“ತೊಂಬತ್ತರ ದಶಕದ ಆರಂಭ; ಆಗಷ್ಟೇ ಶಿವಮೊಗ್ಗೆಯಲ್ಲಿ ಪಿಯುಸಿ ಮುಗಿಸಿ ವೃತ್ತಿಪರ ಶಿಕ್ಷಣಕ್ಕಾಗಿ ಮಣಿಪಾಲಕ್ಕೆ ಸೇರಿದ್ದ ದಿನಗಳು. ಬೆಳಗ್ಗೆಯಿಂದ ಸಂಜೆಯವರೆಗೆ ಕ್ಲಾಸ್, ಪ್ರಾಕ್ಟಿಕಲ್, ಲ್ಯಾಬ್ ಮತ್ತು ಕ್ಲಿನಿಕಲ್ ವರ್ಕ್ ಹೀಗೆ ಸುತ್ತಾಟವಾದರೆ ರಾತ್ರಿ ವೇಳೆ ಲೈಬ್ರರಿಯಲ್ಲಿ ಓದು ಸಾಗುತ್ತಿತ್ತು. ಹೊಸದಾಗಿದ್ದ ಹಾಸ್ಟೆಲ್ ಜೀವನ ಒಂಥರಾ ಕಷ್ಟವಾಗಿದ್ದರೂ ಮತ್ತೂಂದು ರೀತಿಯಲ್ಲಿ ಮಜವೂ ಆಗಿತ್ತು. ಮೆಸ್ ಊಟ, ಸ್ನೇಹಿತರ ಜತೆ ತಿರುಗಾಟ, ಸಣ್ಣಪುಟ್ಟ ಕಿತ್ತಾಟ… ಎಲ್ಲವೂ ಇಷ್ಟವಾಗಿತ್ತು.
ಅದೊಂದು ದಿನ ಥಿಯರಿ ಕ್ಲಾಸ್ ಮುಗಿಸಿ ಕ್ಲಿನಿಕ್‌ಗೆ ಬರುವಾಗ ಕಾರಿಂದ ಬಿಳಿ ಜುಬ್ಟಾ- ಪಂಚೆ ತೊಟ್ಟ ಬೆಳ್ಳಿ ಕೂದಲಿನ ಹಿರಿಯರೊಬ್ಬರು ಇಳಿಯುತ್ತಿದ್ದರು. ದಿನಕ್ಕೆ ನೂರಾರು ಜನ ಬರುವ ಆಸ್ಪತ್ರೆಯದು. ಯಾರಿಗೂ ಯಾರನ್ನೂ ಸುಮ್ಮನೇ ನೋಡಲು- ಮಾತನಾಡಲು ಪುರುಸೊತ್ತಿಲ್ಲ. ಅದೂ ಅಲ್ಲದೇ ವಿದ್ಯಾರ್ಥಿಗಳಾಗಿದ್ದ ನಮಗಂತೂ ಉಸಿರಾಡಲೂ ಸರಿಯಾಗಿ ಸಮಯವಿರಲಿಲ್ಲ. ಒಂದು ಕಟ್ಟಡದಿಂದ ಇನ್ನೊಂದಕ್ಕೆ ಓಡುವುದು, ಕೆಲಸ ಮುಗಿಸುವುದಷ್ಟೇ ಗುರಿ. ಹೀಗಾಗಿ ಕೈಯ್ಯಲ್ಲಿ ಪುಸ್ತಕ ಹಿಡಿದು ನಡೆಯುವುದು, ಅಲ್ಲ, ರನ್ನಿಂಗ್‌ರೇಸ್ ಮಾಡುತ್ತಿದ್ದೆವು ಎಂಬುದೇ ಸರಿ. ಹಾಗಾಗಿಯೇ ಈ ಹಿರಿಯರ ಬಗ್ಗೆ ವಿಶೇಷ ಗಮನ ನೀಡಿರಲಿಲ್ಲ. ಆದರೆ, ಮಧ್ಯಾಹ್ನ ಊಟದ ಸಮಯದಲ್ಲಿ ಸೀನಿಯರ್ “ಕಾರಂತ್ ಎನ್ನುವ ಕನ್ನಡದ ದೊಡ್ಡ ರೈಟರ್ ಇವತ್ತು ಬಂದಿದ್ರು’ ಎಂದಾಗ ನನಗೆ ರೋಮಾಂಚನ. ಜತೆಯಲ್ಲಿದ್ದ ಮಲೇಷ್ಯನ್, ಉತ್ತರ ಭಾರತೀಯ ಹುಡುಗಿಯರು ಹೌದಾ ಎಂದಷ್ಟೇ ನುಡಿದು ಸುಮ್ಮನಾದರೂ ನನಗೆ ಎಂಥಾ ಸುವರ್ಣ ಅವಕಾಶ ತಪ್ಪಿತಲ್ಲಾ ಎಂಬ ಹಳಹಳಿಕೆ. ನನ್ನ ಮೆಚ್ಚಿನ ಕಡಲ ತೀರದ ಭಾರ್ಗವರ ಜತೆ ಮಾತನಾಡುವುದನ್ನು ತಪ್ಪಿಸಿಕೊಂಡಿದ್ದು ಒಂದಲ್ಲ, ಎರಡನೇ ಬಾರಿಯಾಗಿತ್ತು! ಏಳನೇ ತರಗತಿಯಲ್ಲಿದ್ದಾಗ ಗುಲ್ಬರ್ಗಾದಲ್ಲಿ ನಡೆದ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಶಿವಮೊಗ್ಗ ಜಿಲ್ಲೆಯ ಪ್ರತಿನಿಧಿಯಾಗಿ ಭಾಗವಹಿಸಿದ್ದೆ. ಆಗ ಕಾರಂತರು ನಮ್ಮ ಗೋಷ್ಠಿಗೆ ಬಂದಿದ್ದರು. ಮಾತನಾಡುವ ಅವಕಾಶವಿದ್ದರೂ ಹೆದರಿಕೆ ಮತ್ತು ಸಂಕೋಚದಿಂದ ದೂರವೇ ಉಳಿದಿದ್ದೆ. ಈಗ ಅನಾಯಾಸವಾಗಿ ದೊರೆತ ಅವಕಾಶ ಕೈಬಿಟ್ಟಿದ್ದೆ. ಆದರೂ “ಹಲ್ಲಿನ ಚಿಕಿತ್ಸೆಗಾಗಿ ಮತ್ತೂ ಒಂದೆರಡು ಬಾರಿ ಬರಬಹುದೇನೋ!’ಎಂದು ಸೀನಿಯರ್ ಹೇಳಿದ ಮಾತು ಆಶಾಕಿರಣವಾಗಿತ್ತು.
ಅಂದಿನಿಂದ ಎಲ್ಲಾದರೂ ಕಾರಂತರು ಕಂಡರೆ ಎಂದು ಹುಡುಕುವ ಹದ್ದಿನ ಕಣ್ಣು ನನ್ನದಾಗಿತ್ತು! ಯಾರಾದರೂ ಬಿಳಿಕೂದಲಿನ, ಪಂಚೆ ಉಟ್ಟ ಹಿರಿಯರ ಬೆನ್ನು ಕಾಣಿಸಿದರೆ ಸರಸರ ಓಡಿ ಅವರ ಮುಖ ನೋಡುವವರೆಗೆ ಸಮಾಧಾನವಿರುತ್ತಿರಲಿಲ್ಲ. ಕ್ಲಾಸಿನ ಹುಡುಗರು “ಅಜ್ಜಂದಿರ ಮೇಲೆ ಲವ್ವಾ?’ಎಂದು ಚುಡಾಯಿಸಿ ಬೈಸಿಕೊಂಡಿದ್ದರು. ಅಂತೂ ಅದೊಂದು ದಿನ ಕ್ಲಾಸ್ ಮುಗಿಸಿ ಒಬ್ಬಳೇ ಲೈಬ್ರರಿಗೆ ಹೊರಟಿದ್ದೆ. ಆಸ್ಪತ್ರೆಯಲ್ಲಿ, ಕಾಯುತ್ತಾ ಕುಳಿತಿದ್ದ ಹೊರರೋಗಿಗಳ ಸಂಖ್ಯೆ ಕಡಿಮೆ ಇತ್ತು. ಮೇಲಿನ ಮಹಡಿಯಿಂದ ಕೆಳಗೆ ಇಳಿದು ಬರುತ್ತಿದ್ದ ನನ್ನ ಕಣ್ಣು ಸುಮ್ಮನೇ ಮೂಲೆಯತ್ತ ಹೊರಳಿತ್ತು. ಗರಿಗರಿ, ಬಿಳಿ ಬಿಳಿ ಪಂಚೆ- ಶರ್ಟ್ ತೊಟ್ಟು ಕೈಯ್ಯಲ್ಲಿ ದಿನಪತ್ರಿಕೆ ಹಿಡಿದು ತಲೆ ತಗ್ಗಿಸಿ ಮಗ್ನರಾಗಿದ್ದರು. ಹಿರಿಯರು ಕಾರಂತರೇ ಇರಬಹುದೇ ಎಂಬ ಸಣ್ಣ ಅನುಮಾನ ಮೂಡಿತ್ತು. ಅಷ್ಟರಲ್ಲಿ ಅವರ ಮುಖ ನನ್ನತ್ತ ಹೊರಳಿತ್ತು; ಅನುಮಾನವೇಇಲ್ಲ, ನಮ್ಮ ಕಾರಂತರೇ! ಆ ವಯಸ್ಸಿನಲ್ಲೂ ತೀಕ್ಷ್ಣ ಕಣ್ಣುಗಳ ಪ್ರಭೆಗೆ ಒಳಗೊಳಗೇ ಹೆದರಿಕೆ. ಅದೂ ಅಲ್ಲದೇ, ಪರಿಚಿತರಲ್ಲಿ ಹಲವರು “ಕಾರಂತರು ಬಹಳ ಮೂಡಿ. ಸಿಟ್ಟು ಬಂದರೆ ಯಾರೇ ಆದರೂ ಬಯ್ಯುವುದೇ’ ಎಂದು ತಮ್ಮತಮ್ಮಲ್ಲೇ ಹೇಳುತ್ತಿದ್ದದ್ದು ಮನಸ್ಸಿನಲ್ಲಿ ಬೇರೂರಿತ್ತು. ಆದರೂ ಗಟ್ಟಿ ಮನಸ್ಸು ಮಾಡಿ ಈ ಸಲ ಮಾತನಾಡಿಸಲೇಬೇಕು; ಬೈದರೂ ಸರಿ ಎಂದು ತೀರ್ಮಾನ ಮಾಡಿ ಅವರ ಬಳಿಗೆ ಬಂದೆ.
