Advertisement

ಧೋನಿ ಭೇಟಿಗೆ ಹರ್ಯಾಣದಿಂದ ರಾಂಚಿಗೆ ನಡೆದೇ ಬಂದ ಅಭಿಮಾನಿ !

10:17 PM Aug 15, 2021 | Team Udayavani |

ರಾಂಚಿ : ಮಹೇಂದ್ರ ಸಿಂಗ್‌ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿ ಆ. 15ಕ್ಕೆ ಭರ್ತಿ ಒಂದು ವರ್ಷ ತುಂಬಿದರೂ ಅವರು ಈಗಲೂ ಕ್ರಿಕೆಟಿನ ಸೂಪರ್‌ ಸ್ಟಾರ್‌ ಆಗಿದ್ದಾರೆ. ಅವರ ಅಭಿಮಾನಿಗಳ ಸಂಖ್ಯೆಗೇನೂ ಕೊರತೆ ಇಲ್ಲ.

Advertisement

ಇಂಥವರಲ್ಲೊಬ್ಬರು ಹರ್ಯಾಣದ ಅಜಯ್‌ ಗಿಲ್‌. 18 ವರ್ಷದ ಗಿಲ್‌, ಧೋನಿ ಯನ್ನು ಭೇಟಿ ಮಾಡಲು ಕಾಲ್ನಡಿಗೆಯಲ್ಲೇ ಹರ್ಯಾಣದಿಂದ ಬಂದಿದ್ದಾರೆ! ಜು. 29ರಂದು ಇವರ ನಡಿಗೆ ಆರಂಭಗೊಂಡಿತ್ತು. ಸತತ 16 ದಿನಗಳ ಕಾಲ ನಡೆದು ರಾಂಚಿ ತಲುಪಿದ್ದಾರೆ.

10 ನಿಮಿಷ ಕಳೆದರೆ ಸಾಕು…
“ನಾನು ಧೋನಿಜೀಯನ್ನು ಭೇಟಿ ಮಾಡಿದ ಬಳಿಕವೇ ಮನೆಗೆ ವಾಪಸಾಗುವುದು. ಅಲ್ಲಿಯ ತನಕ ಇಲ್ಲಿಯೇ ಉಳಿಯುತ್ತೇನೆ. ಧೋನಿ ನನ್ನೊಂದಿಗೆ ಕನಿಷ್ಠ 10 ನಿಮಿಷ ಕಳೆದರೆ ಸಾಕು, ನನ್ನಷ್ಟು ಲಕ್ಕಿ ಬೇರೆ ಯಾರಿಲ್ಲ…’ ಎಂದಿದ್ದಾರೆ ಅಜಯ್‌ ಗಿಲ್‌.
ದುರದೃಷ್ಟವೆಂದರೆ, ಅಜಯ್‌ ಗಿಲ್‌ ರಾಂಚಿ ತಲುಪುತ್ತಿದ್ದಂತೆಯೇ ಅತ್ತ ಚೆನ್ನೈಯಿಂದ ಧೋನಿ ದುಬಾೖಗೆ ವಿಮಾನ ಏರಿದ್ದಾರೆ. ಹೀಗಾಗಿ ಇವರ ಭೇಟಿ ಸಾಧ್ಯವಾಗಲಿಲ್ಲ.

ತಲೆಯಲ್ಲೂ ಧೋನಿ, ಮಹಿ…
ಹರ್ಯಾಣದ ಹಳ್ಳಿಯೊಂದರಲ್ಲಿ ಸಲೂನ್‌ ನಡೆಸುತ್ತಿರುವ ಗಿಲ್‌, ತಮ್ಮ ತಲೆ ಕೂದಲಿಗೆ ವಿವಿಧ ಬಣ್ಣ ಹಚ್ಚಿಕೊಂಡು ಅದರಲ್ಲಿ ಧೋನಿ, ಮಹಿ ಎಂದೆಲ್ಲ ಆರ್ಟ್‌ವರ್ಕ್‌ ಮಾಡಿಸಿಕೊಂಡಿದ್ದಾರೆ. ತನ್ನ ಉದ್ದೇಶ ತಿಳಿದ ಸೋನೆಪತ್‌ನ ಸಲೂನ್‌ನವರೊಬ್ಬರು ಪುಕ್ಕಟೆಯಾಗಿ ಈ ವಿನ್ಯಾಸ ಮಾಡಿದ್ದಾಗಿ ಗಿಲ್‌ ಹೇಳಿದರು.

ಇದನ್ನೂ ಓದಿ :ಜರ್ಮನಿಯ ಫುಟ್ ಬಾಲ್ ಲೆಜೆಂಡ್‌ ಗರ್ಡ್‌ ಮುಲ್ಲರ್‌ ನಿಧನ

Advertisement

ದಿಲ್ಲಿಗೆ ಮರಳಲು ವ್ಯವಸ್ಥೆ
ಧೋನಿ ಬರುವುದು ಎಷ್ಟೇ ವಿಳಂಬವಾಗಲಿ, ಅಲ್ಲಿಯ ತನಕ ಇಲ್ಲಿಯೇ ಉಳಿಯುತ್ತೇನೆ ಎಂದು ಪಟ್ಟು ಹಿಡಿದ ಅಜಯ್‌ ಗಿಲ್‌ಗೆ ಸ್ಥಳೀಯರು ಮನ ಒಲಿಸಿದ್ದಾರೆ. ಧೋನಿ ಬಂದ ಬಳಿಕ ಬನ್ನಿ ಎಂದು ಹೇಳಿ, ಅವರಿಗೆ ದಿಲ್ಲಿಗೆ ಮರಳಲು ವಿಮಾನದ ಟಿಕೆಟ್‌ ಕೊಡಿಸಿದ್ದಾರೆ.
ಹೀಗೆ… ಅಜಯ್‌ ಗಿಲ್‌ನ ಕಾಲ್ನಡಿಗೆಯ ಸಾಹಸಮಯ ಪಯಣ ನಿರಾಸೆಯಲ್ಲಿ ಅಂತ್ಯಗೊಂಡಿದೆ.

ಶೀಘ್ರದಲ್ಲೇ ಭೇಟಿ
ಆದರೆ ಅತೀ ಶೀಘ್ರದಲ್ಲೇ ತನ್ನ ಮತ್ತು ಧೋನಿಯ ಭೇಟಿ ಆಗುವುದರಲ್ಲಿ ಅನು ಮಾನವೇ ಇಲ್ಲ ಎಂಬುದು ಗಿಲ್‌ ವಿಶ್ವಾಸ. ಆಗ ತಾನು ಹೇಗೆ ರಾಂಚಿಗೆ ಆಗಮಿಸಲಿದ್ದೇನೆ ಎಂಬುದನ್ನು ಮಾತ್ರ ಈ ಅಭಿಮಾನಿ ತಿಳಿಸಿಲ್ಲ!

Advertisement

Udayavani is now on Telegram. Click here to join our channel and stay updated with the latest news.

Next