Advertisement

ಬೆಳೆವ‌ ಮಕ್ಕಳ ಅಮ್ಮಂದಿರ ಆತಂಕಗಳು

01:06 PM Jan 05, 2018 | |

ಪುಟು ಪುಟು ಹೆಜ್ಜೆ ಹಾಕುತ್ತ ಎಲ್ಲರ ಮಡಿಲಲ್ಲಿ ಕುಳಿತುಕೊಂಡು ಲಲ್ಲೆಗೆರೆಯುತ್ತಿದ್ದ ಮಕ್ಕಳೀಗ ಏಕ್‌ದಂ ಬೆಳೆದು ದೊಡ್ಡವರಾಗಿದ್ದಾರೆ ಅಂತನ್ನಿಸುತ್ತಿದೆ. ಯಾವ ಚಟುವಟಿಕೆಗಳಿಗೂ ಒಲ್ಲೆ ಎನ್ನುತ್ತಿದ್ದ ಮಕ್ಕಳಿಗೆ ಈಗ ಒಮ್ಮೆಗೇ ಕಟ್ಟುಪಾಡುಗಳನ್ನು ವಿಧಿಸಲು ಶುರುಮಾಡುತ್ತೇವೆ. ತತ್‌ಕ್ಷಣ ಹೇರಿಕೆಯಾದ ಈ ಹೊಸ ನಿಯಮದಿಂದ ಮಕ್ಕಳು ಕಕ್ಕಾಬಿಕ್ಕಿಯಾಗಿ ಇದಕ್ಕೆ ಹೊಂದಿಕೆಯಾಗದೆ ಸಿಡುಕಲು, ರೇಗಾಡಲು ಶುರು ಮಾಡುತ್ತವೆ.ಅಷ್ಟಕ್ಕೇ ಅಮ್ಮಂದಿರು ಅದಾಗಲೇ ಮಹಾವಯಸ್ಸಾದವರಂತೆ ಆಡುತ್ತ ಇದ್ದಬದ್ದ ಕೇಳಿ ತಿಳಿದುಕೊಂಡ ಉಪದೇಶಗಳನ್ನೆಲ್ಲ  ಒಂದೂ ಬಿಡದೆ ಮಕ್ಕಳ ಮುಂದೆ ಪ್ರವಚಿಸಲುತೊಡಗುತ್ತಾರೆ. ಯಾವುದೋ ಒಂದು ಗಳಿಗೆಯಲ್ಲಿ ಮಕ್ಕಳ ಮತ್ತು ಹೆತ್ತವರ ನಡುವೆ ಒಂದು ದೊಡ್ಡ ಅಂತರ ನಿರ್ಮಾಣವಾಗಿ ಬಿಡುತ್ತದೆ. ತಾವು ಕೂಡ ಇವರ ವಯಸ್ಸು ದಾಟಿಯೇ ಬಂದದ್ದಾದರೂ ನಾವುಗಳು ನಮ್ಮ ಹದಿಹರೆಯದಲ್ಲಿ ಹದ್ದುಬಸ್ತಿನಲ್ಲಿ ಇದ್ದಂತೆ ನಮ್ಮ ಮಕ್ಕಳು ಇಲ್ಲ, ಏನು ಹೇಳಿದರೂ ಒಪ್ಪಿಕೊಳ್ಳದೆ ಅದಕ್ಕೆ ತಕ್ಕುದಾದ ಸಿದ್ಧ ಉತ್ತರಗಳನ್ನು ಕೊಟ್ಟು ಬಿಡುತ್ತಾರೆ ಎಂಬುದು ಹೆತ್ತವರ ಆತಂಕಕ್ಕೆ ಕಾರಣ. ಹೆತ್ತವರಿಗೆ ನಾವು ಏನು ಮಾಡಿದರೂ ಸರಿ ಕಾಣುವುದಿಲ್ಲವೆಂಬುದು ಮಕ್ಕಳ ದೂರುಗಂಟೆ. 

