Advertisement

ಬಾಕಿ ಇರುವ ಬಿಲ್ಲನ್ನು ಪಾವತಿಸುವಂತೆ ಸಕ್ಕರೆ ಕಾರ್ಖಾನೆಗಳಿಗೆ ಸಚಿವ ಎಂಟಿಬಿ ನಾಗರಾಜ್ ಸೂಚನೆ

08:13 PM May 18, 2021 | Team Udayavani |

ಬೆಂಗಳೂರು: ಪ್ರಸ್ತುತ ಇಡೀ ದೇಶವನ್ನೆ ಕಾಡುತ್ತಿರುವ ಕೋವಿಡ್-19 ಎರಡನೇ ಅಲೆಯಿಂದಾಗಿ ಕಬ್ಬು ಬೆಳೆಗಾರ ರೈತರು ಆರ್ಥಿಕ ಸಂಕಷ್ಟದಲ್ಲಿದ್ದು, ಇಂತಹ ಪರಿಸ್ಥಿತಿಯಲ್ಲಿ ಕಬ್ಬು ಬಿಲ್ಲು ಬಾಕಿ ಉಳಿಸಿಕೊಳ್ಳುವುದು ಸರಿಯಲ್ಲ ಇದನ್ನು ಮನಗಂಡು ಸಕ್ಕರೆ ಕಾರ್ಖಾನೆಗಳ ಮಾಲೀಕರು ಬಾಕಿ ಉಳಿಸಿಕೊಂಡಿರುವ ಕಬ್ಬಿನ ಬಿಲ್ಲನ್ನು ತಕ್ಷಣ ಪಾವತಿಸಲು ಕ್ರಮ ಕೈಗೊಳ್ಳಬೇಕು.

Advertisement

ಕಾರ್ಖಾನೆಗಳು ಬಾಕಿ ಪಾವತಿಸಲು ವಿಫಲವಾದಲ್ಲಿ ಕಬ್ಬು (ನಿಯಂತ್ರಣ) ಕಾಯ್ದೆಯನ್ವಯ ವಸೂಲಾತಿ ಕ್ರಮಗಳನ್ನು ಜರುಗಿಸಲಾಗುವುದು ಎಂದು ಪೌರಾಡಳಿತ ಮತ್ತು ಸಕ್ಕರೆ ಸಚಿವ ಎಂಟಿಬಿ ನಾಗರಾಜ್ ತಿಳಿಸಿದ್ದಾರೆ.

ರಾಜ್ಯದಲ್ಲಿ 2020-21 ನೇ ಸಾಲಿನ ಕಬ್ಬು ಅರೆಯುವ ಹಂಗಾಮಿನಲ್ಲಿ 64 ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿದ್ದು, ಈ ಕಾರ್ಖಾನೆಗಳು 30-04-2021 ರಲ್ಲಿದ್ದಂತೆ 440.84 ಲಕ್ಷ ಮೆಟ್ರಿಕ್ ಟನ್ ಕಬ್ಬು ಅರೆದು, 42.94 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದಿಸಿರುತ್ತವೆ. ಈ ಅವಧಿಗೆ ಕಾರ್ಖಾನೆಗಳು ರೂ 13348.10 ಕೋಟಿಗಳಷ್ಟು ಕಬ್ಬಿನ ಬಿಲ್ಲನ್ನು ರೈತರಿಗೆ ಪಾವತಿಸಬೇಕಾಗಿದ್ದು, ಈ ಪೈಕಿ ರೂ 12058.17 ಕೋಟಿಗಳಷ್ಟು ಕಬ್ಬಿನ ಬಿಲ್ಲನ್ನು ಪಾವತಿಸಿರುತ್ತವೆ. ಬಾಕಿ ಮೊತ್ತ ರೂ 1324.49 ಕೋಟಿಗಳಷ್ಟು ಇರುತ್ತದೆ. ಅಂದರೆ ಪಾವತಿ ಪ್ರಮಾಣ ಶೇ 90 ರಷ್ಟು ಮತ್ತು ಬಾಕಿ ಪ್ರಮಾಣ ಶೇ 10 ರಷ್ಟಿರುತ್ತದೆ. ಪ್ರಸ್ತುತ ಕಬ್ಬು ಅರೆಯುವ ಹಂಗಾಮು ಬರುವ ಜೂನ್ ತಿಂಗಳವರೆಗೆ ಚಾಲನೆಯಲ್ಲಿರುತ್ತದೆ ಎಂದು ಸಚಿವ ಎಂಟಿಬಿ ನಾಗರಾಜು ಮಾಹಿತಿ ನೀಡಿದರು.

