ಮಂಗಳೂರು: ರಾಜ್ಯದ ಏಕೈಕ ಹೈಡ್ರೋಕಾರ್ಬನ್ ಸಂಸ್ಕರಣಾಗಾರವಾದ ಎಂಆರ್‌ಪಿಎಲ್‌ನಲ್ಲಿ ಉತ್ಪಾದಿಸಲಾದ ಡೀಸೆಲ್ ಇನ್ನು ಪ್ರತಿದಿನ ಲಕ್ಷಾಂತರ ಪ್ರಯಾಣಿಕರನ್ನು ಕರೆದೊಯ್ಯುವ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳಿಗೆ ಪೂರೈಕೆಯಾಗಲಿದೆ.
ಈ ಎಲ್ಲ ಬಸ್‌ಗಳಿಗೆ ಇಂಧನ ಸರಬರಾಜುದಾರರಾಗಿರುವ ಎಚ್‌ಪಿಸಿಎಲ್ ಈಗ ಮಂಗಳೂರು ಸಂಸ್ಕರಣಾಗಾರದಿಂದ ಡೀಸೆಲ್ ಪೂರೈಸಲಿದೆ. ಎಂಆರ್‌ಪಿಎಲ್‌ನಿಂದ ಕೆಎಸ್‌ಆರ್‌ಟಿಸಿಗೆ ಮೊದಲ ಲೋಡ್ ಅನ್ನು ಇತ್ತೀಚೆಗೆ ರವಾನಿಸಲಾಗಿದೆ. ಪ್ರತೀ ತಿಂಗಳು 50 ಸಾವಿರ ಕಿಲೋ ಲೀಟರ್ ಡೀಸೆಲ್ ಸರಬರಾಜು ಮಾಡುವ ಒಪ್ಪಂದ ಇದಾಗಿದೆ.
ಎಂಆರ್‌ಪಿಎಲ್‌ನ ಮಾರ್ಕೆಟಿಂಗ್ ಜಿಜಿಎಂ ಸತ್ಯನಾರಾಯಣ ಎಚ್.ಸಿ. ಅವರು, “ಈ ಒಡಂಬಡಿಕೆಯು ಕಳೆದ ಹಣಕಾಸು ವರ್ಷದ ನಮ್ಮ ಮಾರಾಟಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಡೀಸೆಲ್ ನೇರ ಮಾರಾಟವನ್ನು ಕನಿಷ್ಠ 20 ಪಟ್ಟು ಹೆಚ್ಚಿಸುವ ನಿರೀಕ್ಷೆಯಿದೆ. ಎಂಆರ್‌ಪಿಎಲ್ ತನ್ನ ಚಿಲ್ಲರೆ ಮಾರಾಟ ಜಾಲವನ್ನು ಕರ್ನಾಟಕ ಮತ್ತು ಕೇರಳದಲ್ಲಿ ವಿಸ್ತರಿಸುತ್ತಿದೆ. ಅನೇಕ ಚಿಲ್ಲರೆ ಮಾರಾಟ ಮಳಿಗೆಗಳ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿ ಇದೆ’ ಎಂದು ತಿಳಿಸಿದ್ದಾರೆ.
ಡೀಸೆಲ್ ದೇಶೀಯ ಮಾರಾಟಕ್ಕೆ ಆದ್ಯತೆ
ಎಂಆರ್‌ಪಿಎಲ್ ತಿಂಗಳಿಗೆ ಉತ್ಪಾದಿಸುವ ಡೀಸೆಲ್‌ನ ಪೈಕಿ ಶೇ. 65ರಷ್ಟು ದೇಶೀಯ ಮಾರುಕಟ್ಟೆಯಲ್ಲಿ ವಿಲೇವಾರಿಯಾದರೆ ಶೇ. 35ರಷ್ಟನ್ನು ರಫ್ತು ಮಾಡಲಾಗುತ್ತಿತ್ತು. ಲಾಕ್‌ಡೌನ್‌ನಿಂದಾಗಿ ಇತ್ತೀಚೆಗೆ ಈ ಪ್ರಮಾಣದಲ್ಲಿ ಏರುಪೇರಾಗಿದೆ. ಹೀಗಾಗಿ ಶೇ. 35ರಷ್ಟಿದ್ದ ರಫ್ತು ಪ್ರಮಾಣ ಈಗ ಶೇ. 50ರ ಗಡಿಯನ್ನೂ ದಾಟಿತ್ತು. ಉಳಿದ ಡೀಸೆಲ್ ಮಾತ್ರ ದೇಶೀಯವಾಗಿ ಬಳಕೆಯಾಗುತ್ತಿತ್ತು.
ದೇಶೀಯವಾಗಿ ಐಒಸಿಎಲ್, ಎಚ್‌ಪಿಸಿಎಲ್, ಬಿಪಿಸಿಎಲ್, ಎಂಆರ್‌ಪಿಎಲ್ ಔಟ್‌ಲೆಟ್‌ಗೆ ಎಂಆರ್‌ಪಿಎಲ್ ಡೀಸೆಲ್ ಒದಗಿಸುತ್ತಿದೆ.