Advertisement

ನಗರದ ಎಂಎಸ್‌ಎಂಇ ಕಾರ್ಯಾರಂಭಕ್ಕೂ ಆಗ್ರಹ

02:23 PM Apr 20, 2020 | mahesh |

ಬೆಂಗಳೂರು: ಲಾಕ್‌ಡೌನ್‌ ಅವಧಿಯಲ್ಲೂ ಏ.20ರ ಬಳಿಕ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಿಂದ ಹೊರಗಿರುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂಎಸ್‌ಎಂಇ) ಕಾರ್ಯಾರಂಭಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಅದರಂತೆ ನಡೆದರೆ ರಾಜ್ಯದಲ್ಲಿ ಕಾರ್ಯಾರಂಭವಾಗಬಹುದಾದ ಸೂಕ್ಷ್ಮ, ಸಣ್ಣ, ಮಧ್ಯಮ ಕೈಗಾರಿಕೆಗಳ (ಎಂಎಸ್‌ಎಂಇ) ಸಂಖ್ಯೆ ಶೇ.30ರಷ್ಟು ಮೀರುವುದಿಲ್ಲ. ರಾಜ್ಯದಲ್ಲಿನ ಬಹುಪಾಲು ಅಂದರೆ ಶೇ. 70 ಎಂಎಸ್‌ಎಂಇ ಇರುವುದು ಬೆಂಗಳೂರು ಸೇರಿ ಇತರೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ. ಈ ಕೈಗಾರಿಕೆಗಳ ಆರಂಭಕ್ಕೆ ಅವಕಾಶ ಸಿಗದ ಹೊರತು ಸಣ್ಣ ಕೈಗಾರಿಕೆಗಳಿಗೆ ಹೆಚ್ಚಿನ ಉಪಯೋಗವಾಗದು ಎಂಬುದು ಸಣ್ಣ ಕೈಗಾರಿಕೋದ್ಯಮಿಗಳ ಅಳಲು. ಈ ಮಧ್ಯೆ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ
ಬೆಂಗಳೂರು ಸೇರಿ ಇತರೆ ನಗರಗಳಲ್ಲಿ ಎಂಎಸ್‌ಎಂಇ ಕಾರ್ಯಾರಂಭಕ್ಕೆ ಅವಕಾಶ ನೀಡಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ರಾಜ್ಯದಲ್ಲಿ ಸುಮಾರು 6.50 ಲಕ್ಷ ಎಂಎಸ್‌ಎಂಇ ಕೈಗಾರಿಕೆಗಳಿವೆ. ಇದರಲ್ಲಿ 70 ಲಕ್ಷಕ್ಕೂ ಹೆಚ್ಚು ಮಂದಿ ಕಾರ್ಯ ನಿರ್ವಹಿಸುತ್ತಿದ್ದು, ಈ ಪೈಕಿ ಕುಶಲಕರ್ಮಿಗಳಲ್ಲದ ಕಾರ್ಮಿಕರೇ ಹೆಚ್ಚಾಗಿದ್ದಾರೆ. ದಿನಕ್ಕೆ 10,000 ಕೋಟಿ ರೂ.ಗಿಂತ ಹೆಚ್ಚು ವಹಿವಾಟು ನಡೆಸುವ ಎಂಎಸ್‌ಎಂಇ ಬೃಹತ್‌ ಕೈಗಾರಿಕೆಗಳಿಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿವೆ.

Advertisement

ಏ. 20ರಿಂದ ಕೆಲವೆಡೆ ಕಾರ್ಯಾರಂಭ: ಲಾಕ್‌ ಡೌನ್‌ ಮೇ 3ರವರೆಗೆ ಇದ್ದರೂ ಏ. 20ರಿಂದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಿಂದ ಹೊರಗಿರುವ ಎಂಎಸ್‌ಎಂಇಗಳ ಕಾರ್ಯಾರಂಭಕ್ಕೆ ಅವಕಾಶ ನೀಡಲಾಗುವುದು ಎಂದು ಕೇಂದ್ರ ಪ್ರಕಟಿ ಸಿದೆ. ಈ ಮಾರ್ಗಸೂಚಿ ಅನ್ವಯ ರಾಜ್ಯದಲ್ಲಿ ಕಾರ್ಯಾರಂಭವಾಗುವ ಕೈಗಾರಿಕೆಗಳ ಪ್ರಮಾಣ ಶೇ.30 . ರಾಜ್ಯದಲ್ಲಿನ ಒಟ್ಟು ಎಂಎಸ್‌ಎಂಇ ಪೈಕಿ ಶೇ.50ರಿಂದ ಶೇ. 60 ಕೈಗಾರಿಕೆ ಬಿಬಿಎಂಪಿ ವ್ಯಾಪ್ತಿಯಲ್ಲಿವೆ. ಶೇ.10 ಕೈಗಾರಿಕೆ ಬೆಂಗಳೂರು ನಗರ/ ಗ್ರಾಮಾಂತರ ಜಿಲ್ಲೆಯಲ್ಲಿವೆ. ಉಳಿದವು ಕೆಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿವೆ. ಹೀಗಾಗಿ ಶೇ.70 ಎಂಎಸ್‌ಎಂಇಗಳು ಕಾರ್ಯಾರಂಭವಾಗಲು ಅವಕಾಶವಿಲ್ಲ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಆರ್‌.ರಾಜು “ಉದಯವಾಣಿ’ಗೆ ತಿಳಿಸಿದರು. ಕಚ್ಚಾ ಸಾಮಗ್ರಿ ಸಾಗಟಕ್ಕೂ ವ್ಯವಸ್ಥೆ ಕಲ್ಪಿಸಬೇಕು. ಕಾರ್ಮಿಕರು ಕೈಗಾರಿಕೆಗಳಿಗೆ ಮರಳಲು ವ್ಯವಸ್ಥೆಯಾಗಬೇಕು. ಜತೆಗೆ ಸರ್ಕಾರಿ, ಖಾಸಗಿ ಕೈಗಾರಿಕಾ ವಸಾಹತುಗಳಲ್ಲಿ ಕೈಗಾರಿಕೆಗಳ ಕಾರ್ಯಾರಂಭಕ್ಕೆ ಅವಕಾಶ ನೀಡಿದರೆ ಅನುಕೂಲವಾಗಬಹುದು ಎಂದು ಅಭಿಪ್ರಾಯಪಟ್ಟರು.

