Advertisement

ಎಲ್ಲರಲ್ಲೂ ಢವ ಢವ

03:05 AM Jul 15, 2019 | Sriram |

ಬೆಂಗಳೂರು: ರಾಜ್ಯ ರಾಜಕಾರಣ ಕ್ಲೈಮ್ಯಾಕ್ಸ್‌ ಹಂತಕ್ಕೆ ಬಂದಿದ್ದು, ಸೋಮವಾರ ಮತ್ತು ಮಂಗಳವಾರ ದೊಡ್ಡ ಮಟ್ಟದ ಹೈಡ್ರಾಮಾಗಳು ಸೃಷ್ಟಿಯಾಗುವ ಲಕ್ಷಣಗಳು ಗೋಚರಿಸಿವೆ.

Advertisement

ಒಂದೆಡೆ ಅತೃಪ್ತ ಶಾಸಕರನ್ನು ಮನವೊಲಿಕೆ ಮಾಡುವ ದೋಸ್ತಿ ನಾಯಕರ ಯತ್ನಗಳು ವಿಫ‌ಲವಾಗುತ್ತಿದ್ದರೆ, ಮತ್ತೂಂದೆಡೆ ಬಿಜೆಪಿ, ಒಂದೊಂದೇ ಮೇಲುಗೈ ಸಾಧಿಸುತ್ತಿದೆ. ಶನಿವಾರವಷ್ಟೇ ದೋಸ್ತಿ ನಾಯಕರ ಸಂಧಾನಕ್ಕೆ ಬಗ್ಗಿದಂತೆ ತೋರಿದ್ದ ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್‌, ಭಾನುವಾರ ಬೆಳಗ್ಗೆ ಕೈ ಕೊಟ್ಟು ಮುಂಬೈಗೆ ಹಾರಿ ಅತೃಪ್ತರ ಜತೆಗೆ ಸೇರಿಕೊಂಡಿದ್ದಾರೆ. ಇನ್ನು ಭಾನುವಾರ ಸಂಜೆ ರಾಮಲಿಂಗಾರೆಡ್ಡಿ ಅವರ ಫಾರ್ಮ್ಹೌಸ್‌ಗೆ ಸಿಎಂ ಕುಮಾರಸ್ವಾಮಿ, ಡಿಸಿಎಂ ಡಾ.ಜಿ.ಪರಮೇಶ್ವರ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕೈ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಸಚಿವ ಡಿ.ಕೆ.ಶಿವಕುಮಾರ್‌ ತೆರಳಿ ಮನವೊಲಿಕೆಗೆ ಯತ್ನಿಸಿದ್ದಾರೆ. ಆದರೆ, ರಾಮಲಿಂಗಾರೆಡ್ಡಿ ಅವರು ಈ ನಾಯಕರ ಸಂಧಾನಕ್ಕೆ ಏನೂ ಹೇಳಿಲ್ಲ ಎನ್ನಲಾಗಿದೆ.

ಮುಂಬೈಗೆ ಹಾರಿದ ಎಂಟಿಬಿ: ಶನಿವಾರದ ಸಂಧಾನದ ಬಳಿಕ ಕಾಂಗ್ರೆಸ್‌ ನಾಯಕರಿಗೆ ಭಾನುವಾರ ಬೆಳಗ್ಗೆಯೇ ಎಂ.ಟಿ.ಬಿ.ನಾಗರಾಜ್‌ ದೊಡ್ಡ ಶಾಕ್‌ ನೀಡಿದರು. ವಿಚಿತ್ರವೆಂದರೆ, ಸಾಧ್ಯವಾದರೆ ಸುಧಾಕರ್‌ ಅವರನ್ನೂ ವಾಪಸ್‌ ಕರೆತರುವುದಾಗಿ ಹೇಳಿದ್ದ ನಾಗರಾಜ್‌, ಭಾನುವಾರ ಬೆಳಗ್ಗೆ ಬಿಜೆಪಿ ನಾಯಕ ಆರ್‌.ಅಶೋಕ್‌ ಜತೆಗೆ ವಿಶೇಷ ವಿಮಾನದಲ್ಲಿ ಮುಂಬೈಗೆ ತೆರಳಿದರು. ಈ ಬೆಳವಣಿಗೆ ಮೈತ್ರಿ ಪಕ್ಷದ ಸಂಧಾನ ಪ್ರಯತ್ನಕ್ಕೆ ತೀವ್ರ ಹಿನ್ನಡೆ ಉಂಟು ಮಾಡಿತಲ್ಲದೇ, ವಿಶ್ವಾಸಮತ ಕೋರಲು ಸಿದ್ಧವಾಗಿರುವ ಸಿಎಂ ಕುಮಾರಸ್ವಾಮಿ ಅವರಿಗೂ ಬಹುದೊಡ್ಡ ಶಾಕ್‌ ನೀಡಿತು.

