Advertisement

ಮಿ. ಕ್ಲೀನ್‌

03:14 PM Nov 04, 2017 | |

ಹಿಂದಿನ ದಿನ ಆ ಜಾಗದ ಚಿತ್ರಣ ಬೇರೆಯಿತ್ತು. ರಾಶಿ ರಾಶಿ ಕಸ. ಕೊಳೆತು ನಾರುತ್ತಿದ್ದ ಆ ಕಸದ ನಡುವೆ ನಾಯಿಗಳು ಬ್ರೇಕ್‌ಫಾಸ್ಟ್‌ ಹುಡುಕುತ್ತಿದ್ದವು. ಕಸ ಎಸೆಯುವವರ ಹೊರತಾಗಿ ಯಾರೂ ಆ ಜಾಗದಲ್ಲಿ ಮೂರು ಸೆಕೆಂಡು ನಿಂತಿದ್ದನ್ನು ಅವು ಕೂಡ ಕಂಡಿಲ್ಲ. ಈ ಕಾರಣಕ್ಕೆ ಅವೆಲ್ಲ ಇದು “ನಮ್ಮದೇ ಅಡ್ಡಾ’ ಎಂಬ ಅಹಮ್ಮಿನಲ್ಲಿದ್ದವು.

Advertisement

ಆದರೆ, ಇಂದು ಬೆಳಗ್ಗೆ ಆ ಜಾಗದ ಚಿತ್ರಣ ಸಂಪೂರ್ಣ ಬದಲಾಗಿತ್ತು. ಅಲ್ಲಿದ್ದ ಕಸಗಳೆಲ್ಲ “ಕ್ಲೀನಥಾನ್‌’ ತಂಡ ವಿಲೇವಾರಿ ಮಾಡಿತ್ತು. ಕಸ ಎಸೆಯಲು ಡಸ್ಟ್‌ಬಿನ್‌ ಹಿಡಿದು ಬಂದೋರೆಲ್ಲ, ಬಂದ ದಾರಿಗೆ ಸುಂಕವಿಲ್ಲವೆಂದು ವಾಪಸಾಗುತ್ತಿದ್ದರು. ಕ್ಲೀನಥಾನ್‌ ಹುಡುಗರು ನಗುತ್ತಾ, ಬಣ್ಣ – ಕುಂಚ ಹಿಡಿದು, ಆ ಕಾಂಪೌಂಡಿಗೆ ಆಕರ್ಷಕ ಕಳೆ ಸೃಷ್ಟಿಸುತ್ತಿದ್ದರು. ಗೋಡೆಯ ಮೇಲೆ ಜಾನಪದ ಚಿತ್ರಗಳು ಕೈಕೈ ಹಿಡಿದು ಸಾಲುಗಟ್ಟಿದ್ದವು.

“ಬದಲಾಗಿ, ಬದಲಾಗಿಸೋಣ’ ಎಂಬ ಬರಹವನ್ನು ಆ ಗೊಂಬೆಗಳ ತಲೆಮೇಲೆ ಮೂಡಿಸಿದ್ದರು. ಎಷ್ಟೋ ವರ್ಷಗಳಿಂದ ಕಸವಿದ್ದು, ಈಗ ಕ್ಲೀನ್‌ ಆಗಿದ್ದ ಆ ಜಾಗದಲ್ಲಿ ಗಾಯಕ ವಾಸು ದೀಕ್ಷಿತ್‌ ಗಿಟಾರ್‌ ಮೇಲೆ ಬೆರಳಾಡಿಸುತ್ತಾ, ಹಾಡುತ್ತಿದ್ದರು; “ಈ ಭೂಮಿ ಸ್ವರ್ಗ ಆಗುತ್ತಿದೆ ನೋಡು…’ ಅಂತ. ಆ ಹಾಡು ಕಿವಿಗೆ ಬಿದ್ದಿದ್ದೇ ತಡ, ಇಲ್ಲಿಯ ತನಕ ಯಾರ್ಯಾರು ಅಲ್ಲಿ ಕಸ ಹಾಕುತ್ತಿದ್ದರೋ, ಅವರೆಲ್ಲ ಹಾಡು ಕೇಳಲು ಓಡೋಡಿ ಬಂದಿದ್ದರು.