ಗುರುತಿನ ಚೀಟಿ: ಎಂಎಸ್‌ಎಂಇ ಕಾರ್ಯಾರಂಭವಾದರೆ ಕಾರ್ಮಿಕರು ಪಾಸ್‌ ಪಡೆಯುವುದನ್ನು ಕಡ್ಡಾಯ ಮಾಡಬಾರದು. 2020-21ನೇ ಸಾಲಿಗೆ ಸಂಬಂಧಪಟ್ಟಂತೆ ಆಸ್ತಿ ತೆರಿಗೆ ವಿನಾಯ್ತಿ
ಕೊಡಬೇಕು. ಲಭ್ಯವಿ ರುವ ಕಚ್ಚಾ ಸಾಮಗ್ರಿ ಪೂರೈಕೆಗೆ ವ್ಯವಸ್ಥೆ  ಮಾಡಬೇಕೆಂದರು.

ಹಂತ ಹಂತವಾಗಿ ಅವಕಾಶಕ್ಕೆ ಚಿಂತನೆ
ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆಯೇ ಏ.20ರ ಬಳಿಕ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಿಂದ ಹೊರಗಿರುವ ಎಂಎಸ್‌ಎಂಇ ಕಾರ್ಯಾರಂಭಕ್ಕೆ ಅವಕಾಶ ನೀಡಲಾಗುವುದು. ಈ ನಡುವೆ ಉದ್ದಿಮೆದಾರರ ಮನವಿಯಂತೆ ಬೆಂಗಳೂರು ಸೇರಿದಂತೆ ಇತರೆಡೆ ಸರ್ಕಾರಿ/ ಖಾಸಗಿ ಕೈಗಾರಿಕಾ ಪ್ರದೇಶದಲ್ಲಿ ಕೋವಿಡ್ ಸ್ಥಿತಿಗತಿ ಅವಲೋಕಿಸಲಾಗುವುದು. ಅಂತಿಮವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿ ಮಿತಿಯೊಳಗೆ ಕ್ರಮ ವಹಿಸಲಾಗುವುದು ಎಂದು ಎಂಎಸ್‌ಎಂಇ ನಿರ್ದೇಶನಾಲಯದ ಆಯುಕ್ತೆ ಗುಂಜನ್‌ ಕೃಷ್ಣ ತಿಳಿಸಿದರು.

ಎಂಎಸ್‌ಎಂಇ ಹಿತರಕ್ಷಣೆಗೆ ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್‌ ಘೋಷಿಸಲಿದೆ ಎಂಬ ನಿರೀಕ್ಷೆಯೂ ಹುಸಿಯಾಗಿದೆ. ಈಗಾಗಲೇ ಎಂಎಸ್‌ಎಂಇ ಕ್ಷೇತ್ರ ವಿನಾಶದಂಚಿಗೆ ತಲುಪಿದೆ.
● ಆರ್‌. ರಾಜು, ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ

Advertisement

ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಿಂದ ಹೊರಗಿರುವ ಎಂಎಸ್‌ಎಂಇಗಳಜತೆಗೆ ಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಎಂಎಸ್‌ಎಂಇಗಳ
ಕಾರ್ಯಾರಂಭಕ್ಕೂ ಅವಕಾಶ ನೀಡಿದರೆ  ಉಪಯುಕ್ತ. ಪಾಸ್‌ ವಿತರಣೆಯಲ್ಲಿ ಪೊಲೀಸರ ಕಿರುಕುಳ ತಪ್ಪಿಸಬೇಕು.
● ಸಿ.ಆರ್‌.ಜನಾರ್ದನ್‌, ಎಫ್‌ಕೆಸಿಸಿಐ ಅಧ್ಯಕ್ಷ

● ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next