ಎಂಟಿಬಿ ನಾಗರಾಜ್‌ ಅವರ ಮನವೊಲಿಕೆಯಿಂದ ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್‌ ಕೂಡ ವಾಪಸ್‌ ಬರುತ್ತಾರೆ ಎಂಬ ಮೈತ್ರಿ ನಾಯಕರ ಲೆಕ್ಕಾಚಾರ ತಲೆಕೆಳಗಾಗಿದ್ದು, ವಿಶ್ವಾಸಮತ ಗಳಿಕೆಗೆ ಬೇಕಿರುವ ಸಂಖ್ಯಾಬಲ ಹೆಚ್ಚಿಸಿಕೊಳ್ಳಲು ಮತ್ತಷ್ಟು ಕಸರತ್ತು ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ.

ಮಿಂಚಿದ ಕಮಲ: ಇನ್ನೊಂದೆಡೆ ಶನಿವಾರ ಎಂಟಿಬಿ ನಾಗರಾಜ್‌ ಅವರ ಮನವೊಲಿಕೆ ಮಾಡಿ ಮೈತ್ರಿ ನಾಯಕರು ಯಶಸ್ವಿಯಾಗಿದ್ದಾರೆ ಎಂಬ ಸಂದೇಶದಿಂದ ಮಂಕಾಗಿದ್ದ ಕಮಲ ಪಾಳಯದಲ್ಲಿ ಭಾನುವಾರ ಬೆಳಗಾಗುವ ಹೊತ್ತಿಗೆ ಅದೇ ಎಂಟಿಬಿ ನಾಗರಾಜ್‌ ಅವರ ನಡೆಯಿಂದ ಮತ್ತೆ ಹುಮ್ಮಸ್ಸು ಬರುವಂತೆ ಮಾಡಿದೆ. ಎಂಟಿಬಿ ನಾಗರಾಜ್‌ ಬಿಜೆಪಿ ನಾಯಕ ಆರ್‌. ಅಶೋಕ್‌ರೊಂದಿಗೆ ಮುಂಬೈನಲ್ಲಿರುವ ಅತೃಪ್ತರನ್ನು ಸೇರಿಕೊಂಡಿರುವುದರಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಮತ್ತಷ್ಟು ಉತ್ಸಾಹದಲ್ಲಿ ಓಡಾಡಿದರು. ಅಲ್ಲದೇ ಪಕ್ಷದ ಶಾಸಕರು ಉಳಿದುಕೊಂಡಿರುವ ರೆಸಾರ್ಟ್‌ಗೆ ತೆರಳಿ ಮೈತ್ರಿ ಸರ್ಕಾರ ಪತನವಾಗುವುದು ಖಚಿತ. ಎಲ್ಲರೂ ಒಗ್ಗಟ್ಟಾಗಿರಿ ಎಂದು ಶಾಸಕರಿಗೆ ಭರವಸೆ ಮೂಡಿಸಿದ್ದಾರೆ.