ಹಾಗೆ ಬಂದ ಜನರನ್ನೆಲ್ಲ ಉದ್ದೇಶಿಸಿ ಒಬ್ಬ ಎಂಜಿನಿಯರಿಂಗ್‌ ವಿದ್ಯಾರ್ಥಿ ಮಾತಾಡುತ್ತಿದ್ದ: “ನೋಡಿ, ಈ ಜಾಗವನ್ನು ಸ್ವತ್ಛ ಮಾಡಿದ್ದೇವೆ. ಇಲ್ಲಿ ಒಳ್ಳೆಯ ಪೇಂಟಿಂಗ್‌ ಬಿಡಿಸಿದ್ದೇವೆ. ಇನ್ನೆಂದೂ ಇಲ್ಲಿ ಕಸ ಹಾಕೆºàಡಿ. ಒಂದು ವೇಳೆ ಕಸ ಹಾಕಿದರೆ, ಬಿಬಿಎಂಪಿ ಅಧಿಕಾರಿಗಳಿಗೆ ಕರೆಮಾಡಿ. ಹಾಗೆ ಕಸ ಹಾಕಿದವರ ಫೋಟೋ ತೆಗೆದು, ದಂಡ ಹಾಕ್ತಾರೆ’ ಎಂದು ಹೇಳಿ ಜಾಗೃತಿ ಮೂಡಿಸುತ್ತಿದ್ದ. 

ಆ ಹುಡುಗ ಇಷ್ಟಕ್ಕೇ ಸುಮ್ಮನಾಗಲಿಲ್ಲ. ಅಲ್ಲಿ ಕಸ ಎಸೆಯವ, ಮೂತ್ರ ಮಾಡುವ ಜನರ ಮನಃಸ್ಥಿತಿಯನ್ನು ದೂರ ಮಾಡಲು, ಆ ಜಾಗದಲ್ಲಿ ಒಬ್ಬ ಎಳನೀರು ಗಾಡಿಯವನನ್ನು ನಿಲ್ಲಿಸಿದ್ದ! ಅಲ್ಲಿ ಯಾರಾದರೂ ಕಸ ಎಸೆದರೆ, ಬಿಬಿಎಂಪಿಗೆ ದೂರು ಕೊಡುವ ಹೊಣೆ ಆ ವ್ಯಾಪಾರಿಯದ್ದು!

Advertisement

“ಲೆಟ್ಸ್‌ ಬಿ ದಿ ಚೇಂಜ್‌’ ಸಂಸ್ಥೆಯ ಕ್ಲೀನಥಾನ್‌ ತಂಡ ಕಳೆದ 4 ವರ್ಷಗಳಿಂದ ಬೆಂಗಳೂರಿನ 50 ವಾರ್ಡ್‌ನ 72 ಕಡೆಗಳಲ್ಲಿ ಈ ಕೆಲಸ ಮಾಡಿದೆ. ಬೆಂಗಳೂರಿನ ಬಡಾವಣೆಗಳ ಈ ಚಹರೆ ಬದಲಿಸುತ್ತಿರೋದು, ಅನಿರುದ್ಧ್ ದತ್‌ ಎಂಬ ಎಂಜಿನಿಯರಿಂಗ್‌ ವಿದ್ಯಾರ್ಥಿ!

