– ಝಾರ್ಖಂಡ್ ವಿರುದ್ಧ ರಾಜ್ಯಕ್ಕೆ 5 ರನ್ ರೋಚಕ ಜಯ
– ಫಲ ಕೊಡದ ಎಂಎಸ್ ಧೋನಿ, ಸೌರಭ್ ತಿವಾರಿ ಬ್ಯಾಟಿಂಗ್
– ಶುಕ್ಲ, ಮೋನು ಕುಮಾರ್ ಕೊನೆ ಕ್ಷಣದ ಹೋರಾಟ ವ್ಯರ್ಥ
ಕೋಲ್ಕತಾ: ಬಹು ಸಮಯದ ಬಳಿಕ ವಿಜಯ್ ಹಜಾರೆ ಏಕದಿನ ಟ್ರೋಫಿಯಲ್ಲಿ ಝಾರ್ಖಂಡ್ ತಂಡವನ್ನು ಮುನ್ನಡೆಸಿದ ಎಂ.ಎಸ್. ಧೋನಿ ಅವರಿಗೆ ಸೋಲಿನ ಸ್ವಾಗತ ದೊರಕಿದೆ.
ಕರ್ನಾಟಕ ವಿರುದ್ಧದ ಮೊದಲ ಪಂದ್ಯದಲ್ಲಿ ಝಾರ್ಖಂಡ್ 5 ರನ್ನುಗಳ ರೋಚಕ ಸೋಲು ಅನುಭವಿಸಿದೆ. ಶನಿವಾರ ಈಡನ್ ಗಾರ್ಡನ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ 49.4 ಓವರ್‌ನಲ್ಲಿ 266 ರನ್ನಿಗೆ ಆಲೌಟಾಯಿತು. ಈ ಸ್ಪರ್ಧಾತ್ಮಕ ಮೊತ್ತ ಬೆನ್ನುಹತ್ತಿದ ಝಾರ್ಖಂಡ್ 49.5 ಓವರ್‌ನಲ್ಲಿ 261 ರನ್ನಿಗೆ ಎಲ್ಲ ವಿಕೆಟ್ ಕಳೆದುಕೊಂಡು ನಿರಾಸೆ ಅನುಭವಿಸಿತು.
ರಾಜ್ಯದ ಬಿಗು ಬೌಲಿಂಗ್ ದಾಳಿ: ಕರ್ನಾಟಕದ ಬಿಗು ದಾಳಿಯಿಂದಾಗಿ ಝಾರ್ಖಂಡ್ ಇನ್ನಿಂಗ್ಸ್ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತ ಸಾಗಿತು. ಸೌರಭ್ ತಿವಾರಿ (68) ಅರ್ಧ ಶತಕ ದಾಖಲಿಸಿದರೆ, ಧೋನಿ 43 ರನ್ ಬಾರಿಸಿದರು. ಒಂದು ಹಂತದಲ್ಲಿ ಝಾರ್ಖಂಡ್ 233ಕ್ಕೆ 9 ವಿಕೆಟ್ ಕಳೆದುಕೊಂಡು ಸುಲಭ ಸೋಲು ಕಾಣುವ ಹಂತದಲ್ಲಿತ್ತು. ಈ ಸಂದರ್ಭದಲ್ಲಿ ಜತೆಯಾದ ರಾಹುಲ್ ಶುಲ್ಲ (24), ಮೋನು ಕುಮಾರ್ (ಅಜೇಯ 17) ಭರ್ಜರಿ ಹೋರಾಟ ನೀಡಿದರು. ಇನ್ನೇನು ಪಂದ್ಯ ಗೆಲ್ಲಿಸಿಯೇ ಬಿಟ್ಟರು ಅನ್ನುವ ಹಂತದಲ್ಲಿ ಪ್ರಸಿದ್ಧ್ ಬೌಲಿಂಗ್‌ಗೆ ಶುಕ್ಲ ವಿಕೆಟ್ ಕಳೆದುಕೊಂಡರು. ಕರ್ನಾಟಕ ಪರ ಕೆ.ಗೌತಮ್ 4 ವಿಕೆಟ್ ಕಬಳಿಸಿದರು.
ಕರ್ನಾಟಕಕ್ಕೆ ಪಾಂಡೆ, ಸಮರ್ಥ್ ಆಸರೆ: ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ 51 ರನ್ ಸೇರಿಸುವಷ್ಟರಲ್ಲಿ ರಾಬಿನ್ ಉತ್ತಪ್ಪ ಮತ್ತು ಮಾಯಾಂಕ್ ಅಗರ್ವಾಲ್ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ಸಂದರ್ಭದಲ್ಲಿ ಜತೆಯಾದ ನಾಯಕ ಮನೀಶ್ ಪಾಂಡೆ ಮತ್ತು ಆರ್.ಸಮರ್ಥ್ ತಂಡದ ಮೊತ್ತವನ್ನು ಏರಿಸಿದರು. ಇವರಿಬ್ಬರು ಮೂರನೇ ವಿಕೆಟಿಗೆ 166 ರನ್‌ಗಳ ಜತೆಯಾಟದಲ್ಲಿ ಪಾಲ್ಗೊಂಡರು. ಪಾಂಡೆ 6 ಬೌಂಡರಿ 2 ಸಿಕ್ಸರ್ ಸೇರಿದಂತೆ 77 ರನ್ ಬಾರಿಸಿ ಶುಕ್ಲಗೆ ವಿಕೆಟ್ ಒಪ್ಪಿಸಿದರೆ, ಆರ್.ಸಮರ್ಥ್ 71 ರನ್ ಬಾರಿಸಿ ಆನಂದ್ ಸಿಂಗ್‌ಗೆ ವಿಕೆಟ್ ಒಪ್ಪಿಸಿದರು.
ಪವನ್ ದೇಶಪಾಂಡೆ (36) ಅಲ್ಪ ಕಾಣಿಕೆ ನೀಡಿದರು. ಉಳಿದಂತೆ ದೊಡ್ಡ ಮೊತ್ತ ಬಾರಿಸುವಲ್ಲಿ ಕರ್ನಾಟಕ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಝಾರ್ಖಂಡ್‌ನ ಚುರುಕಿನ ದಾಳಿಯಿಂದಾಗಿ ಇನ್ನು 2 ಎಸೆತ ಇರುವ ಮುನ್ನವೇ ಕರ್ನಾಟಕ ಆಲೌಟ್ ಆಗಿತು. ಜಾರ್ಖಂಡ್ ಪರ ರಾಹುಲ್ ಶುಕ್ಲ 4 ವಿಕೆಟ್ ಪಡೆದರೆ, ಆನಂದ್ ಸಿಂಗ್, ಮೋನು ಕುಮಾರ್, ವರುಣ್ ಏರಾನ್ ತಲಾ 2 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್:
ಕರ್ನಾಟಕ 49.4 ಓವರ್‌ಗಳಲ್ಲಿ 266 (ಮನೀಶ್ ಪಾಂಡೆ 77, ಆರ್.ಸಮರ್ಥ್ 71, ರಾಹುಲ್ ಶುಕ್ಲ 45ಕ್ಕೆ 4), ಝಾರ್ಖಂಡ್ 49.5 ಓವರ್‌ಗಳಲ್ಲಿ 261 (ಸೌರಭ್ ತಿವಾರಿ 68, ಧೋನಿ 43, ಕೆ.ಗೌತಮ್ 58ಕ್ಕೆ 4).