Advertisement

ಎಂಆರ್‌ ಲಸಿಕೆ ಅಭಿಯಾನ ಯಶಸ್ವಿಯಾಗಲಿ; ವದಂತಿಗೆ ಕಿವಿಗೊಡಬೇಡಿ

03:45 AM Feb 08, 2017 | |

ಅಪಪ್ರಚಾರಗಳಿಗೆ ಕಿವಿಗೊಡದೆ, ಮಕ್ಕಳ ಆರೋಗ್ಯ ಕಾಪಾಡುವ ಉನ್ನತ ಉದ್ದೇಶದಿಂದ ಆರಂಭವಾಗಿರುವ ಎಂಆರ್‌ ಲಸಿಕೆ ಅಭಿಯಾನ ಯಶಸ್ವಿಗೊಳಿಸಲು ಪ್ರತಿಯೊಬ್ಬ ಹೆತ್ತವರೂ ಮನಸ್ಸು ಮಾಡಬೇಕು. ಈ ನಿಟ್ಟಿನಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಸರಕಾರ ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸಬೇಕಿದೆ.

Advertisement

ಮಕ್ಕಳಿಗೆ ತಗಲುವ ದಡಾರ ಮತ್ತು ರುಬೆಲ್ಲಾ ಎಂಬೆರಡು ಮಾರಕ ರೋಗಗಳನ್ನು ನಿರ್ಮೂಲನಗೊಳಿಸುವ ಸಲುವಾಗಿ ಕೇಂದ್ರ ಸರಕಾರ ವಿಶ್ವ ಆರೋಗ್ಯ ಸಂಸ್ಥೆಯ ಸೂಚನೆಯಂತೆ ಪ್ರಾರಂಭಿಸಿರುವ ಎಂಆರ್‌ ಲಸಿಕೆ ಅಭಿಯಾನಕ್ಕೆ ರವಿವಾರ ರಾಜ್ಯದಲ್ಲಿ ಚಾಲನೆ ನೀಡಲಾಗಿದೆ. ಫೆ.7ರಿಂದ ತೊಡಗಿ 28ರ ವರೆಗೆ ಕರ್ನಾಟಕದ ಜತೆಗೆ ತಮಿಳುನಾಡು, ಪಾಂಡಿಚೇರಿ, ಗೋವಾ, ಲಕ್ಷದ್ವೀಪಗಳಲ್ಲಿ ಈ ಅಭಿಯಾನ ನಡೆಯಲಿದೆ. ರಾಜ್ಯದ ಸುಮಾರು 1.6 ಕೋಟಿ ಮಕ್ಕಳೂ ಸೇರಿದಂತೆ ಒಟ್ಟಾರೆ ಸುಮಾರು 3.6 ಕೋಟಿ ಮಕ್ಕಳಿಗೆ ಚುಚ್ಚುಮದ್ದಿನ ರೂಪದಲ್ಲಿ ಈ ಲಸಿಕೆಯನ್ನು ನೀಡಲಾಗುತ್ತದೆ. 9 ತಿಂಗಳಿಂದ ಹಿಡಿದು 15 ವರ್ಷದ ನಡುವಿನ ಎಲ್ಲ ಮಕ್ಕಳು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು. ಎಲ್ಲ ಶಾಲೆಗಳಲ್ಲಿ, ಅಂಗನವಾಡಿ ಕೇಂದ್ರಗಳಲ್ಲಿ ಮತ್ತು ಸರಕಾರಿ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡುವ ಏರ್ಪಾಡು ಮಾಡಲಾಗಿದೆ. ಪೋಲಿಯೊ ಬಳಿಕ ಅತ್ಯಂತ ವ್ಯಾಪಕವಾಗಿ ನಡೆಯುತ್ತಿರುವ ಲಸಿಕೆ ಕಾರ್ಯಕ್ರಮವಿದು. 