ಕ್ಲೀನಥಾನ್‌ ಕಟ್ಟಿದಾಗ…
2013ರಲ್ಲಿ ಎಲ್ಲರೂ ಮ್ಯಾರಥಾನ್‌ಗಾಗಿ ಓಡುತ್ತಿದ್ದುದನ್ನು ನೋಡಿದ ಅನಿರುದ್ಧ್ ಸ್ವಚ್ಚತಾ ಕೆಲಸಕ್ಕೆ ಯುವಕರು ಓಡೋಡಿ ಬರುವಂತೆ ಮಾಡಲು, ಕ್ಲೀನಥಾನ್‌ ಕಟ್ಟಿದರು. ಹಾಗೆ ಕ್ಲೀನಥಾನ್‌ ಕಟ್ಟುವಾಗ ಮೋದಿ ಅವರ ಕಲ್ಪನೆಯ ಸ್ವತ್ಛ ಭಾರತ್‌ ಹುಟ್ಟೇ ಇರಲಿಲ್ಲ. ಆರಂಭದಲ್ಲಿ 35 ಯುವಕರು ಈ ಕೆಲಸದಲ್ಲಿ ತೊಡಗಿಸಿಕೊಂಡರು. ಆದರೆ, ಬರುತ್ತಾ ಬರುತ್ತಾ ಮೆಗಾ ಕ್ಲೀನಥಾನ್‌ನಲ್ಲಿ ಪಾಲ್ಗೊಳ್ಳುವವರ ಸಂಖ್ಯೆ 500 ದಾಟಿತು!

ಬದಲಾಯ್ತು ಮೆಜೆಸ್ಟಿಕ್‌!
ವರ್ಷದ ಕೆಳಗೆ ಮೆಜೆಸ್ಟಿಕ್‌ನ ರೂಪ ನೆನೆದರೆ, ನರಕದ ವಾತಾವರಣ ಕಣ್ಮುಂದೆ ಬರುತ್ತಿತ್ತು. ಆದರೆ, ಈಗ ಆ ಬಸ್‌ಸ್ಟಾಂಡಿನ ಸುತ್ತಮುತ್ತ ಓಡಾಡಲು ಯಾರಿಗೂ ಮುಜುಗರ ಆಗೋಲ್ಲ. ಅಲ್ಲೆಲ್ಲೂ ಗಲೀಜು ನಿಂತಿಲ್ಲ. ಕಳೆಹೀನವಾಗಿದ್ದ ಕಾಂಪೌಂಡಿನಲ್ಲಿ ನೂರಾರು ಚಿತ್ರಗಳು ನಗುತ್ತಿವೆ. ಯಾರ ಮೂಗಿಗೂ ವಾಸನೆ ರುಮ್ಮನೆ ನುಗ್ಗುತ್ತಿಲ್ಲ. ಮೆಜೆಸ್ಟಿಕ್‌ನ ರೂಪವನ್ನು ಹೀಗೆ ಬದಲಿಸಿದ್ದು ಇದೇ ಮೆಗಾ ಕ್ಲೀನಥಾನ್‌ ತಂಡ. 2016ರಲ್ಲಿ ಒಟ್ಟು 450 ಮಂದಿ ಮೆಜೆಸ್ಟಿಕ್ಕಿನ 10 ಕಡೆಗಳಲ್ಲಿ ಕೇವಲ 6 ಗಂಟೆಗಳಲ್ಲಿ ಸ್ವತ್ಛಗೊಳಿಸಿದ್ದರು!

ಬ್ಯಾಂಡ್‌ ಬಂತು…
ಕಸ ಹಾಕುವ ಜಾಗಗಳನ್ನು ಸ್ವತ್ಛಗೊಳಿಸಿ, ಪೇಂಟಿಂಗ್‌ ಮಾಡಿಯಷ್ಟೇ ಇವರು ಬರೋದಿಲ್ಲ. ಮ್ಯೂಸಿಕ್‌ ಬ್ಯಾಂಡ್‌ಗಳ ಜತೆ ಟೈಅಪ್‌ ಆಗಿ, ಅವರಿಂದ ಅಲ್ಲಿ ಹಾಡಿಸುತ್ತಾರೆ. ಅಲ್ಲಿ ಜನ ಸೇರಿದಾಗ, ಅವರಿಗೆ ಸ್ವತ್ಛತೆ ಕುರಿತು ಜಾಗೃತಿ ಮೂಡಿಸುತ್ತಾರೆ. ಹಾಗೆ ಕ್ಲೀನಿಂಗ್‌ ನಡೆಯುವಾಗ, ಎದುರಿನ ಟೇಬಲ್ಲಿನ ಮೇಲೆ ಡೊನೇಶನ್‌ ಬಾಕ್ಸ್‌ ಇಟ್ಟಿರುತ್ತಾರೆ.

