ಬಹುತೇಕ ಎಲ್ಲ ವಸ್ತುಗಳ ಮೇಲೆ “ಎಂಆರ್‌ಪಿ’ ಅಂಥ ಇರುವುದನ್ನು ನೋಡಿರುತ್ತೀರಿ. ಅದರಲ್ಲೂ ಅನೇಕರಿಗೆ “ಎಂಆರ್‌ಪಿ’ ಅಂದ್ರೆ ಮೊದಲು ನೆನಪಿಗೆ ಬರುವುದು, ಮದ್ಯದಂಗಡಿಗಳ ಮುಂದೆ ದೊಡ್ಡದಾಗಿ ಕಾಣುವಂತೆ ಹಾಕಿರುವ ಬೋರ್ಡ್‌ಗಳು! ಈಗ ಇದೇ “ಎಂಆರ್‌ಪಿ’ ಎಂಬ ಹೆಸರಿನಲ್ಲಿ ಸಿನಿಮಾವೊಂದು ಈ ವಾರ ಬಿಡುಗಡೆಯಾಗಿ ಥಿಯೇಟರ್‌ಗೆ ಬರುತ್ತಿದೆ.
ಹರಿ, ಚೈತ್ರಾ ರೆಡ್ಡಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ “ಎಂಆರ್‌ಪಿ’ ಔಟ್ ಆ್ಯಂಡ್ ಔಟ್ ಕಾಮಿಡಿ ಕಥಾಹಂದರದ ಸಿನಿಮಾ. ಸ್ಥೂಲ ಕಾಯದ ವ್ಯಕ್ತಿಯೊಬ್ಬನ ಜೀವನದಲ್ಲಿ ಏನೆಲ್ಲ ನಡೆಯುತ್ತದೆ. ಆತನಿಗೆ ಹುಡುಗಿ ಹುಡುಕುವ ಪ್ರಯತ್ನಗಳು ಹೇಗಿರುತ್ತದೆ ಅನ್ನೋ ವ್ಯಥೆ “ಎಂಆರ್‌ಪಿ’ ಸಿನಿಮಾದ ಕಥೆಯ ಒಂದು ಎಳೆ. ಅದೆಲ್ಲವನ್ನು ಹಾಸ್ಯಭರಿತವಾಗಿ ತೆರೆಮೇಲೆ ತರಲಾಗಿದೆ. ಈ ಹಿಂದೆ “ನನ್ ಮಗಳೇ ಹೀರೋಯಿನ್’ ಎಂಬ ಅಪ್ಪಟ ಕಾಮಿಡಿ ಸಿನಿಮಾವನ್ನು ನಿರ್ದೇಶಿಸಿದ್ದ ಬಾಹುಬಲಿ ಈ ಸಿನಿಮಾಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ.
ಇನ್ನು ಮೊದಲು ಈ ಚಿತ್ರಕ್ಕೆ ಒಂದು ಹೊಟ್ಟೆಯ ಕಥೆ ಎಂದು ಹೆಸರಿಡಬೇಕೆಂದುಕೊಂಡದ್ದಿತ್ತಂತೆ ಚಿತ್ರತಂಡ. ಆದರೆ ಅದೇಕೋ ಬೇಡವೆನಿಸಿ, ಅಂತಿಮವಾಗಿ “ಎಂಆರ್‌ಪಿ’ ಎಂದು ಹೆಸರಿಡಲಾಗಿದೆ. ಚಿತ್ರದ ಕಥೆ ಹೊಟ್ಟೆಯ ಮೇಲೆ ಸಾಗುವುದರಿಂದ ಅದಕ್ಕೆ ಈ ಟೈಟಲ್ಲೇ ಸೂಕ್ತ ಎಂಬುದು ತಂಡದ ಅನಿಸಿಕೆ.
ಸ್ಥೂಲ ಕಾಯದ ವ್ಯಕ್ತಿಗಳ ಸಂಕಟ ಸಾಹಸಗಳನ್ನು “ಎಂಆರ್‌ಪಿ’ ಬಿಡಿಸಿಡಲಿದೆ. ಈ ಸಿನಿಮಾದಲ್ಲಿ “ಎಂಆರ್‌ಪಿ’ ಅಂದರೆ, ಮೋಸ್ಟ್ ರೆಸ್ಪಾನ್ಸಿಬಲ್ ಪರ್ಸನ್ ಎಂಬ ವಿವರಣೆ ಚಿತ್ರತಂಡದ್ದು. “ಎಂಆರ್‌ಪಿ’ ಸಿನಿಮಾವನ್ನು ಎಂ. ಡಿ ಶ್ರೀಧರ್, ಎ. ವಿ ಕೃಷ್ಣಕುಮಾರ್, ಮೋಹನ್ ಕುಮಾರ್, ರಂಗಸಾಮಿ ಜಂಟಿಯಾಗಿ ನಿರ್ಮಿಸಿದ್ದಾರೆ. ಸಿನಿಮಾದ ಮೂರು ಹಾಡುಗಳಿಗೆ ಹರ್ಷವರ್ಧನ್ ರಾಜ್ ಸಂಗೀತ ಸಂಯೋಜಿಸಿದ್ದಾರೆ.
ಡಾ. ವಿ. ನಾಗೇಂದ್ರ ಪ್ರಸಾದ್ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ “ಎಂಆರ್‌ಪಿ’ ಸಿನಿಮಾದ ಟ್ರೇಲರ್ ನೋಡುಗರ ಗಮನ ಸೆಳೆಯಲು ಯಶಸ್ವಿಯಾಗಿದ್ದು, ಅದರಂತೆಯೇ ಸಿನಿಮಾ ಕೂಡ ಥಿಯೇಟರ್‌ನಲ್ಲಿ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂಬ ನಂಬಿಕೆ ಚಿತ್ರತಂಡದ್ದು.