Advertisement

ಇಲ್ಲಿ ತಪ್ಪು ಯಾರದ್ದು? ಎಡವಿದ್ದು ಯಾರು? ಎಂಬ ಪ್ರಶ್ನೆ ಬಂದಾಗ ಎರಡು ಕಡೆಯಿಂದಲೂ ಅವರವರ ವಾದಗಳಿಗೆ ಸಮರ್ಥ ಸ್ಪಷ್ಟೀಕರಣ ಸಿಗುತ್ತದೆ. ಇಷ್ಟು ದಿನ ತಮ್ಮ ಇಷ್ಟಾನುಸಾರವಾಗಿ ನಡೆದುಕೊಳ್ಳುತ್ತಿದ್ದ ಮಕ್ಕಳು, ಕಾಲೇಜು ಮೆಟ್ಟಿಲು ಹತ್ತಿದ್ದೇ ತಡ ಅವರಿಗೆ ಇಲ್ಲದ ಕಟ್ಟುಪಾಡುಗಳು. ಅಮ್ಮಂದಿರ ಎದೆಯೊಳಗೆ ಇಲ್ಲಸಲ್ಲದ ನೂರೆಂಟು ತಲ್ಲಣಗಳು ಅವಲಕ್ಕಿ ಕುಟ್ಟಲು ಶುರು ಮಾಡಿದ್ದನ್ನು ಮಗಳಿಗೆ ಅರ್ಥೈಸುವುದು ಹೇಗೆಂಬ ಗೊಂದಲಕ್ಕೆ ಬಿದ್ದಿದ್ದಾಳೆ. ಅಮ್ಮ ಯಾಕೆ ಇದ್ದಕ್ಕಿದ್ದ ಹಾಗೆ ಹೀಗೆ ಆಡುತ್ತಾಳೆ? ನನ್ನ ಮೇಲೆ ಪ್ರೀತಿ ಕಡಿಮೆಯಾಗಿದೆಯೇನೋ? ನನಗಿಂತ ಒಂದು ವರ್ಷ ಚಿಕ್ಕವನಾದ ತಮ್ಮನ ಮೇಲೆಯೇ ಅವಳಿಗೆ ಕಕ್ಕುಲಾತಿ, ಅವನ ಬಗ್ಗೆ ಯಾವ ತಕರಾರುಗಳು ಇಲ್ಲ. ಈ ತಾರತಮ್ಯದ ಬಗ್ಗೆ ಪ್ರಶ್ನಿಸಿದರೆ ನಿನಗೆ ಈಗ ಅರ್ಥವಾಗಲ್ಲ, ಅವನು ಹುಡುಗ, ಅವನಿಗಿಂತ ನಂಗೆ ನಿಂದೇ ತಲೆಬಿಸಿ ಅನ್ನುವಾಗ ಅವಳಿಗೆ ಓದುವುದಕ್ಕೆ ರಾಶಿ ಬಿದ್ದಿದ್ದರೂ, ಹೊಸ ಪಠ್ಯಕ್ರಮಕ್ಕೆ ಹೊಂದಿಕೊಳ್ಳಲು ಕಷ್ಟವಾಗುವುದರ ನಡುವೆಯೂ ಅಮ್ಮನ ನಡವಳಿಕೆ ಮತ್ತಷ್ಟು ಸಂಕಟ ತರಿಸುತ್ತದೆ. ಇದ್ದಕ್ಕಿದ್ದಂತೆಯೇ ಓದಿನಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ. 

