ಸುರತ್ಕಲ್: ಎಂಎಸ್‌ಇಝಡ್ ಒಳಗಿನ ಮೀನು ಸಂಸ್ಕರಣ ಕಂಪೆನಿಯ ಬಾಯ್ಲರ್ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡು ಪೂರ್ತಿ ಕಂಪೆನಿಯನ್ನೇ ಆಹುತಿ ತೆಗೆದುಕೊಂಡ ಘಟನೆ ರವಿವಾರ ಮಧ್ಯಾಹ್ನ ಸಂಭವಿಸಿದ್ದು, ಕೋಟ್ಯಂತರ ರೂ.ನಷ್ಟ ಅಂದಾಜಿಸಲಾಗಿದೆ. ರವಿವಾರ ಕಾರ್ಮಿಕರಿಗೆ ರಜೆ ಇದ್ದುದರಿಂದ ಸಂಭವನೀಯ ದೊಡ್ಡ ದುರಂತ ತಪ್ಪಿದೆ.
ಅತೆಂಟಿಕ್ ಓಶಿಯನ್ ಟ್ರೆಷನ್ ಹೆಸರಿನ ಕಂಪೆನಿಯಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಎಂಎಸ್‌ಇಝಡ್, ಎಂಆರ್‌ಪಿಎಲ್, ಕದ್ರಿ, ಪಾಂಡೇಶ್ವರ, ಎನ್‌ಎಂಪಿಎ ಸಹಿತ ವಿವಿಧ ಅಗ್ನಿ ಶಾಮಕ ತಂಡಗಳು ಸಿಬಂದಿ ಬೆಂಕಿ ನಂದಿಸಲು ಶ್ರಮಿಸಿದರು.
ಮೀನು ಸಂಸ್ಕರಣೆ ಘಟಕ ಆಗಿದ್ದರಿಂದ ಭಾರೀ ಪ್ರಮಾಣದಲ್ಲಿ ಫರ್ನೆಸ್ ಜಿಡ್ಡು, ಮೀನು ಜಿಡ್ಡು ಮುಂತಾದ ಬೇಗನೆ ಬೆಂಕಿ ಹತ್ತಿಕೊಳ್ಳಬಹುದಾದ ವಸ್ತುಗಳು ಇದ್ದುದರಿಂದ ಭಾರೀ ಪ್ರಮಾಣದಲ್ಲಿ ಅಗ್ನಿ ವ್ಯಾಪಿಸಿತು.
ವ್ಯಾಪಿಸಿದ ದಟ್ಟ ಹೊಗೆ
ದಟ್ಟ ಕಪ್ಪು ಹೊಗೆ ದೂರದ ಬಜಪೆ, ಜೋಕಟ್ಟೆ ಸಹಿತ ಗ್ರಾಮಗಳ ಕಂಡು ಬಂದು ನಿವಾಸಿಗಳು ಆತಂಕಗೊಂಡರು. ಸತತ ಐದಾರು ಗಂಟೆಗಳ ಗಂಟೆ ಕಾಲ ಅಗ್ನಿಶಾಮಕ ದಳ ಶ್ರಮಿಸಿ ಬೆಂಕಿಯನ್ನು ತಹಬಂದಿಗೆ ತರುವಲ್ಲಿ ಯಶಸ್ವಿಯಾಯಿತು.
ದುರಂತಕ್ಕೆ ಕಾರಣ ಏನು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.