Advertisement

ರಾಜೀನಾಮೆಗೆ ಎಚ್‌ಡಿಕೆ ಬಯಕೆ?: ಈ ಎಲ್ಲ ಬೆಳವಣಿಗೆಗಳ ನಡುವೆ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ದೇವೇಗೌಡರ ನಿವಾಸಕ್ಕೆ ತೆರಳಿ ಸುಮಾರು 3 ಗಂಟೆಗಳ ಕಾಲ ಸುದೀರ್ಘ‌ ಚರ್ಚೆ ನಡೆಸಿದರು. ಅಲ್ಲದೆ ಸದ್ಯದ ಬೆಳವಣಿಗೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ಕಾಂಗ್ರೆಸ್‌ ನಾಯಕರ ನಡವಳಿಕೆಯ ಬಗ್ಗೆಯೂ ಅಸಮಾಧಾನ ಹೊರಹಾಕಿದರು ಎನ್ನಲಾಗಿದೆ.

ಜತೆಗೆ, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತವನ್ನೂ ದೇವೇಗೌಡರ ಮುಂದೆ ವ್ಯಕ್ತಪಡಿಸಿದರು. ಆದರೆ, ಯಾವುದೇ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳುವುದು ಬೇಡ. ಮಂಗಳವಾರದ ಸುಪ್ರೀಂಕೋರ್ಟ್‌ನ ತೀರ್ಪು ಏನಾಗುತ್ತದೆ ಎಂದು ನೋಡಿ ಅದರ ಬಳಿಕ ಮುಂದಿನ ತೀರ್ಮಾನ ತೆಗೆದುಕೊಳ್ಳೋಣ. ಅಲ್ಲಿಯವರೆಗೆ ಸುಮ್ಮನಿರಿ ಎಂದು ದೇವೇಗೌಡರು ಸಿಎಂಗೆ ಸಲಹೆ ನೀಡಿದರು ಎನ್ನಲಾಗಿದೆ.

ರಾಮಲಿಂಗಾರೆಡ್ಡಿ ಮನವೊಲಿಕೆ ಯತ್ನ
ಸದ್ಯ ಮೈತ್ರಿ ಸರ್ಕಾರಕ್ಕೆ ಇರುವ ಒಂದೇ ಒಂದು ಆಶಾಕಿರಣ ರಾಮಲಿಂಗಾರೆಡ್ಡಿ ಅವರಾಗಿದ್ದು, ಇವರ ಮನವೊಲಿಕೆಗೆ ಕಾಂಗ್ರೆಸ್‌ ನಾಯಕರೆಲ್ಲರೂ ಯತ್ನಿಸಿದರು. ಬೆಳಗ್ಗೆಯೇ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಹಾಗೂ ಕೈ ಹಿರಿಯ ನಾಯಕ ಎಚ್.ಕೆ.ಪಾಟೀಲ್, ರಾಮಲಿಂಗಾರೆಡ್ಡಿ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದರು. ಭಾನುವಾರ ಸಂಜೆ ವೇಳೆಗೆ ಮತ್ತೆ ಸಿಎಂ ಕುಮಾರಸ್ವಾಮಿ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಎಲ್ಲರೂ ಜಂಟಿಯಾಗಿ ರಾಮಲಿಂಗಾರೆಡ್ಡಿ ಉಳಿದುಕೊಂಡಿದ್ದ ಫಾರ್ಮ್ಹೌಸ್‌ಗೇ ತೆರಳಿ ಅವರ ಮನವೊಲಿಕೆಗೆ ಕಸರತ್ತು ನಡೆಸಿದ್ದಾರೆ.