ಆಘಾತಕಾರಿ ವಿಷಯವೆಂದರೆ ರುಬೆಲಾ ಮತ್ತು ದಡಾರ ಲಸಿಕೆ ವಿರುದ್ಧ ಕೆಲವೊಂದು ಸ್ಥಾಪಿತ ಹಿತಾಸಕ್ತಿಗಳು ವ್ಯವಸ್ಥಿತವಾಗಿ ಅಪಪ್ರಚಾರ ನಡೆಸುತ್ತಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಲಸಿಕೆ ಕುರಿತು ಭೀತಿ ಹುಟ್ಟಿಸುವ ಮತ್ತು ತಪ್ಪು ಅಭಿಪ್ರಾಯ ಮೂಡಿಸುವ ಮಾಹಿತಿಗಳು ಹರಿದಾ ಡುತ್ತಿವೆ. ಲಸಿಕೆಗೆ ಧರ್ಮದ ಬಣ್ಣ ನೀಡಿ ರುವುದು ತೀವ್ರ ಕಳವಳ ಹುಟ್ಟಿಸುವ ಕೃತ್ಯ. ಈ ಅಪಪ್ರಚಾರದ ಹಿಂದೆ ಔಷಧ ಮಾಫಿಯಾ ಕೈವಾಡವಿದೆ ಎಂಬ ಅನುಮಾನವೂ ವ್ಯಕ್ತವಾಗಿದೆ. 

ಲಸಿಕೆಗಳ ವಿರುದ್ಧ ಈ ರೀತಿಯ ಅಪಪ್ರಚಾರ ನಡೆಯುತ್ತಿರುವುದು ಇದೇ ಮೊದಲಲ್ಲ. ಕೇರಳ, ಉತ್ತರ ಪ್ರದೇಶ ಮತ್ತಿತರ ರಾಜ್ಯಗಳಲ್ಲಿ ಪೋಲಿಯೊ ಲಸಿಕೆ ಅಭಿಯಾನದ ಕುರಿತು ಇದೇ ರೀತಿ ವ್ಯವಸ್ಥಿತ ಅಪ ಪ್ರಚಾರ ಮಾಡಲಾಗಿತ್ತು. ಇವುಗಳನ್ನು ನಂಬಿ ಅನೇಕ ಪೋಷಕರು ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಿಕೊಂಡಿರಲಿಲ್ಲ. ಪ್ರಸ್ತುತ ದಡಾರ, ರುಬೆಲ್ಲಾ ಲಸಿಕೆ ವಿಚಾರದಲ್ಲೂ ಇದೇ ಆಗು ತ್ತಿದೆ. ಈ ಸಂದರ್ಭದಲ್ಲಿ ಲಸಿಕೆ ಕುರಿತು ಜನರಿಗೆ ಸಂಪೂರ್ಣ ಮಾಹಿತಿ ನೀಡಿ ಅರಿವು ಮೂಡಿಸುವುದೇ ಅಪಪ್ರಚಾರವನ್ನು ತಡೆಯುವ ಪರಿಣಾಮಕಾರಿ ಕ್ರಮ. ವಿವಿಧ ಇಲಾಖೆಗಳು ಈ ನಿಟ್ಟಿನಲ್ಲಿ ಈಗಾಗಲೇ ಒಂದಷ್ಟು ಕೆಲಸ ಮಾಡಿವೆ. ಇದೀಗ ಲಸಿಕೆ ಹಾಕುವ ಕಾರ್ಯಕ್ರಮ ಶುರುವಾಗಿರುವುದರಿಂದ ಅಪಪ್ರಚಾರ ಇನ್ನಷ್ಟು ಬಿರುಸಾಗುವ ಸಾಧ್ಯತೆಯಿದೆ. ಹೀಗಾಗಿ ಸರಕಾರ ಮತ್ತು ಆರೋಗ್ಯ ಇಲಾಖೆ ಈಗ ಸಮರೋಪಾದಿಯಲ್ಲಿ ಪೋಷಕರ ಮನವೊಲಿಸುವ ಕೆಲಸ ಮಾಡಬೇಕು. 