ಎಲ್ಲಕ್ಕಿಂತ ಹೆಚ್ಚಾಗಿ ಮಕ್ಕಳ ಡ್ರೆಸ್‌ ವಿಧಾನವೇ ಅಮ್ಮಂದಿರನ್ನು ಇರಿಸು ಮುರಿಸು ಮಾಡುವಂಥದ್ದು. ನಮ್ಮಂತೆ ಇರುವ ಜೋಡಿ ಬಟ್ಟೆಗಳÇÉೇ ಸುಧಾರಿಸುವ ಕಾಲ ಇದಲ್ಲ. ನಮ್ಮ ಬೋಧನೆಗೂ ಕಿವಿ ಕೊಡುವುದಿಲ್ಲ. ಒಂದು ಕಾಲದಲ್ಲಿ ನಾವೂ ಕೂಡ ನಮ್ಮ ಓರಗೆಯ ಗೆಳತಿಯರಂತೆ ಡ್ರೆಸ್‌ ಹಾಕಲು ಹವಣಿಸುತ್ತಿದ್ದದ್ದು, ಅದಕ್ಕೆ ಬಜಾರಿ ತರ ಡ್ರೆಸ್‌ ಹಾಕೊಂಡು ತಿರುಗಬೇಡ ಅಂತ ಕೇಳಿದ್ದಕ್ಕಷ್ಟೇ ಕೆಂಡಾಮಂಡಲವಾದದ್ದು. ಆದರೆ, ಮನದ ಮೂಲೆಯಲ್ಲಿ ಕಾಲಕ್ಕೆ ತಕ್ಕ ಬಣ್ಣ ಬಣ್ಣದ ಬಟ್ಟೆ ಧರಿಸುವ ಕನಸಂತೂ ಕಾಣುತ್ತಿದ್ದದ್ದು ಸತ್ಯ. ಸೀರೆಯ ಜಮಾನದಲ್ಲಿ ಲಂಗದಾವಣಿಗಾಗಿ, ತದನಂತರ ಫ್ರಾಕ್‌, ಮಿಡಿ, ಚೂಡಿದಾರ್‌ಗಳಿಗಾಗಿ ಎಷ್ಟೊಂದು ಹಂಬಲಿಸಿದ್ದರೋ? ಮತ್ತೆ ಬಾಬ್‌ಕಟ್‌ ಮಾಡಿ ಹುಡುಗರಂತೆ ಜೀನ್ಸ್‌ ತೊಟ್ಟು ಹೋಗುವ ಹೆಮ್ಮಕ್ಕಳ ಅದೃಷ್ಟಕ್ಕೆ ಕರುಬಿದವರೆಷ್ಟೋ? ಸರಿದು ಹೋಗುತ್ತಿರುವ ಒಂದು ತಲೆಮಾರಿನವರಿಗೆ ಬದಲಾಗುತ್ತಿರುವ ಹೊಸ ಜಮಾನಕ್ಕೆ ತಕ್ಕ ಮಕ್ಕಳು ಯಾವ ಎಗ್ಗಿಲ್ಲದೆ ಒಗ್ಗಿಕೊಳ್ಳುತ್ತಿರುವುದನ್ನು ಸಹಿಸಲಾಗುವುದಿಲ್ಲ. ಇಂತಹುದರಲ್ಲಿ ಈಗ ಫ್ಯಾಷನ್‌ ಯುಗ. ದಿನಕ್ಕೊಂದು ನವನವೀನ ಉಡುಪುಗಳು. ಗೆಳತಿಯರು ಇಷ್ಟ ಬಂದಂತೆ  ದಿರಿಸು ತೊಟ್ಟು ಬಣ್ಣದ ಚಿಟ್ಟೆಗಳಂತೆ  ಹಾರಾಡುತ್ತಿರಬೇಕಾದರೆ ನಾನೊಬ್ಬಳೇ ಹೀಗೆ ಹಳೆಕಾಲದ ಮುದುಕಿಯಂತೆ ಬಟ್ಟೆ ತೊಟ್ಟುಕೊಂಡು ಕಾಲೇಜಿಗೆ ಹೇಗೆ ಹೋಗಬೇಕು ಎಂಬುದು ಅವರ ದಿನನಿತ್ಯದ ಹಳಹಳಿಕೆ. ಅಮ್ಮಂದಿರ ಮಾತಿಗೆ ಸೊಪ್ಪು ಹಾಕದೆ ತಮಗೆ ಬೇಕಾದ ಹಾಗೆ ಇರುವ, ಇಷ್ಟಬಂದ ಡ್ರೆಸ್‌ ಹಾಕುವ, ತಾವು ಯೋಚಿಸಿದ್ದನ್ನು ಮಾಡಿಯೇ ತೀರುತ್ತೇನೆಂಬ ಛಲವಿರುವ ಮಕ್ಕಳು ಹೊಸ ಜನರೇಷನ್ನಿನ ಕುಡಿಗಳು. ಹೆತ್ತವರ ಮಾತೇ ವೇದ ವಾಕ್ಯ, ಹೆತ್ತವರ ಮನಸಿಗೆಲ್ಲಿ ನೋವಾಗುತ್ತೆ ಅಂತ ನಮ್ಮ ಕನಸು-ಆಶೆ-ಆಕಾಂಕ್ಷೆಗಳನ್ನೆಲ್ಲ ಗಂಟು ಕಟ್ಟಿ ಒಗೆದವರು ನಾವು. ಆದರೆ, ನಮ್ಮ ಮಕ್ಕಳ ಸ್ವಸಾಮರ್ಥ್ಯ ಮತ್ತು ಆತ್ಮವಿಶ್ವಾಸ ನಮ್ಮನ್ನು ಯಾಕೆ ಹೀಗೆ ಅಧೀರರನ್ನಾಗಿಸುತ್ತದೆಯೋ ಗೊತ್ತಿಲ್ಲ.