ಆದರೆ, ರಾಮಲಿಂಗಾರೆಡ್ಡಿ ಎಲ್ಲ ನಾಯಕರ ಮನವೊಲಿಕೆಯನ್ನು ಮೌನವಾಗಿಯೇ ಆಲಿಸಿ, ಸೋಮವಾರ ಸ್ಪೀಕರ್‌ ರಮೇಶ್‌ ಕುಮಾರ್‌ ಅವರ ವಿಚಾರಣೆಗೆ ಹಾಜರಾಗಿ ಮುಂದಿನ ತೀರ್ಮಾನ ತಿಳಿಸುವುದಾಗಿ ಹೇಳಿದ್ದಾರೆ ಎನ್ನಲಾಗಿದೆ. ಇನ್ನೂ ನನ್ನ ರಾಜೀನಾಮೆ ಅಂಗೀಕಾರ ಆಗಿಲ್ಲ. ಅಂಗೀಕಾರ ಆಗುವ ತನಕ ನಾನು ಶಾಸಕನೇ ಎಂದಿರುವ ಅವರು, ಪಕ್ಷ ಬಿಡಬಾರದು ಎಂದು ಕಾಂಗ್ರೆಸ್‌ ನಾಯಕರು ಒತ್ತಾಯ ಮಾಡಿದ್ದಾರೆ. ಆದರೆ, ನಾನು ಯಾವುದೇ ನಿರ್ಧಾರ ಮಾಡಿಲ್ಲ. ಸೋಮವಾರ ಸ್ಪೀಕರ್‌ ಮುಂದೆ ಹಾಜರಾದ ನಂತರ ಈ ಬಗ್ಗೆ ನಿರ್ಧರಿಸುತ್ತೇನೆ ಎಂದು ಹೇಳಿದ್ದಾರೆ. ರಾಜ್ಯ ಕಾಂಗ್ರೆಸ್‌ ಉಸ್ತುವಾರಿಗಳು ಇಲ್ಲಿಗೆ ಬರಬಾರದಿತ್ತು. ಕರೆದಿದ್ದರೆ ನಾನೇ ಹೋಗುತ್ತಿದ್ದೆ. ಸೋಮವಾರ ವಿಧಾನಸಭೆಗೆ ಹಾಜರಾಗುತ್ತೇನೆ. ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಿಲ್ಲ, ಜು.15ರ ವರೆಗೆ ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ ಎಂದು ಮಾಧ್ಯಮಗಳಿಗೆ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಮಾಯಾವತಿಗೆ ಎಚ್‌ಡಿಡಿ ಫೋನ್‌

ಈಗಾಗಲೇ ವಿಧಾನಸಭೆಯಲ್ಲಿ ಪ್ರತ್ಯೇಕ ಆಸನ ಕೋರಿ ಬಿಎಸ್ಪಿ ಶಾಸಕ ಎನ್‌.ಮಹೇಶ್‌ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ದೇವೇಗೌಡರು, ಮಾಯಾವತಿ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. ಸರ್ಕಾರ ವಿಶ್ವಾಸಮತ ಕೋರುವ ವೇಳೆ, ತಮಗೇ ಮತ ಹಾಕಲು ಸೂಚಿಸುವಂತೆ ಅವರು ಮಾಯಾವತಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಸಂದರ್ಭಾನುಸಾರ ಕ್ರಮ ಕೈಗೊಳ್ಳುವುದಾಗಿ ಮಾಯಾವತಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಇಂದು ಕೈ ಶಾಸಕಾಂಗ ಪಕ್ಷದ ಸಭೆ
ಅಧಿವೇಶನದಲ್ಲಿ ವಿಶ್ವಾಸ ಮತ ಯಾಚಿಸುವುದಾಗಿ ಸಿಎಂ ಘೋಷಣೆ ಮಾಡಿರುವುದರಿಂದ ಸೋಮವಾರದಿಂದ ಯಾವುದೇ ಶಾಸಕರು ಸದನಕ್ಕೆ ಗೈರು ಹಾಜರಾಗದಂತೆ ನೋಡಿಕೊಳ್ಳಲು ಕಾಂಗ್ರೆಸ್‌ ನಾಯಕರು ನಿರ್ಧರಿಸಿದ್ದಾರೆ. ಅದೇ ಕಾರಣಕ್ಕೆ ಸೋಮವಾರ ವಿಧಾನಸಭೆ ಕಲಾಪ ಆರಂಭಕ್ಕೂ ಮುನ್ನವೇ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಕಲಾಪ ನಡೆಯುವ ಸಂದರ್ಭದಲ್ಲಿ ಶಾಸಕರು ಅನಗತ್ಯವಾಗಿ ಹೊರಗಡೆ ತಿರುಗಾಡುವುದು, ಅನ್ಯ ಕಾರಣದ ನೆಪ ಹೇಳಿ ಸದನದಿಂದ ದೂರ ಉಳಿಯದಂತೆ ಸೂಚನೆ ನೀಡುವ ಸಾಧ್ಯತೆ ಇದೆ.

