ಉಡುಪಿ: ಜಿಲ್ಲೆಯ ಬಡ ಮತ್ತು ಮಧ್ಯಮ ವರ್ಗದ ರೋಗಿಗಳಿಗೆ ದುಬಾರಿಯಾಗಿದ್ದ ಎಂಆರ್‌ಐ ಸ್ಕ್ಯಾನಿಂಗ್ ಸೇವೆ ಇದೀಗ ಉಚಿತವಾಗಿ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಸಿಗಲಿದ್ದು, ಮುಂದಿನ 15 ದಿನಗಳೊಳಗೆ ಕಾರ್ಯಾರಂಭವಾಗಲಿದೆ.
ಅಪಘಾತ ಮತ್ತಿತರ ತುರ್ತು ಸಂದರ್ಭದಲ್ಲಿ ಎಂಆರ್‌ಐ ಸ್ಕ್ಯಾನಿಂಗ್ ಮಾಡಿಸಲು ಇನ್ನು ಖಾಸಗಿ ಸೆಂಟರ್‌ಗಳಿಗೆ ಹೋಗಬೇಕಾಗಿಲ್ಲ. ನಗರದ ಅಜ್ಜರಕಾಡುವಿನ ಅತ್ಯಾಧುನಿಕ ಎಂಆರ್‌ಐ ಸ್ಕ್ಯಾನಿಂಗ್ ಸೆಂಟರ್ ಪ್ರಾರಂಭಕ್ಕೆ ಅಗತ್ಯವಿರುವ ಸಿದ್ಧತೆ ನಡೆಯುತ್ತಿದೆ. 6 ಕೋ.ರೂ. ಮೌಲ್ಯದ ಎಂಆರ್‌ಐ ಯಂತ್ರವನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗಿದೆ. ಪ್ರಸ್ತುತ ಯಂತ್ರಗಳ ಅಳವಡಿಕೆ ಕೆಲಸ ಪ್ರಾರಂಭವಾಗಿದ್ದು, ಶೇ.90ರಷ್ಟು ಕೆಲಸ ಮುಕ್ತಾಯವಾಗಿದೆ.
ಕಡಿಮೆ ವೆಚ್ಚದಲ್ಲಿ ಸ್ಕ್ಯಾನಿಂಗ್
ಪ್ರತಿಷ್ಠಿತ ಆಸ್ಪತ್ರೆ ಹಾಗೂ ಕೆಲ ಖಾಸಗಿ ಸೆಂಟರ್‌ಗಳಲ್ಲಿ ಲಭ್ಯವಿರುವ ಎಂಆರ್‌ಐ ಸ್ಕ್ಯಾನಿಂಗ್ ಸೆಂಟರ್ ಸೇವೆ ಇನ್ನು ಜಿಲ್ಲಾಸ್ಪತ್ರೆ ರೋಗಿಗಳಿಗೆ ಉಚಿತವಾಗಿ ಸಿಗಲಿದೆ. ಬಡ ರೋಗಿಗಳ ವೆಚ್ಚವನ್ನು ಸರಕಾರವೇ ಭರಿಸಲಿದೆ. ಖಾಸಗಿ ಆಸ್ಪತ್ರೆ ರೋಗಿಗಳಿಗೆ ಇಲ್ಲಿ ಸ್ಕ್ಯಾನಿಂಗ್ ಮಾಡಿಸಿಕೊಳ್ಳಲು ಅವಕಾಶವಿದ್ದು, ಅವರು ಸರಕಾರ ನಿಗದಿಪಡಿಸಿದ 3,000 ರೂ. ಪಾವತಿಸಬೇಕು. ಇದೇ ಸ್ಕ್ಯಾನಿಂಗ್ ಖಾಸಗಿ ಸೆಂಟರ್‌ನಲ್ಲಿ 6,000 ರೂ. ನಿಂದ 10,000 ರೂ. ವರೆಗೆ ಇದೆ.
14 ಸಾವಿರ ಫಲಾನುಭವಿಗಳು!