ಹೆತ್ತವರಿಗೆ ಮಕ್ಕಳು ನಮ್ಮ ಅಧೀನದಲ್ಲಿಯೇ ಇರಬೇಕೆಂಬ ಬಯಕೆಯೋ ಅಥವಾ ನಮ್ಮ ಆವಶ್ಯಕತೆಯಿಲ್ಲದೆಯೇ ಮಗು ತನ್ನ ನಿರ್ಧಾರಗಳನ್ನು  ತೆಗೆದುಕೊಳ್ಳುತ್ತದೆಯೆಂಬ ಅಭದ್ರತೆಯೋ? ಹಾಗೆ ನೋಡಿದರೆ ಯಾವುದೂ ಅಲ್ಲ. ಹೆತ್ತವರಿಗೆ, ಅದರಲ್ಲೂ ಅಮ್ಮಂದಿರಿಗೆ ಹೊಸ ಯುಗದ ಅವಸರದ ಜೀವನದಲ್ಲಿ ತಮ್ಮ ಮಕ್ಕಳು ಎಲ್ಲಿ ಎಡವಿ ಬಿದ್ದು ಬಿಡುತ್ತಾರೋ? ಎಂಬ ಭ್ರಮೆಯ ಭಯ ಅಷ್ಟೆ. ಈ ಭಯ ಅಮ್ಮಂದಿರು ಎಷ್ಟೇ ಆಧುನಿಕ ಮನೋಭಾವ ಹೊಂದಿದ್ದರೂ ಬರುವುದು ಸಹಜವೇ. ಹೊಸ ಆಧುನಿಕ ಉಡುಪಿನಲ್ಲಿ ಮಗು ಆಸ್ಥೆಯಿಂದ ಸಿಂಗರಿಸಿಕೊಳ್ಳುವಾಗ ಎಲ್ಲಿ ಓದು-ಗುರಿಗಳು ಅಡ್ಡ ಬಿದ್ದು ಹೋಗಿ ಬಿಡುವುದೇನೋ ಎಂಬ ಆತಂಕ. ಇನ್ನು ಅದೇನೇ ಹೇಳಿದರೂ ಗಂಡು ಮಕ್ಕಳ ಬಗೆಗೆ ಅಮ್ಮಂದಿರು ಏನೂ ಹೇಳದಂತೆ ತೋಚಿದರೂ, ಮಗ ಕಾಲೇಜಿನಿಂದ ಸ್ವಲ್ಪ ಲೇಟಾಗಿ ಬಂದರೂ ಏನೆಲ್ಲಾ ಅನುಮಾನಗಳು. ಮೊಬೈಲ್‌ ಹಿಡಿದುಕೊಂಡು ಕೋಣೆಯ ಕದವಿಕ್ಕಿ ಕುಳಿತರೆ ಮತ್ತಷ್ಟು ದಿಗಿಲು. ಹೆಣ್ಮಕ್ಕಳ ತಲೆಗೆ ಮೊಟಕಿ ಎಲ್ಲವನ್ನು ತಿಳಿ ಹೇಳಿದಷ್ಟು ಸುಲಭವಾಗಿ ಗಂಡು ಮಕ್ಕಳ ಮುಂದೆ ತೆರೆದಿಡಲಾಗುವುದಿಲ್ಲವೆಂಬ ಕಸಿವಿಸಿ. ಅಪ್ಪಂದಿರಿಗೆ ಇದನ್ನು ಹೇಳಿ ದಾಟಿಸೋಣವೆಂದರೆ ಅವರು ಮೂಕ ಪ್ರೇಕ್ಷಕರು. “ಅದೇನೂ ಆಗಲ್ಲ, ಯಾಕೆ ಇಲ್ಲಸಲ್ಲದ ಯೋಚನೆ ಮಾಡಿ ನೆಗೆಟಿವ್‌ ಎನರ್ಜಿಯನ್ನು ತುಂಬಿಸುತ್ತೀಯಾ?’ ಅಂತ ಅಮ್ಮಂದಿರಿಗೆ ಗದರುವುದರ ಹೊರತು ಹೆಚ್ಚೇನು ಮಾಡುವುದಿಲ್ಲ. ಹಾಗಾಗಿ, ಎಲ್ಲವನ್ನು ಢವಗುಟ್ಟುವ ಎದೆಯಲ್ಲಿ ನಿಭಾಯಿಸಬೇಕಾದ ಪರಿಸ್ಥಿತಿ ಅಮ್ಮಂದಿರದ್ದು. ಪರಿಚಯದ ಬಂಧುಗಳ ಹದಿಹರೆಯದ ಮಕ್ಕಳ ಗುಣಾವಗುಣಗಳನ್ನು ಕೇಳಿ, ನೋಡಿದ ಕಾರಣ ಮನದೊಳಗೆ ಪುಕ್ಕಲುತನ ಆವರಿಸಿ ತಮ್ಮ ಮಕ್ಕಳು ಹೀಗೆ ಆಗದಿರಲೆಂಬ ಮುಂಜಾಗರುಕತೆಯ ಕಾಳಜಿಯಿಂದ ಸದಾ ಮಕ್ಕಳ ಮೇಲೆ ಹದ್ದಿನ ಕಣ್ಣಿರಿಸಿ ಸೂಕ್ಷ್ಮಾವಲೋಕನ ಮಾಡಿಕೊಂಡೇ ಇರುತ್ತಾರೆ. ಈ ನಿಗಾವೇ ಮಕ್ಕಳಿಗೆ ಕಿರಿಕಿರಿ ಹುಟ್ಟಿಸಿ, ನೀನೊಬ್ಬಳು ಅಮ್ಮ ಮಾತ್ರ ಹೀಗೆ ಅಂತ ಎಲ್ಲ ಅಮ್ಮಂದಿರ ಬಗ್ಗೆ ತಿಳಿದುಕೊಂಡವರ ಹಾಗೆ ಸುಡು ಸುಡು ಆಡುತ್ತಾರೆ. ಹದಿಹರೆಯದ ಮಕ್ಕಳಿರುವ ಬಹುತೇಕ ಮನೆಗಳ ಸರ್ವೆà ಸಾಮಾನ್ಯ ವಿಷಯವಿದು.

