ರಾಂಚಿ: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಡ್ರೆಸ್ಸಿಂಗ್ ಕೊಠಡಿಯಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.
ಚೊಚ್ಚಲ ಟೆಸ್ಟ್ ಪಂದ್ಯವಾಡಿದ ಝಾರ್ಖಂಡ್ ರಾಜ್ಯದ ಶಾಬಾಜ್ ನದೀಮ್ ಅವರ ಬಳಿ ಕೆಲಕಾಲ ಮಾತನಾಡಿದ ಧೋನಿ, ಉಪಯುಕ್ತ ಸಲಹೆಗಳನ್ನು ನೀಡಿದರು.
ನಾಲ್ಕನೇ ದಿನ ಭಾರತ ಕೇವಲ 10 ನಿಮಿಷಗಳಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಆಲೌಟ್ ಮಾಡಿಸಿತು. ಆ ಮೂಲಕ ಇನ್ನಿಂಗ್ಸ್ ಹಾಗೂ 202 ರನ್‌ಗಳ ಜಯ ದಾಖಲಿಸಿ 3-0 ಅಂತರದಲ್ಲಿ ಟೆಸ್ಟ್ ಸರಣಿ ತನ್ನದಾಗಿಸಿಕೊಂಡಿತು.
ಟೀಮ್ ಇಂಡಿಯಾ ಮುಖ್ಯ ಕೋಚ್ ರವಿಶಾಸ್ತ್ರಿ ಅವರು ಧೋನಿ ಅವರೊಂದಿಗಿನ ಫೋಟೋವನ್ನು ತಮ್ಮ ಅಧಿಕೃತ ಟ್ವೀಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅದ್ಭುತ ಟೆಸ್ಟ್ ಸರಣಿ ಜಯದ ಬಳಿಕ ಭಾರತೀಯ ತಂಡದ ನಿಜವಾದ ದಂತಕತೆಯನ್ನು ನೋಡಿದ್ದಕ್ಕೆ ತುಂಬಾ ಸಂತಸವಾಯಿತು ಎಂದು ಶೀರ್ಷಿಕೆ ನೀಡಿದ್ದಾರೆ.
ಮಹೇಂದ್ರ ಸಿಂಗ್ ಧೋನಿ 2014ರಲ್ಲಿಯೇ ಟೆಸ್ಟ್ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದ್ದರು. ಜುಲೈ 14ರಂದು ಮುಕ್ತಾಯವಾಗಿದ್ದ ಐಸಿಸಿ ಏಕದಿನ ವಿಶ್ವಕಪ್ ಬಳಿಕ ಟೀಮ್ ಇಂಡಿಯಾದಿಂದ ದೂರ ಉಳಿದಿದ್ದಾರೆ.