ಕ್ಲೀನಥಾನ್‌ ಖರ್ಚು ವೆಚ್ಚಗಳಿಗೆ ಈ ಡೊನೇಶನ್ನೇ ಆಕರ. ಬಿಬಿಎಂಪಿಯ ಪ್ರತಿ ವಾರ್ಡಿನ ಕಚೇರಿಯಲ್ಲಿ ಎಂಜಿನಿಯರ್‌, ಹೆಲ್ತ್‌ ಇನ್ಸ್‌ಪೆಕ್ಟರ್‌ ಇರುತ್ತಾರೆ. ಅವರ ಕೆಲಸವೇ ಸ್ವತ್ಛತೆ ಕುರಿತು ಅರಿವು ಮೂಡಿಸೋದು. ಜನರಿಗೆ ಈ ಬಗ್ಗೆ ಅರಿವು ಮೂಡಿಸುವಲ್ಲಿಯೂ ಕ್ಲೀನಥಾನ್‌ ನೆರವಾಗಿದೆ. 

ಅರುಣ್‌ ಸಾಗರ್‌, ಸಂತೋಷ್‌ ಹೆಗ್ಡೆ…
ಅವತ್ತು ಬನಶಂಕರಿ 2ನೇ ಸ್ಟೇಜ್‌ನಲ್ಲಿ ಸ್ವತ್ಛತೆ ಕೆಲಸ ನಡೆಯುತ್ತಿತ್ತು. ಕ್ಲೀನಥಾನ್‌ ತಂಡಕ್ಕೆ ಅಚ್ಚರಿಯೆಂಬಂತೆ ಆ ಕೆಲಸದಲ್ಲಿ ಸೇರಿಕೊಂಡಿದ್ದು ನಟ ಅರುಣ್‌ ಸಾಗರ್‌ ಮತ್ತು ಅವರ ಪತ್ನಿ ಮೀರಾ. ಇನ್ನೊಂದು ಕಡೆ ಸ್ವತ್ಛತೆ ನಡೆಯುತ್ತಿದ್ದಾಗ, ಯಾರೋ ಕಾರು ನಿಲ್ಲಿಸಿದರು. ಆ ಕಾರಿನಿಂದ ಇಳಿದುಬಂದಿದ್ದು, ಮಾಜಿ ಲೋಕಾಯುಕ್ತ ಸಂತೋಷ್‌ ಹೆಗ್ಡೆ. ಅವರೂ ಕೆಲ ಹೊತ್ತು ಕಸ ವಿಲೇವಾರಿಗೆ ಸಹಕರಿಸಿದರು.

50- ಕ್ಲೀನಥಾನ್‌ ನಡೆದ ಒಟ್ಟು ವಾರ್ಡ್‌ಗಳು
72- ಇಷ್ಟು ಸ್ಥಳಗಳ ಚಹರೆಯನ್ನೇ ಈ ತಂಡ ಬದಲಿಸಿದೆ 
450- ಮೆಜೆಸ್ಟಿಕ್‌ನ ಶುಚಿಗೊಳಿಸಿ, ರೂಪ ಬದಲಿಸಿದ ಒಟ್ಟು ಮಂದಿ

ಸ್ವತ್ಛ ಭಾರತ್‌ ಬಂದ ಮೇಲೆ ನಮ್ಮ ಕೆಲಸಕ್ಕೆ ಬಲ ಬಂದಿದೆ. ಪ್ರತಿ ವಾರ್ಡಿನಲ್ಲೂ ತಂಡ ರಚಿಸಲು ಯೋಜಿಸಿದ್ದೇವೆ. ಕಸ ಹಾಕುವ ಮನಃಸ್ಥಿತಿಯನ್ನು ಬದಲಿಸುವುದೇ ಕ್ಲೀನಥಾನ್‌ ಉದ್ದೇಶ.
-ಅನಿರುದ್ಧ್ ದತ್‌, ಕ್ಲೀನಥಾನ್‌ ಆಯೋಜಕ

* ಕೀರ್ತಿ

Advertisement

Udayavani is now on Telegram. Click here to join our channel and stay updated with the latest news.

Next