆಗೆ ಮುಚ್ಚಾರಿನಲ್ಲಿ ಈಗಾಗಲೇ ಜಾಗ ಮಂಜೂರಾತಿ ಆಗಿದ್ದು, ಕಟ್ಟಡ ಕಾಮಗಾರಿಗೆ ಅನುದಾನ ಮಂಜೂರಾಗಿಲ್ಲ. ಶಾಲಾ ಸಮಯದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ದೃಷ್ಟಿಯಿಂದ ಬಸ್ ಸೌಕರ್ಯವನ್ನು ಹೆಚ್ಚಿಸಬೇಕು, ಕೊಳವೆ ಬಾವಿ ಅಧಾರಿತ ಕುಡಿಯುವ ನೀರು ಸರಬರಾಜು ಆಗುತ್ತಿದ್ದು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಇಲ್ಲಿ ಅನುಷ್ಠಾನವಾಗಬೇಕಿದೆ. ಜತೆಗೆ ಹಿಂದೂ ರುದ್ರಭೂಮಿ ಅಭಿವೃದ್ಧಿ ಕಾರ್ಯವೂ ನಡೆಯಬೇಕು. ಕೃಷಿಕರು ಹೆಚ್ಚಾಗಿರುವ ಗ್ರಾಮದಲ್ಲಿ ಹೈನುಗಾರಿಕೆ ಪ್ರಸಿದ್ಧಿ ಪಡೆದಿದೆ. ಕೃಷಿ ಅಧಾರಿತ ಕೈಗಾರಿಕೆಗಳಿಗೆ ಹೆಚ್ಚು ಅನುಕೂಲ ವಾತಾವರಣ ಇದೆ. ಈ ನಿಟ್ಟಿನಲ್ಲಿ ಯೋಜನೆಗಳು ರೂಪುಗೊಳ್ಳಬೇಕು.
ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಅವಕಾಶ
ಶೈಕ್ಷಣಿಕ ಕಾಶಿ ಅಥವಾ ಹಬ್ ಮಾಡಲು ಗ್ರಾಮದಲ್ಲಿ ಯೋಗ್ಯ ಅವಕಾಶ ಇದೆ. ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ 400ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಲ್ಲಿ ಪಿಯುಸಿ, ಐಟಿಐ/ ಡಿಪ್ಲೊಮ, ವಸತಿ ನಿಲಯ (ಹಿಂದುಳಿದ ವರ್ಗ), ಕ್ರೀಡಾ ಮೈದಾನ ನಿರ್ಮಾಣಗೊಂಡರೆ ಗ್ರಾಮೀಣ ವಿದ್ಯಾರ್ಥಿಗಳ ಚಿಂತೆ ಕೊಂಚ ಮಟ್ಟಿಗೆ ಪರಿಹಾರವಾಗುವುದು.
ಕಲ್ಲಮುಂಡ್ಕೂರು, ನೀರುಡೆ, ನೀರ್ಕೆರೆಯಲ್ಲಿ ಪ್ರೌಢಶಾಲೆ ಇದೆ. ಕೊಂಪದವಿನಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಇದ್ದು, ಇಲ್ಲಿ 6ರಿಂದ 10ರ ವರಗೆ ತರಗತಿಗಳಿವೆ.ಇಲ್ಲಿ ಪ್ರತಿ ಸಾಲಿನಲ್ಲಿ 60 ವಿದ್ಯಾರ್ಥಿ ಗಳು ಎಸೆಸೆಲ್ಸಿ ಪರೀಕ್ಷೆ ಬರೆಯುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳಿಗೆ ಪಿಯುಸಿ ಶಿಕ್ಷಣಕ್ಕೆ ದೂರ ಸಂಚಾರ ಮಾಡಬೇಕಾಗಿದೆ.