ನಮಸ್ತೇ ಎಂದಿದ್ದೇ, ಗಂಭೀರವಾಗಿ “ನಮಸ್ತೇ’ ಎಂದರು. ನಾನು ಅವರಿಗೆ ಮಾತನಾಡಲು ಅವಕಾಶವನ್ನೇ ಕೊಡದೆ ನನ್ನ ಬಗ್ಗೆ, ಅವರ ಕಾದಂಬರಿ, ಯಕ್ಷನೃತ್ಯ, ಬಾಲವನ… ಹೀಗೆ ಒಂದೇ ಉಸುರಿಗೆ ಮಾತನಾಡಿದೆ. ಒಂದೂ ಮಾತನಾಡದೇ ಗಂಭೀರವಾಗಿ ಕೇಳುತ್ತಲೇ ಇದ್ದರು. ಅಷ್ಟರಲ್ಲಿ ಒಳಗಿನಿಂದ “ಮಿಸ್ಟರ್ ಖಾರಂತ್, ಇಲ್ಲಿ ಬಣ್ಣಿ’ ಎಂಬ ಕರೆ. ಯಾರೋ ಮಲೆಯಾಳಿ ನರ್ಸ್ ಅವರ ಫೈಲನ್ನು ಹಿಡಿದು ಕರೆದೊಯ್ಯಲು ಬಂದಿದ್ದರು. ನರ್ಸ್ ಪದೇ ಪದೇ ಖಾರಂತ್ ಎಂದು ಕರೆಯುತ್ತಿದ್ದಾಗ ನನಗೆ ಒಳಗೊಳಗೇ ಪುಕಪುಕ. “ಮೊದಲೇ ಮೂಡಿ ಅಂತಾರೆ, ಈಗಂತೂ ವಯಸ್ಸಾಗಿದೆ; ಈ ಖಾರಂತ್ ಅನ್ನುವುದನ್ನು ಕೇಳಿ ಸಿಟ್ಟು ನೆತ್ತಿಗೇರಿದರೆ ಮಾಡುವುದೇನು?’ ಎಂಬ ಚಿಂತೆ! ಕುಳಿತಲ್ಲೇ ಒಂದೆರಡು ಬಾರಿ ಚಡಪಡಿಸಿ, ಕಾರಂತ ಎಂದು ಸರಿಪಡಿಸಲು ಪ್ರಯತ್ನಿಸಿದೆ. ಕೆಲಸದ ಒತ್ತಡದಲ್ಲಿದ್ದ ಆಕೆ ನನ್ನತ್ತ ಗಮನ ನೀಡದೇ ಅದನ್ನೇ ಮುಂದುವರಿಸಿದಳು.
ಕಾರಂತರು ಎದ್ದು ಹೊರಟರು. ಅಲ್ಲಿಯವರೆಗೆ ಒಂದೂ ಮಾತನಾಡದೇ ಇದ್ದವರು ಎರಡು ಹೆಜ್ಜೆ ಇಟ್ಟು ನನ್ನನ್ನು ಕರೆದರು “ಡಾಕ್ಟರ್ ಅಂತಲ್ಲ, ಏನೇ ಆಗಲಿ ಕನ್ನಡ ಉಳಿಸಿಕೊಳ್ಳಬೇಕು’ ಅಂದ್ರು. ನನಗೋ ಅವರ ಮಾತು ಕೇಳಿದ್ದೇ ಧನ್ಯತಾ ಭಾವ. ಮತ್ತೆ ಕಣ್ಣಲ್ಲಿ ಕಣ್ಣಿಟ್ಟು “ಅವಳು ಹೇಳಿದ್ದೂ ಸರಿಯೇ, ಕೆಲವರು ಹಾಗೂ ಕರೆಯುವುದುಂಟು… ಬೆನ್ನ ಹಿಂದೆ’ ಎಂದು ಸಣ್ಣಗೆ ನಕ್ಕರು. ಬೆಳ್ಳಿ ಕೂದಲ ಜತೆ ಮುಖದ ನೆರಿಗೆ, ಪ್ರಖರ ಕಣ್ಣು ಎಲ್ಲವೂ ಹೊಳೆಯುತ್ತಿತ್ತು. ನನಗೆ, ಆ ಕ್ಷಣದಲ್ಲಿ ನನ್ನ ಕಾರಂತಜ್ಜನ ದರ್ಶನವಾಗಿತ್ತು!!
– ಡಾ. ಕೆ.ಎಸ್. ಚೈತ್ರಾ