Advertisement

ಭೂ ಕುಸಿತ,ಪ್ರವಾಹದ ಸ್ಥಳ,ಪರಿಹಾರ ಕೇಂದ್ರಗಳಿಗೆ ಸಂಸದರ ಭೇಟಿ 

06:00 AM Aug 21, 2018 | Team Udayavani |

ಸೋಮವಾರಪೇಟೆ: ಮಹಾಮಳೆಯಿಂದ ಭೂ ಕುಸಿತ, ಪ್ರವಾಹದ ಸ್ಥಳ ಹಾಗೂ ಸಂತ್ರಸ್ಥರಿರುವ ಪರಿ ಹಾರ  ಕೇಂದ್ರಗಳಿಗೆ ಭೇಟಿ ನೀಡಿದ ಸಂಸದ ಪ್ರತಾಪ್‌ ಸಿಂಹ ಸಂತ್ರಸ್ತರಿಗೆ ಸಾಂತ್ವನ ಹೇಳಿದರು.

Advertisement

ಸಂಸದರು ಸೋಮವಾರಪೇಟೆಯ ಕೊಡವ ಸಮಾಜ, ಒಕ್ಕಲಿಗರ ಗೌಡ ಸಮಾಜ, ಐಗೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಿರಗಂದೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೆರೆದಿರುವ ಗಂಜಿ ಕೇಂದ್ರಗಳಿಗೆ ಭೇಟಿ ನೀಡಿದರು. ಈ ಸಂದರ್ಭ ಸಂತ್ರಸ್ಥರೊಂದಿಗೆ ಸಂಸದರು ಮಾತನಾಡುತ್ತಾ, ನೀವುಗಳು ಯಾರೂ ದೃತಿಗೆಡುವ ಅವಶ್ಯಕತೆ ಇಲ್ಲ. ನಿಮ್ಮ ಆರೋಗ್ಯ ರಕ್ಷಣೆಗಾಗಿ ವೈದ್ಯರು, ಔಷಧಗಳು, ಆಹಾರಗಳು, ಬಟ್ಟೆ, ಹೊದಿಕೆ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಇಲ್ಲಿನ ಕೇಂದ್ರಗಳಲ್ಲಿ ಕಲ್ಪಿಸಲಾಗಿದೆ. 

ನಿಮಗಾಗಿ ಇಡೀ ರಾಜ್ಯವೇ ಸ್ಪಂಧಿಸುತ್ತಿದೆ ನೀವು ಕಳೆದುಕೊಂಡಿರುವ ಮನೆಗಳನ್ನು ಪ್ರಧಾನ ಮಂತ್ರಿ ಅವಾಜ್‌ ಯೋಜನೆಯಡಿಯಲ್ಲಿ ನಿರ್ಮಿಸಿಕೊಡಲಾಗುವುದು. ಮನೆಗಳ ವ್ಯವಸ್ಥೆ ಸೇರಿದಂತೆ ತಮ್ಮ ಊರುಗಳು ಸಾಮಾನ್ಯ ಸ್ಥಿತಿಗೆ ಮರಳಲು ಕೆಲವು ತಿಂಗಳು ಬೇಕಾಗುತ್ತದೆ. ಇಲ್ಲಿ ಎಲ್ಲಾ ನೋವುಗಳನ್ನು ಸಹಿಸಿಕೊಂಡು, ಸ್ವಲ್ಪ ಚೇತರಿಸಿಕೊಳ್ಳಿ ಎಂದು ಮನವಿ ಮಾಡಿದರು.

ಮಕ್ಕಳಗುಡಿ ಬೆಟ್ಟದ ತಪ್ಪಲಿಗೆ ಬೆಟ್ಟ ಕುಸಿದಿರುವ ಸ್ಥಳವನ್ನು ವೀಕ್ಷಿಸಿದರು. ಬೆಟ್ಟ ಕುಸಿತದಿಂದ ಸುಮಾರು 20 ಏಕರೆಗೂ ಹೆಚ್ಚು ಕಾಫಿ ತೋಟ ಸೇರಿದಂತೆ ಬೆಲೆ ಬಾಳುವ ಮರಗಳು, ಅದಕ್ಕೆ ಹಬ್ಬಿದ್ದ ಕಾಳು ಮೆಣಸಿನ ಬಳ್ಳಿಗಳೂ ಸೇರಿದಂತೆ ಲಕ್ಷಾಂತರ ರು ನಷ್ಟವಾಗಿದೆ. ಈ ಸಂದರ್ಭ ನಷ್ಟವನ್ನನುಭವಿಸಿದ ಕಿರಗಂದೂರು ಗ್ರಾಮದ ದಿವಂಗರ ಕೆ.ಟಿ. ಪೂವಯ್ಯನವರ ಪುತ್ರ ರೋಷನ್‌, ರವಿ, ಕೆ.ಟಿ. ಲಿಂಗರಾಜ್‌ ಸೇರಿದಂತೆ ಇತರರು ಇದ್ದು, ತಮಗಾದ ನಷ್ಟದ ಬಗ್ಗೆ ಅಳಲನ್ನು ತೋಡಿಕೊಂಡರು. ಈ ಸಂದರ್ಭ ಸಂಸದರು ಮಾತನಾಡಿ, ತಕ್ಷಣವೆ ರಸ್ತೆಗೆ ಬಿದ್ದಿರುವ ಮಣ್ಣು, ಕಲ್ಲು ಬಂಡೆಗಳನ್ನು ತೆರವುಗೊಳಿಸುವ ಕಾರ್ಯ ಮಾಡಲಾಗುತ್ತದೆ ಎಂದರು.  