ಪದವಿ ಪೂರ್ವ ಕಾಲೇಜು ಪ್ರಾರಂಭವಾಗಲಿ
ಗ್ರಾಮೀಣ ಪ್ರದೇಶವಾಗಿರುವುದರಿಂದ ಬಸ್ ಸೌಕರ್ಯವೂ ಕಡಿಮೆ. ಹೀಗಾಗಿ ಇಲ್ಲಿನ ವಿದ್ಯಾರ್ಥಿಗಳು ಪ್ರೌಢ ಶಿಕ್ಷಣ ಅನಂತರ ಶಿಕ್ಷಣ ಪಡೆಯಲು ಸಾಕಷ್ಟು ಸಂಕಷ್ಟವನ್ನು ಎದುರಿಸಬೇಕಾಗಿದೆ. ಈಗಾಗಲೇ 10 ಎಕರೆ ಜಾಗ ಪಿಲಿಕುಂಡೆಲ್‌ನಲ್ಲಿ ಕಾಯ್ದಿರಿಸಲು ಪ್ರಾಸ್ತಾವನೆ ಸಲ್ಲಿಸಲಾಗಿದೆ. ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಕ್ಕೂ ಜಾಗ ಕಾಯ್ದಿರಿಸಲು ಪ್ರಾಸ್ತಾವನೆ ಸಲ್ಲಿಸಲಾಗಿದೆ. ಇಲ್ಲಿ ಜಾಗದ ಸಮಸ್ಯೆ ಇರದ ಕಾರಣ ಎಲ್ಲ ಗ್ರಾಮೀಣ ಪ್ರದೇಶದ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಕೇಂದ್ರವಾಗಿ ಪದವಿ ಪೂರ್ವ ಕಾಲೇಜು ಪ್ರಾರಂಭವಾದಲ್ಲಿ ಉಪಯೋಗವಾಗಲಿದೆ.
ಪ್ರವಾಸೋದ್ಯಮಕ್ಕೂ ಅವಕಾಶ
ಮುಚ್ಚೂರು ಕಾನ ಶ್ರೀರಾಮ ದೇವ ಸ್ಥಾನದ ಬಳಿ 4 ಕೋಟಿ ರೂಪಾಯಿ ಅಂದಾಜು ವೆಚ್ಚದ ಕಿಂಡಿ ಅಣೆಕಟ್ಟು ನಿರ್ಮಾಣವಾಗಿದೆ. 2 ಕಿ.ಮೀ. ಕೆಳಗೆ ಕೊಂತಿಕಟ್ಟ ಎಂಬಲ್ಲಿ ಕಿಂಡಿ ಅಣೆಕಟ್ಟು ಪ್ರಸ್ತಾವನೆಯಲ್ಲಿದೆ. ಇದು ನಿರ್ಮಾಣವಾದಲ್ಲಿ ಎರಡು ಕಿಂಡಿ ಅಣೆಕಟ್ಟುಗಳ ನಡುವೆ ನೀರು ನಿಲ್ಲುವ ಕಾರಣ ಇಲ್ಲಿ ದೋಣಿ ವಿಹಾರಕ್ಕೆ ಒಳ್ಳೆಯ ಅವಕಾಶವಿದೆ. ಮುಚ್ಚೂರು ಕಾನವನ್ನು ದೋಣಿ ವಿಹಾರ ಕೇಂದ್ರವನ್ನಾಗಿಸಬಹುದು. ಈಗಾಗಲೇ ಮುಚ್ಚೂರು ಕಾನ ಅಣೆಕಟ್ಟು ಬಳಿ ಉದ್ಯಾನವನ ನಿರ್ಮಾಣ ಹಂತದಲ್ಲಿದೆ. ಪ್ರಕೃತಿ ಸೌಂದರ್ಯವೂ ಇದೆ. ಅಕರ್ಷಣೀಯ ಕೇಂದ್ರವಾಗಿ ಪರಿವರ್ತಿಸಬಹುದಾಗಿದೆ.
ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಗತ್ಯ: ಪದವಿ ಪೂರ್ವ ಕಾಲೇಜು, ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯ ಗ್ರಾಮದ ಅಗತ್ಯಗಳಲ್ಲಿ ಒಂದು. ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಿದೆ. ಕನ್ನಡ ಮಾಧ್ಯಮದೊಂದಿಗೆ ಈಗಾಗಲೇ 1ರಿಂದ 4ರವರೆಗೆ ಆಂಗ್ಲ ಮಾಧ್ಯಮ ಶಾಲೆ ಆರಂಭಗೊಂಡಿದೆ. ಕೊಠಡಿ ಕೊರತೆ ಇದೆ. ಪ್ರಾಥಮಿಕ ಶಾಲೆ ಭೋಜನ ಶಾಲೆಯಲ್ಲಿ ಸಮರ್ಪಕ ವ್ಯವಸ್ಥೆ ಆಗಬೇಕಿದೆ. ಪಂಚಾಯತ್ ಕೊಳವೆ ಬಾವಿ ಅಧಾರಿತವಾಗಿ ಕುಡಿಯುವ ನೀರು ಯೋಜನೆ ಇದ್ದರೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಇಲ್ಲಿ ಅನುಷ್ಠಾನವಾಗಬೇಕಿದೆ. –
ಮೋಹಿನಿ, ಅಧ್ಯಕ್ಷೆ, ಮುಚ್ಚೂರು ಗ್ರಾ. ಪಂ.
ಸುಬ್ರಾಯ್ ನಾಯಕ್ ಎಕ್ಕಾರು