ಯಕ್ಷಗಾನ ಅರ್ಥದಾರಿ ಕುಕ್ಕೆಹಳ್ಳಿ ಬೈಲುಬೀಡು ಮಹಾಬಲ ಶೆಟ್ಟಿ ಸಂಸ್ಮರಣಾ ಪ್ರಶಸ್ತಿಗೆ ಈ ಬಾರಿ ನಡುತಿಟ್ಟಿನ ಹಾರಾಡಿ ಶೈಲಿಯ ಹಿರಿಯ ಕಲಾವಿದ ಗಾವಳಿ ಶೀನ ಕುಲಾಲರು ಆಯ್ಕೆಯಾಗಿದ್ದಾರೆ.ಪ್ರಶಸ್ತಿ ಪ್ರದಾನ ನ.30ರಂದು ಆದಿ ಉಡುಪಿಯಲ್ಲಿ ಪೆರ್ಡೂರು ಮೇಳದ ವೇದಿಕೆಯಲ್ಲಿ ನೆರವೇರಲಿದೆ.ಬಳಿಕ ಪೆರ್ಡೂರು ಮೇಳದವರಿಂದ ಮಾನಸಗಂಗಾ ಎಂಬ ಪ್ರಸಂಗದ ಪ್ರದರ್ಶನವಿದೆ.
ಎರಡನೇ ವೇಷದಾರಿಗಳಿಗೆ ಬೇಕಾದ ನೀಳವಾದ ಆಳಂಗ, ಬಹುದೂರ ಕೇಳಿಸುವ ಕಂಠ, ಗಂಭೀರವಾದ ನಿಲುವು, ಸಾಂಪ್ರದಾಯಿಕವಾದ ಪಾತ್ರಗಳ ಕಟ್ಟೋಣದಿಂದ ಬಹುಬೇಗ ಪ್ರಧಾನ ವೇಷಧಾರಿಯಾಗಿ ಗುರುತಿಸಲ್ಪಟ್ಟವರು ಗಾವಳಿ ಶೀನ ಕುಲಾಲರು.
ಇವರಿಗೀಗ ಎಪ್ಪತ್ತರ ಹರೆಯ.ಎರಡನೇ ತರಗತಿ ವಿದ್ಯಾಭ್ಯಾಸಕ್ಕೆ ಓದು ನಿಲ್ಲಿಸಿದ ಅವರು ಪರಿಶ್ರಮದಿಂದ ಕಲಾವಿದನಾಗಿ ಬೆಳೆದವರು.ಗಾವಳಿ ಚಂದಯ್ಯ ಶೆಟ್ಟಿ,ಬಾಬು ಕುಲಾಲ್.ಮತ್ತು ಬಸವ ಕುಲಾಲರಿಂದ ವ್ಯವಸ್ಥಿತವಾದ ರಂಗವಿದ್ಯೆಯನ್ನು ಕರಗತಮಾಡಿಕೊಂದ ಇವರು ಮಜ್ಜಿಗೆಬೈಲು ಚಂದಯ್ಯಶೆಟ್ಟರಿಂದ ಮಾತುಗಾರಿಕೆ ಕಲಿತರು. ಮಾರಣಕಟ್ಟೆ ಮೇಳದಲ್ಲಿ ಒಡ್ಡೋಲಗ ವೇಷದಾರಿಯಾಗಿ ಗೆಜ್ಜೆ ಕಟ್ಟಿದರು.ಬಳಿಕ ಕಮಲಶಿಲೆ, ಸೌಕೂರು, ಸಾಲಿಗ್ರಾಮ,ಅಮೃತೇಶ್ವರಿ ಮೇಳಗಳಲ್ಲಿ ಸೇವೆ ಸಲ್ಲಿಸಿ ಒತ್ತು ಎರಡನೇ ವೇಷದಾರಿಯಾಗಿ ಮಂದಾರ್ತಿ ಮೇಳಕ್ಕೆ ಸೇರ್ಪಡೆಯಾದರು.ಬಳಿಕ ಪೂರ್ಣ ಪ್ರಮಾಣದ ಎರಡನೇ ವೇಷದಾರಿಯಾಗಿ ಹಾಲಾಡಿ,ಕಳುವಾಡಿ ಮುಂತಾದ ಮೇಳಗಳಲ್ಲಿ ಸೇವೆ ಸಲ್ಲಿಸಿದರು. ಮುಂಡಾಸು ವೇಷದಾರಿಯಾಗಿ ಬಯಲಾಟ ರಂಗಸ್ಥಳಕ್ಕೆ ಅನುಪಮ ಸೇವೆ ಸಲ್ಲಿಸಿದ ಇವರ ರಾಮಾಂಜನೇಯದ ಶಕುಂತಕ, ಕೃಷ್ಣಾರ್ಜುನದ ಗಯಗಂಧರ್ವ,ಕೋಟೆಕರ್ಣ, ವೃಷಕೇತು,ಪ್ರದ್ಯುಮ್ನ, ಲೋಹಿತನೇತ್ರ, ವಿದ್ಯುನ್ಮಾಲಿ ಮುಂತಾದ ಕೆಂಪು ಮತ್ತು ಕಪ್ಪು ಮುಂಡಾಸುಗಳು ನಡುತಿಟ್ಟಿಗೆ ಅವರ ಅಪೂರ್ವವಾದ ಕೊಡುಗೆಗಳು.ಎರಡನೇ ವೇಷಗಳಾದ ಕರ್ಣ, ಜಾಂಬವ, ಭೀಷ್ಮ, ರಾವಣ, ವೀರಮಣಿ, ಶನೀಶ್ವರ ಪಾರ್ಟು ವೇಷಗಳಾದ ಕಂಸ, ಕಾಲನೇಮಿ, ಶುಂಭಾಸುರ ಮುಂತಾದ ವೇಷಗಳು ಜನಮನ್ನಣೆಗೆ ಪಾತ್ರವಾಗಿವೆ.
– ಪ್ರೊ| ಎಸ್.ವಿ.ಉದಯ ಕುಮಾರ ಶೆಟ್ಟಿ