ದಡಾರ ಮತ್ತು ರುಬೆಲ್ಲಾ ಮಾರಣಾಂತಿಕ ಕಾಯಿಲೆಗಳಾಗಿದ್ದು, 2015ರಲ್ಲಿ ಭಾರತದಲ್ಲಿ ಶೇ.36 ಮಕ್ಕಳು ಈ ಕಾಯಿಲೆಗಳಿಗೆ ಬಲಿಯಾಗಿದ್ದಾರೆ. ಈ ಅಂಕಿಅಂಶವನ್ನು ಗಂಭೀರವಾಗಿ ಪರಿಗಣಿಸಿ ರುವ ಕೇಂದ್ರ 2020ರೊಳಗೆ ದಡಾರ ಮತ್ತು ರುಬೆಲ್ಲಾವನ್ನು ನಿರ್ಮೂಲನಗೊಳಿಸುವ ಗುರಿ ಇರಿಸಿಕೊಂಡಿದೆ. ಮಗುವಿಗೆ ಒಂದು ವರ್ಷವಾದಾಗ ಒಮ್ಮೆ ಮತ್ತು 4 ವರ್ಷವಾಗುವಾಗ ಇನ್ನೊಮ್ಮೆ ಎಂಆರ್‌ ಲಸಿಕೆ ಹಾಕಿಸಿದ್ದೇವೆ, ಇನ್ನೊಮ್ಮೆ ಹಾಕಿಸುವ ಅಗತ್ಯವೇನು ಎಂಬ ಗೊಂದಲ ಅನೇಕ ಪೋಷಕರನ್ನು ಕಾಡುತ್ತಿದೆ. ಆರೋಗ್ಯ ಇಲಾಖೆ ಈ ಪ್ರಶ್ನೆಗೆ ಸಮರ್ಪಕ ಉತ್ತರ ನೀಡಿ ಗೊಂದಲವನ್ನು ದೂರ ಮಾಡಬೇಕು. ಸಾಮಾನ್ಯವಾಗಿ ಈ ಲಸಿಕೆಯನ್ನು ದಡಾರ, ಮಂಗನಬಾವು ಮತ್ತು ರುಬೆಲಾ ಕಾಯಿಲೆಗಳಿಗೆ ಸಂಯುಕ್ತವಾಗಿ ಎಂಎಂಆರ್‌ ಲಸಿಕೆಯಾಗಿ ನೀಡಲಾಗುತ್ತದೆ. ಆದರೆ ಈಗ ದಡಾರ ಮತ್ತು ರುಬೆಲಾಕ್ಕೆ ಮಾತ್ರ ನೀಡಲಾಗುತ್ತಿರುವುದು ಕೂಡ ಕೊಂಚ ಗೊಂದಲ ಉಂಟುಮಾಡಿದೆ. ಇದರ ಹಿಂದಿನ ಕಾರಣವನ್ನು ಸರಕಾರ ತಿಳಿಸಬೇಕು. 

Advertisement

ಮಕ್ಕಳ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಆರಂಭ ಮಾಡಿರುವ ಎಂಆರ್‌ ಲಸಿಕೆ ಅಭಿಯಾನಕ್ಕೆ ಪೋಲಿಯೋ ಲಸಿಕೆ ಅಭಿಯಾನಕ್ಕೆ ಲಭಿಸಿದಂತಹ ಯಶಸ್ಸು ಲಭಿಸಲಿ. ಎಲ್ಲ ಮಕ್ಕಳ ಹೆತ್ತವರು ಇದಕ್ಕೆ ಸಹಕಾರವನ್ನು ನೀಡಬೇಕು. ಆರೋಗ್ಯ ಇಲಾಖೆಯೂ ಪರಿಣಾಮಕಾರಿಯಾದ ಅರಿವು ಮೂಡಿಸುವ ಕಾರ್ಯಕ್ರಮಗಳ ಮೂಲಕ ಅಪಪ್ರಚಾರಗಳಿಗೆ ಉತ್ತರಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next