ಒಗ್ಗಟ್ಟು ಪ್ರದರ್ಶಿಸಿದ ಅತೃಪ್ತರು
ರಾಜ್ಯದಲ್ಲಿ ಮೂರೂ ಪಕ್ಷಗಳ ನಾಯಕರು ತಮ್ಮ ಕಸರತ್ತು ಮುಂದುವರೆಸಿದ್ದ ನಡುವೆಯೇ ಮುಂಬೈನಲ್ಲಿ ವಾಸ್ತವ್ಯ ಹೂಡಿರುವ ರಾಜೀನಾಮೆ ನೀಡಿರುವ ಶಾಸಕರು ಸಂಜೆ ಪತ್ರಿಕಾಗೋಷ್ಠಿ ನಡೆಸಿ, ಹನ್ನೆರಡು ಜನ ಶಾಸಕರು ಒಗ್ಗಟ್ಟಾಗಿದ್ದು,ತಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಹೇಳುವ ಮೂಲಕ ಮೈತ್ರಿ ಪಕ್ಷಗಳ ನಾಯಕರಿಗೆ ನಿರಾಸೆ ಮೂಡಿಸುವಂತೆ ಮಾಡಿದ್ದಾರೆ. ಜತೆಗೆ ಎಂ.ಟಿ.ಬಿ.ನಾಗರಾಜ್‌ ಅವರು, ಸಂಧಾನ ನಡೆಸಿ ನಮ್ಮನ್ನು ವಾಪಸ್‌ ಕರೆದುಕೊಂಡು ಹೋಗಲು ಬಂದಿಲ್ಲ. ಅವರೂ ಸರ್ಕಾರದ ವಿರುದ್ಧ ಅಸಮಾಧಾನಗೊಂಡು ಬಂದಿದ್ದಾರೆ ಎಂದು ಅತೃಪ್ತ ಶಾಸಕರು ಹೇಳಿದರು.

ಸಂಧಾನಕ್ಕೆ ಧುಮುಕಿದ
ಸಿಎಂ ಕುಮಾರಸ್ವಾಮಿ
ಇದುವರೆಗೆ ಕೈ ನಾಯಕರ ಸಂಧಾನ ಯತ್ನದಿಂದ ದೂರವೇ ಇದ್ದ ಸಿಎಂ ಕುಮಾರಸ್ವಾಮಿ, ಭಾನುವಾರ ನೇರವಾಗಿಯೇ ಸಂಧಾನಕ್ಕೆ ಇಳಿದರು. ಭಾನುವಾರ
ಸಂಜೆ ರಾಮಲಿಂಗಾರೆಡ್ಡಿ ಅವರ ನಿವಾಸಕ್ಕೆ ಕಾಂಗ್ರೆಸ್‌ ನಾಯಕರೊಂದಿಗೆ ಸಿಎಂ ಕೂಡ ಹೋಗಿ ಅವರ ಮನವೊಲಿಕೆ ಯತ್ನ ಮಾಡಿದರು. ಈಗಾಗಲೇ ವಿಶ್ವಾಸಮತಕ್ಕೆ ಸಿದ್ಧನಿರುವುದಾಗಿ ಹೇಳಿರುವ ಕುಮಾರಸ್ವಾಮಿ ಅವರು, ಏನಾದರೂ ಮಾಡಿ ಅತೃಪ್ತರನ್ನು ಮನವೊಲಿಕೆ ಮಾಡಲೇಬೇಕು ಎಂಬುದಾಗಿ ಪಣತೊಟ್ಟಿದ್ದಾರೆ. ಜತೆಗೆ ರಾಮಲಿಂಗಾರೆಡ್ಡಿ ಅವರೊಬ್ಬರು ಸಂಧಾನಕ್ಕೆ ಒಪ್ಪಿದರೆ ಬೆಂಗಳೂರಿನ ಶಾಸಕರನ್ನು ವಾಪಸ್‌ ಕರೆದುಕೊಂಡು ಬರಬಹುದು ಎಂಬ ಲೆಕ್ಕಾಚಾರ ಸಿಎಂ ಅವರದ್ದು.

Advertisement

Udayavani is now on Telegram. Click here to join our channel and stay updated with the latest news.

Next