ನಂತರದಲ್ಲಿ ಮಾಧ್ಯಮದವರೊಂದಿಗೆ ಸಂಸದ ಪ್ರತಾಪ್‌ ಸಿಂಹ ಮಾತನಾಡಿ, ಜಿಲ್ಲೆ ಈ ಹಿಂದೆ ಎಂದೂ ಕಂಡರಿಯದ ಮಳೆ ಇದಾಗಿದೆ. ಇದರೊಂದಿಗೆ ಅಲ್ಲಲ್ಲಿ ಪ್ರವಾಹ ಹಾಗೂ ಬೆಟ್ಟಗುಡ್ಡಗಳ ಕುಸಿತದ ದುರಂತಗಳು ನಡೆಯುತ್ತಿದೆ. 

Advertisement

ದುರಂತದಿಂದ ಜೀವನ್ಮರಣಗಳ ಮಧ್ಯೆ ಸಿಲುಕಿದ್ದವರ ರಕ್ಷಣೆಗಾಗಿ ಭೂಸೇನೆಯ 174 ಮಂದಿ, ವಾಯು ಸೇನೆಯ 10 ಮಂದಿ, 30 ಮಂದಿ ಎನ್‌ಡಿಆರ್‌ಎಫ್‌ ಸಿಬ್ಬಂದಿಗಳು ಶ್ರಮಿಸುತ್ತಿದ್ದು, ಈಗಾಗಲೆ 661 ಮಂದಿಯನ್ನು ರಕ್ಷಿಸಿ, ಜಿಲ್ಲೆಯಲ್ಲಿ ತೆರೆದಿರುವ 36 ಗಂಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಶೌಚಾಲಯ ವ್ಯವಸ್ಥೆ ಇಲ್ಲದಿರುವೆಡೆಗೆ ತಾತ್ಕಾಲಿಕ ಶೌಚಾಲಯಗಳನ್ನು ನಿರ್ಮಿಸಿ ಕೊಡಲಾಗುತ್ತಿದೆ ಎಂದರು.

ಹವಮಾನ ವೈಪರಿತ್ಯದಿಂದಾಗಿ ಕೇಂದ್ರದಿಂದ ಬಂದ ಹೆಲಿಕಾಫ್ಟರ್‌ ಕಾರ್ಯನಿರ್ವಹಿಸಲಾಗದೇ ಮೈಸೂರಿನಲ್ಲಿ ನಿಲುಗಡೆ ಮಾಡಲಾಗಿದೆ ಎಂದರು.ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಸಿ.ಟಿ. ರವಿ  ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ, ಕಷ್ಟ-ನಷ್ಟದ ಬಗ್ಗೆ ವರದಿ ಮಾಡುವಂತೆ ತಿಳಿಸಿದ್ದಾರೆ ಎಂದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಎಸ್‌.ಜಿ.ಮೇದಪ್ಪ,ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಅಧ್ಯಕ್ಷ ಬಿ.ಡಿ.ಮಂಜುನಾಥ್‌, ಪ್ರಾ.ಕೃ.ಪ.ಸಹಕಾರ ಸಂಘದ ಉಪಾಧ್ಯಕ್ಷ ಕೆ.ಡಿ. ಸುರೇಶ್‌, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಸ್‌.ಪಿ. ಪೊನ್ನಪ್ಪ ಉಪಸ್ಥಿತರಿದ್ದರು.

ಮಕ್ಕಳಗುಡಿ ಬೆಟ್ಟದಿಂದ ಜಾರಿದ ಮಣ್ಣು, ಕಲ್ಲುಗಳು ಹಾಗು ಭಾರೀ ಗಾತ್ರದ ಮರಗಳು ಐಗೂರು, ಕಿರಗಂದೂರು ಸಂಪರ್ಕ ರಸ್ತೆಗೆ ಬಿದ್ದಿವೆ ಅಲ್ಲಿನ ನಿವಾಸಿಗಳು ಮನೆ ಖಾಲಿ ಮಾಡಿ, ತೆರಳಿದ್ದಾರೆ. ತಾಕೇರಿ ಗ್ರಾಮದಲ್ಲಿ ಭೂಮಿ ಬಿರುಕು ಹೆಚ್ಚಾಗುತ್ತಿದ್ದು, ಗ್ರಾಮದ ಜನರು ರವಿವಾರದಸುರಕ್ಷಿತ ಸ್ಥಳಗಳಿಗೆ ತೆರಳಿದರು.  ಗ್ರಾಮದ ಸುರೇಂದ್ರ ಅವರ  ಮನೆಯ ಹಿಂಭಾಗ ರವಿವಾರ ಭೂಕುಸಿತ ಸಂಭವಿಸಿದೆ. 2006ರ ಜು.  26ರಂದು ಭೂಕುಸಿತ ಸಂಭವಿಸಿದ ಬಿಳಿಗೇರಿ ರಾಜಂಡಬಾಣೆಯಲ್ಲಿ ಭೂಮಿ ಬಿರುಕು ಬಿಟ್ಟಿದ್ದು, ಬಾಚಿನಾಡಂಡ ಚಿಟ್ಟಿಯಪ್ಪ ಅವರ ಮನೆ ಜರುಗುತ್ತಿದೆ. ಮೋಹನ್‌ ಬೋಪಣ್ಣ ಅವರ ಕೆರೆ ಒಡೆದಿದ್ದು, ಪಲ್ಪರ್‌ಗೌಸ್‌ ಕುಸಿದಿದೆ. 

Advertisement

Udayavani is now on Telegram. Click here to join our channel and stay updated with the latest news.

Next