ಜಿಲ್ಲಾಸ್ಪತ್ರೆಯಲ್ಲಿ ಎರಡು ವರ್ಷಗಳ ಹಿಂದೆ ಪ್ರಾರಂಭವಾದ ಸಿಟಿಸ್ಕ್ಯಾನಿಂಗ್ ಸೆಂಟರ್‌ನಲ್ಲಿ ತಿಂಗಳಿಗೆ ಸರಿಸುಮಾರು 600 ಮಂದಿ ಸಿಟಿಸ್ಕ್ಯಾನಿಂಗ್ ಮಾಡಿಸಿಕೊಳ್ಳುತ್ತಿದ್ದಾರೆ. ಇಲ್ಲಿಯವರೆಗೆ 14,400ಕ್ಕೂ ಅಧಿಕ ಮಂದಿ ರೋಗಿಗಳು ಸಿಟಿಸ್ಕ್ಯಾನಿಂಗ್ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಇಲ್ಲಿ ಸಹ ಜಿಲ್ಲಾಸ್ಪತ್ರೆ ಹಾಗೂ ಸರಕಾರಿ ಆಸ್ಪತ್ರೆಗಳಿಂದ ಬರುವ ರೋಗಿಗಳಿಗೆ ಉಚಿತವಾಗಿ ಸ್ಕ್ಯಾನಿಂಗ್ ಮಾಡಲಾಗುತ್ತದೆ. ಖಾಸಗಿ ಆಸ್ಪತ್ರೆಯಿಂದ ಬರುವವರು 1,500 ರೂ. ಪಾವತಿಸಬೇಕಾಗಿದೆ.
Related Articles
ಸೂಚನಾ ಫಲಕ
ಪ್ರಸ್ತುತ ಸಿಟಿ ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಎಲ್ಲ ಕಡೆಗಳಲ್ಲಿ ಉಚಿತ ಸೇವೆ ನೀಡುವುದಾಗಿ ಫಲಕಗಳನ್ನು ಅಳವಡಿಸಲಾಗಿದೆ. ಈ ಕೇಂದ್ರವು 24×7 ಕೆಲಸ ಮಾಡುತ್ತದೆ. 10 ಸಿಬಂದಿ ಶಿಫ್ಟ್ನಲ್ಲಿ ಕೆಲಸ ಮಾಡುತ್ತಾರೆ.
15 ದಿನಗಳಲ್ಲಿ ಪೂರ್ಣ
ಜಿಲ್ಲಾಸ್ಪತ್ರೆ ಆವರಣದಲ್ಲಿ ಪ್ರಾರಂಭಿಸಲಾದ ಸಿಟಿ ಸ್ಕ್ಯಾನಿಂಗ್‌ಗೆ ಉತ್ತಮವಾದ ಪ್ರತಿಕ್ರಿಯೆ ಸಿಕ್ಕಿದೆ. ಮುಂದಿನ 15ದಿನಗಳಲ್ಲಿ ಎಂಆರ್‌ಐ ಸ್ಕ್ಯಾನಿಂಗ್ ಸೆಂಟರ್ ಕೆಲಸ ಪೂರ್ಣಗೊಳ್ಳಲಿದೆ.
-ಡಾ| ಮಧುಸೂದನ್ ನಾಯಕ್ ಜಿಲ್ಲಾ ಸರ್ಜನ್, ಜಿಲ್ಲಾಸ್ಪತ್ರೆ, ಉಡುಪಿ
ಉಚಿತವಾಗಿ ಸ್ಕ್ಯಾನಿಂಗ್
ಎಂಆರ್‌ಐ ಯಂತ್ರದ ಅಳವಡಿಕೆ ಕೆಲಸಗಳು ಭರದಿಂದ ಸಾಗುತ್ತಿವೆ. ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಉಚಿತವಾಗಿ ಸ್ಕ್ಯಾನಿಂಗ್ ಮಾಡಲಾಗುತ್ತದೆ. ಖಾಸಗಿ ಆಸ್ಪತ್ರೆಯ ರೋಗಿಗಳು ಸರಕಾರ ನಿಗದಿಪಡಿಸಿದ ದರ ಪಾವತಿಸಬೇಕು. ಸೆಂಟರ್ ದಿನದ 24 ಗಂಟೆಯೂ ಕಾರ್ಯಾಚರಿಸಲಿದೆ.
-ನಿಲೇಶ್, ಮೇಲ್ವಿಚಾರಕ, ಎಂಆರ್‌ಐ ಸೆಂಟರ್ ಅಜ್ಜರಕಾಡು