Advertisement

ಅಸೂಯೆಯಿಂದ ಧೋನಿಯನ್ನು ಟೀಕಿಸುತ್ತಿದ್ದಾರೆ: ರವಿಶಾಸ್ತ್ರಿ ವ್ಯಂಗ್ಯ

07:00 AM Nov 11, 2017 | |

ಕೋಲ್ಕತಾ: ಇತ್ತೀಚೆಗೆ ನ್ಯೂಜಿಲೆಂಡ್‌ ವಿರುದ್ಧ ಟಿ20ಯಲ್ಲಿ ಧೋನಿ ವಿಫ‌ಲರಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಇದರ ಬೆನ್ನಲ್ಲೇ ಧೋನಿಯನ್ನು ಸಮರ್ಥಿಸಿಕೊಂಡು ನಾಯಕ ಕೊಹ್ಲಿ ಮಾತನಾಡಿದ್ದರು. ಆದರೆ ಟಿ20 ಮಾದರಿಯಿಂದ ಧೋನಿಯನ್ನು ಕೈಬಿಡಬೇಕೆಂಬ ಆಗ್ರಹ ಜೋರಾಗಿದೆ. ಇದಕ್ಕೆ ಅಷ್ಟೇ ಕಟು ಪ್ರತ್ಯುತ್ತರ ನೀಡಿರುವ ಭಾರತ ತಂಡದ ಕೋಚ್‌ ರವಿಶಾಸ್ತ್ರಿ, ಧೋನಿ ಟೀಕಾಕಾರರು ಅಸೂಯಾಪೀಡಿತರು ಎಂದು ವ್ಯಂಗ್ಯವಾಡಿದ್ದಾರೆ.

Advertisement

ಕೆಲವರು ಧೋನಿ ಕೆಟ್ಟ ಆಟವಾಡಲಿ ಎಂದು ಬಯಸುತ್ತಿದ್ದಾರೆ. ಅವರು ಧೋನಿಯ ವೃತ್ತಿ ಜೀವನವನ್ನು ಅಂತ್ಯಗೊಳಿಸಲು ಬಯಸುತ್ತಿದ್ದಾರೆ. ಆದರೆ ಧೋನಿಯಂತಹ ದಿಗ್ಗಜರು ತಮ್ಮ ಅಂತ್ಯವನ್ನು ತಾವೇ ನಿರ್ಧರಿಸುತ್ತಾರೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ.

ಧೋನಿ ವಿರುದ್ಧ ಯಾರು ಏನೇ ಹೇಳಲಿ ಅದು ನಮ್ಮಲ್ಲಿ ಯಾವುದೇ ವ್ಯತ್ಯಾಸ ಮಾಡುವುದಿಲ್ಲ. ಧೋನಿ ಸ್ಥಾನವೇನು ಎನ್ನುವುದು ನಮಗೆ ಗೊತ್ತಿದೆ. ಅವರು ತಂಡಕ್ಕೋಸ್ಕರ ಆಡುವ ವ್ಯಕ್ತಿ. ಹಿಂದೆ ಶ್ರೇಷ್ಠ ನಾಯಕರಾಗಿದ್ದರು. ಈಗ ತಂಡಕ್ಕೋಸ್ಕರ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ ಎಂದು ರವಿಶಾಸ್ತ್ರಿ ಮಾಜಿ ನಾಯಕನ ಬೆನ್ನಿಗೆ ಬಲವಾಗಿ ನಿಂತಿದ್ದಾರೆ.

ಕೆಲವೇ ಸಮಯದ ಹಿಂದೆ ನಾನೂ ಟಿವಿಯಲ್ಲಿ ಕಾಣಿಸಿಕೊಳ್ಳುತ್ತಿದ್ದೆ. ಜನ ನನಗೆ ಪ್ರಶ್ನೆ ಕೇಳುತ್ತಿದ್ದರು. ಟೀವಿ ಕಾರ್ಯಕ್ರಮ ನಡೆಯಲು ಪ್ರಶ್ನೆಗಳಿಗೆ ಉತ್ತರಿಸಲೇಬೇಕು. ಧೋನಿ ಅಸಾಮಾನ್ಯ ಆಟಗಾರ. ನಮ್ಮ ಅತ್ಯದ್ಭುತ ಆಟಗಾರರಲ್ಲಿ ಒಬ್ಬರು. ಆದ್ದರಿಂದ ಅವರು ಯಾವಾಗಲೂ ಟೀವಿ ಕಾರ್ಯಕ್ರಮಗಳಲ್ಲಿ ಮುಖ್ಯ ಚರ್ಚಾ ವಿಷಯವಾಗಿರುತ್ತಾರೆ. ಅವರು ದಂತಕಥೆ ಎಂಬ ಕಾರಣಕ್ಕೆ ಅಂತಹ ಪ್ರಾಮುಖ್ಯತೆ ಬಂದಿದೆ. ಅವರ ಎತ್ತರಕ್ಕೆ ನೀವೂ ಏರಿದಾಗ ನಿಮಗೂ ಟಿವಿಯಲ್ಲಿ ಅಂತಹದ್ದೇ ಮಹತ್ವ ದೊರೆಯುತ್ತದೆ ಎಂದು ರವಿಶಾಸ್ತ್ರಿ ಧ್ವನಿಪೂರ್ಣವಾಗಿ ಹೇಳಿದ್ದಾರೆ.

ಇತ್ತೀಚೆಗೆ ಧೋನಿ ಟಿ20ಯಲ್ಲಿ ಬಹಳ ನಿಧಾನವಾಗಿ ಆಡಿದ್ದನ್ನು ಪ್ರಸ್ತಾಪಿಸಿರುವ ವಿವಿಎಸ್‌ ಲಕ್ಷ್ಮಣ್‌, ಅಜಿತ್‌ ಅಗರ್ಕರ್‌, ಆಕಾಶ್‌ ಚೋಪ್ರಾ ಟಿ20ಯಿಂದ ಅವರನ್ನು ಕೈಬಿಡುವುದು ಸರಿ ಎಂದಿದ್ದರು. ಇದಕ್ಕೆ ಸೈಯದ್‌ ಕೀರ್ಮಾನಿ, ಪ್ರಗ್ಯಾನ್‌ ಓಜಾ, ನಮನ್‌ ಓಜಾ ಸೇರಿ ಹಲವರು ಪ್ರತಿರೋಧ ವ್ಯಕ್ತಪಡಿಸಿದ್ದಾರೆ.

Advertisement

ಧೋನಿ ವಿರುದ್ಧ ಸ್ವರವೆದ್ದಾಗೆಲ್ಲ ರವಿಶಾಸ್ತ್ರಿ ಬಲವಾಗಿ ಧ್ವನಿ ಎತ್ತಿರುವುದನ್ನು ನಾವು ನೆನಪಿಸಿಕೊಳ್ಳಬಹುದು. ಈ ಹಿಂದೆ ಧೋನಿಯನ್ನು ಕೈಬಿಡುವ ಬಗ್ಗೆ ಚರ್ಚೆ ನಡೆದಾಗ 2019ರ ವಿಶ್ವಕಪ್‌ವರೆಗೆ ಧೋನಿ ತಂಡದಲ್ಲಿರುತ್ತಾರೆ ಎಂದು ಸ್ಪಷ್ಟವಾಗಿ ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next