ಮೈಸೂರು: ಮೂರು ರಾಜ್ಯದ ಗಡಿ ಭಾಗದಲ್ಲಿ ಉಪಟಳ ನೀಡುತ್ತಿದ್ದ ಎಂಟಿ-23 ಹುಲಿಯನ್ನು ತಮಿಳುನಾಡಿನ ಮಧುಮಲೈನಲ್ಲಿ ಸೆರೆ ಹಿಡಿದು ಮೈಸೂರಿನ ವನ್ಯಜೀವಿಗಳ ಪುನರ್ವಸತಿ ಕೇಂದ್ರಕ್ಕೆ ತರಲಾಗಿದೆ. ಕರ್ನಾಟಕ, ತಮಿಳುನಾಡು ಮತ್ತು ಕೇರಳ ಅರಣ್ಯ ಇಲಾಖೆಯವರ 21 ದಿನಗಳ ಸತತ ಕಾರ್ಯಾಚರಣೆ ನಡೆಸಿ ಶುಕ್ರವಾರ ಮಧುಮಲೈ ಅರಣ್ಯದ ಮಸಣಿಗುಡಿ ವ್ಯಾಪ್ತಿಯ ದಟ್ಟ ಕಾಡು ಕೂಟುಪಾರೈ ಪ್ರದೇಶದಲ್ಲಿ ಅರವಳಿಕೆ ನೀಡಿ 10 ವರ್ಷದ ಹುಲಿ ಸೆರೆ ಹಿಡಿಯಲಾಗಿತ್ತು.
ಬಳಿಕ ಹೆಚ್ಚುವರಿ ಚಿಕಿತ್ಸೆಗಾಗಿ ಶುಕ್ರವಾರ ರಾತ್ರಿ ಮೈಸೂರಿನ ಹೊರವಲಯದಲ್ಲಿರುವ ಕೂರ್ಗಳ್ಳಿಯ ಚಾಮುಂಡಿ ವನ್ಯಜೀವಿಗಳ ಪುನರ್ವಸತಿ ಕೇಂದ್ರಕ್ಕೆ ಕರೆತರಲಾಗಿದೆ. ಅರವಳಿಕೆಯಿಂದ ಪ್ರಜ್ಞೆ ತಪ್ಪಿದ್ದ ಹುಲಿ ಸದ್ಯಕ್ಕೆ ಚೇತರಿಸಿಕೊಂಡಿದ್ದು ಆಹಾರವನ್ನು ತಿನ್ನುತ್ತಿದೆ. ಹೊಟ್ಟೆಯ ಭಾಗದಲ್ಲಿ ಹುಣ್ಣು, ಕೆಲ ಗಾಯಗಳಾಗಿದ್ದು ಚಿಕಿತ್ಸೆ ನೀಡಲಾಗಿದೆ.
ಇದನ್ನೂ ಓದಿ:- ತೃಣಮೂಲ ಕಾಂಗ್ರೆಸ್ ಜೊತೆ ಮೈತ್ರಿಗೆ ಮುಂದಾದ ಗೋವಾ ಫಾರ್ವರ್ಡ್ ಪಾರ್ಟಿ
ಬೇರೊಂದು ಹುಲಿಯ ಜೊತೆ ಕಾದಾಡಿರುವುದರಿಂದ ದುರ್ಬಲಗೊಂಡು ಮಾನಷ್ಯ ಮತ್ತು ಜಾನುವಾರುಗಳ ಮೇಲೆ ದಾಳಿ ಮಾಡುತ್ತಿತ್ತು. ಸದ್ಯಕ್ಕೆ ಕ್ವಾರಂಟೈನ್‌ನಲ್ಲಿ ಇಟ್ಟು 3 ದಿನಗಳ ಕಾಲ ನಿಗಾ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಎಂಟಿ-23 ಟೈಗರ್? ಮೂರು ರಾಜ್ಯದ ಗಡಿಯಲ್ಲಿ ಉಪಟಳ ನೀಡಿ ನಾಲ್ಕು ಮಂದಿ ಮತ್ತು 30ಕ್ಕೂ ಜಾನುವಾರುಗಳನ್ನು ಬಲಿ ಪಡೆದಿದ್ದ ಹುಲಿಯನ್ನು ಸೆರೆ ಹಿಡಿಯುವ ಸಲುವಾಗಿ ಕರ್ನಾಟಕ, ತಮಿಳುನಾಡು ಮತ್ತು ಕೇರಳದ ಅರಣ್ಯ ಇಲಾಖೆ ಅಧಿಕಾರಿ ಮತ್ತು ನೌಕರರ ತಂಡ ನಡೆಸಿದ 21 ದಿನಗಳ ಕೂಬಿಂಗ್ ಕಾರ್ಯಾಚರಣೆಗೆ ಎಂಟಿ-23 (ಮಧುಮಲೈ ಟೈಗರ್-23) ಎಂದು ಹೆಸರಿಡಲಾಗಿತ್ತು. ಈ ಮೂಲಕ ಕಾರ್ಯಾಚರಣೆಯಲ್ಲಿ 21ನೇ ದಿನವಾದ ಶುಕ್ರವಾರ ಮಧುಮಲೈ ಅರಣ್ಯದ ಮಸಣಿಗುಡಿ ವ್ಯಾಪ್ತಿಯ ದಟ್ಟ ಕಾಡು ಕೂಟುಪಾರೈ ಪ್ರದೇಶದಲ್ಲಿ ಸೆರೆ ಸಿಕ್ಕಿದೆ.