Advertisement

ಹೊಟ್ಟೇಲೇ ಮಗು ಇಟ್ಕೊಂಡ್ರೆ ಸತ್ತೋಗತ್ತೆ; ರಘುವರ್ಧನ್‌

05:42 PM Feb 08, 2018 | Team Udayavani |

ರಘುವರ್ಧನ್‌ ನಿರ್ದೇಶನದ “ಮಿಸ್ಟರ್‌ ಎಲ್‌ಎಲ್‌ಬಿ’ ಚಿತ್ರವು ಮುಂದಿನ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ಶಿಶಿರ್‌ ಶಾಸ್ತ್ರಿ ಮತ್ತು ಲೇಖ ಚಂದ್ರ ನಟಿಸಿದ್ದು, ಚಿತ್ರಕ್ಕೆ ಮಂಜು ಚರಣ್‌ ಸಂಗೀತ ಸಂಯೋಜಿಸುತ್ತಿದ್ದಾರೆ.

Advertisement

ವಾರಕ್ಕೆ ಆರು-ಎಂಟು ಸಿನಿಮಾ ಬಿಡುಗಡೆಯಾಗುತ್ತಿರುವ ಸಂದರ್ಭದಲ್ಲಿ, “ಮಿಸ್ಟರ್‌ ಎಲ್‌ಎಲ್‌ಬಿ’ ಬಿಡುಗಡೆ ಮಾಡುತ್ತಿರುವುದು ಸ್ವಲ್ಪ ರಿಸ್ಟಿ ಅಲ್ಲವೇ ಎಂದರೆ, ನಿರ್ಮಾಪಕ ಮತ್ತು ನಿರ್ದೇಶಕ ರಘುವರ್ಧನ್‌, ತಮಗೆ ಬೇರೆ ದಾರಿಯೇ ಇಲ್ಲ ಎನ್ನುತ್ತಾರೆ. “ನಮ್ಮ ಚಿತ್ರ ಸೆನ್ಸಾರ್‌ ಆಗಿಯೇ ಮೂರು ತಿಂಗಳಾಗಿದೆ. ಆಗ ಪ್ರತಿ ವಾರ ಎರಡೂ, ಮೂರು ಚಿತ್ರಗಳು ಬಿಡುಗಡೆಯಾಗುತ್ತಿದ್ದವು. ಸ್ವಲ್ಪ ರಶ್‌ ಕಡಿಮೆಯಾಗಲಿ ಎಂದು ನಾವು ಕಾದಿದ್ದಾಯಿತು. ಈಗ ವಾರಕ್ಕೆ ಆರು, ಎಂಟು ಚಿತ್ರಗಳು ಬಿಡುಗಡೆಯಾಗುತ್ತಿವೆ. ಇನ್ನೂ ಎಷ್ಟು ಅಂತ ಕಾಯೋದು? ಹೊಟ್ಟೆಯಲ್ಲೇ ಮಗು ಇಟ್ಟುಕೊಂಡರೆ, ಮಗು ಸತ್ತೋಗತ್ತೆ. ಹಾಗಾಗಿ ಬೇರೆ ದಾರಿ ಇಲ್ಲದೆ ಚಿತ್ರ ಬಿಡುಗಡೆ ಮಾಡುತ್ತಿದ್ದೇವೆ. ನಮಗೆ ನಮ್ಮ ಚಿತ್ರದ ಮೇಲೆ ನಂಬಿಕೆ ಇದೆ. ಮಾಧ್ಯಮಗಳ ಪ್ರೋತ್ಸಾಹ ಕೊಟ್ಟರೆ, ಜನ ಬಂದು ಸಿನಿಮಾ ನೋಡುವುದರಲ್ಲಿ ಅನುಮಾನವೇ ಇಲ್ಲ’ ಎನ್ನುತ್ತಾರೆ ರಘುವರ್ಧನ್‌.

ಅವರು ಕಂಡಂತೆ ಸಿನಿಮಾ ಬಿಡುಗಡೆ ಬಹಳ ಕಷ್ಟವಾಗಿಬಿಟ್ಟಿದೆಯಂತೆ. “ಸಿನಿಮಾ ಬಿಡುಗಡೆ ಮಾಡೋದು ಅಷ್ಟು ಸುಲಭವಲ್ಲ. ಇಲ್ಲಿ ಎಲ್ಲವೂ ಸಮಸ್ಯೆಯೇ. ವಿತರಕರ ಸಮಸ್ಯೆ, ಚಿತ್ರರಂಗದ ಸಮಸ್ಯೆ … ಹೀಗೆ ಹಲವು ಸಮಸ್ಯೆಗಳ ಮಧ್ಯೆಯೇ 50-60 ಚಿತ್ರಮಂದಿರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ. ಇದೊಂದು ಅಚ್ಚ ಕನ್ನಡದ ಗ್ರಾಮೀಣ ಸೊಗಡಿನ ಚಿತ್ರ. ಹಳ್ಳಿಯಲ್ಲಿನ ಸಣ್ಣಸಣ್ಣ ರಾಜಕೀಯವನ್ನು ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇವೆ. ಇಲ್ಲಿ ಹಾಸ್ಯ ಪ್ರಧಾನವಾಗಿ ಇರಲಿದೆ. ಅದರ ಜೊತೆಗೆ ಸೆಂಟಿಮೆಂಟ್‌ ಸಹ ಇದೆ. ಚಿತ್ರದಲ್ಲಿ ತಂದೆ-ತಾಯಿ ಅಂತ ಪೋಷಕ ಪಾತ್ರಗಳು ಇಲ್ಲ. ಯಾವ್ಯಾವುದೋ ಪಾತ್ರಗಳು ಬಂದು ನಾಯಕನ ಜೊತೆಗೆ ಸೇರಿಕೊಳ್ಳುತ್ತವೆ’ ಎನ್ನುತ್ತಾರೆ ರಘುವರ್ಧನ್‌.

“ಮಿಸ್ಟರ್‌ ಎಲ್‌ಎಲ್‌ಬಿ’ ಚಿತ್ರದಲ್ಲಿ ನಾಯಕ, ಇಡೀ ಊರಿಗೆ ಕ್ವಾಟ್ಲೆ ಕೊಟ್ಟರೆ, ನಾಯಕನಿಗೇ ಕ್ವಾಟ್ಲೆ ಕೊಡುವ ಪಾತ್ರ ತಮ್ಮದು ಎನ್ನುತ್ತಾರೆ ನಾಯಕಿ ಲೇಖ ಚಂದ್ರ. ತಮ್ಮದು ಬಂದು ಹೋಗುವ ಪಾತ್ರವಲ್ಲ, ಪ್ರಾಮುಖ್ಯತೆ ಇರುವ ಪಾತ್ರ ತಮ್ಮದು ಎನ್ನುತ್ತಾರೆ. ಇನ್ನು ಚಿತ್ರದಲ್ಲಿ ಶ್ರೀನಿವಾಸ ಗೌಡ, ಕೆಂಪೇಗೌಡ, ನಾರಾಯಣಸ್ವಾಮಿ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next