ಇದನ್ನೂ ಓದಿ :ತನಗೆಂದು ತಂದ ಊಟವನ್ನು ಭಿಕ್ಷೆ ಬೇಡುತ್ತಿದ್ದ ಮಕ್ಕಳಿಗೆ ನೀಡಿ ಮಾನವೀಯತೆ ಮೆರೆದ ಕಾನ್ಸ್ಟೇಬಲ್

ಕಬ್ಬಿನ ಬಿಲ್ಲನ್ನು ಪಾವತಿ ಮಾಡದೆ ಇರುವ ಎಲ್ಲಾ ಕಾರ್ಖಾನೆಗಳಿಗೆ ಕಬ್ಬು ಬಿಲ್ಲು ಪಾವತಿಸುವಂತೆ ಸೂಚಿಸಿ ಈಗಾಗಲೇ ಶಾಸನಬದ್ದ ನೋಟೀಸ್‍ಗಳನ್ನು ಜಾರಿಗೊಳಿಸಲಾಗಿದೆ. ಇದಲ್ಲದೆ ರೈತರ ಕಬ್ಬು ಬಿಲ್ಲು ವಸೂಲಾತಿಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಕಾರ್ಖಾನೆಗಳು ಬಾಕಿ ಪಾವತಿಸದೆ ಇದ್ದಲ್ಲಿ ಸೂಕ್ತ ಕಾನೂನು ಕ್ರಮಗಳನ್ನು ಜರುಗಿಸುವಂತೆ ತಿಳಿಸಿ ಜಿಲ್ಲಾಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿದೆ ಎಂದು ತಿಳಿಸಿದರು.

Advertisement

ಕಾರ್ಖಾನೆಗಳು ರೈತರಿಗೆ ಪಾವತಿಸಬೇಕಾದ ಹಳೆಯ ಬಾಕಿ ರೂ 28.38 ಕೋಟಿ ಗಳಷ್ಟಿರುತ್ತದೆ. ಈ ಪೈಕಿ 2015-16 ನೇ ಸಾಲಿನ ರೂ 11.37 ಕೋಟಿ, 2018-19 ನೇ ಸಾಲಿನ 11.20 ಕೋಟಿ ಹಾಗೂ 2019-20 ನೇ ಸಾಲಿನ ರೂ 5.80 ಕೋಟಿ ಬಾಕಿ ಒಳಗೊಂಡಿರುತ್ತದೆ. ಬಾಕಿ ಉಳಿಸಿಕೊಂಡಿರುವ ಈ ಕಾರ್ಖಾನೆಗಳು ನಿಷ್ಕ್ರಿಯೆಯಾಗಿರುತ್ತವೆ. ಆದ್ದರಿಂದ ಈ ಕಾರ್ಖಾನೆಗಳಿಗೆ ಸೇರಿದ ಚರ ಮತ್ತು ಸ್ಥಿರಾಸ್ತಿಗಳನ್ನು ಹರಾಜು ಪ್ರಕ್ರಿಯೆಗೆ ಒಳಪಡಿಸಿ ವಸೂಲಾತಿ ಕ್ರಮ ಜರುಗಿಸಲು ಸಂಬಂದಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದ್ದು, ಅದರಂತೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next