ಜಗತ್ತು ನಾಗಾಲೋಟದಿಂದ ಓಡುತ್ತ ಬದಲಾಗುತ್ತಿದೆ. ಹೊಸ ಜೀವನ ಶೈಲಿಗಳು ನಮ್ಮ ಮುಂದೆ ಕಣ್ಣು ಕುಕ್ಕುವಂತೆ ಇದ್ದರೂ ಹೆತ್ತವರು ಅತಿಯಾಗಿ ಯಾವ ಉಪದೇಶಗಳನ್ನು ಕೊಡದೆ, ಪ್ರೀತಿ-ವಿಶ್ವಾಸ ತೋರಿಸುತ್ತ ಅವರನ್ನು ಒಂದು ಹದವಾದ ಹತೋಟಿಯಲ್ಲಿಟ್ಟುಕೊಂಡರಷ್ಟೆ ಸಾಕು. ಮನೆಯೇ ಮೊದಲ ಪಾಠ ಶಾಲೆಯಾಗಿರುವುದರಿಂದ ನಮ್ಮ ನಡವಳಿಕೆಯಷ್ಟೆ ಅರಿವಿಲ್ಲದೆಯೇ ಮಕ್ಕಳಲ್ಲಿ ಹಾಸುಹೊಕ್ಕಾಗಿರುತ್ತದೆ. ತಮ್ಮ ಮೂಲಬೇರುಗಳನ್ನು ಕಳಚಿಕೊಂಡು ಅಷ್ಟು ಬೇಗ ಮಗು ಹೊರ ಜಿಗಿಯುವುದಿಲ್ಲ. ಮಕ್ಕಳ ಆತ್ಮವಿಶ್ವಾಸಕ್ಕೆ ನೀರೆರೆಯುತ್ತ, ಅವರ ಎದೆಗಾರಿಕೆಗೆ ಕಣ್ಣಲ್ಲಿ ಮೆಚ್ಚುಗೆ ಸೂಚಿಸುತ್ತ¤ ಜೊತೆಗಿರುವುದಷ್ಟೆ ಮುಖ್ಯ. ಯಾವ ಅಮ್ಮಂದಿರೂ ಆತಂಕ ಪಡಬೇಕಾದ ಅಗತ್ಯವಿಲ್ಲ. ಅದೇನೆ ಹೇಳಿ, ಕಾಲ ಬದಲಾದರೂ ಅಮ್ಮಂದಿರ ಆತಂಕಗಳು ಮಾತ್ರ ಬದಲಾಗದೆ ಹಾಗೇ ಉಳಿದು ಬಿಡುವುದಂತೂ ಸತ್ಯ. ಯಾವುದೂ ಅತಿಯಾಗದೆ ಸಣ್ಣ  ಮಟ್ಟಿಗಿನ ಆತಂಕ ಒಳ್ಳೆಯದೇ. ಅದು ಅಮ್ಮ-ಮಕ್ಕಳ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಬಲ್ಲುದು.

Advertisement

ಸ್ಮಿತಾ ಅಮೃತರಾಜ್‌

Advertisement

Udayavani is now on Telegram. Click here to join our channel and stay updated with the latest news.

Next