ಬೆಂಗಳೂರು: ನೆರೆ ಪರಿಹಾರಕ್ಕೆ ಸಂಬಂಧಪಟ್ಟಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾದ ಭಾವನೆ ಆಧರಿಸಿ, ನಮ್ಮ ಸಂಸದರು, ಶಾಸಕರು ಸಹಜವಾಗಿ ಮಾತನಾಡಿದ್ದಾರೆ. ಆದರೆ ನಾವು ಧೈರ್ಯಗೆಡಬಾರದು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಸ್ವಪಕ್ಷೀಯರಿಗೆ ಸಲಹೆ ನೀಡಿದರು.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನೆರೆ ಪರಿಹಾರ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಜನರು ತಮ್ಮ ಅಭಿಪ್ರಾಯ, ಭಾವನೆ ವ್ಯಕ್ತಪಡಿಸಿದ್ದಾರೆ. ಸಹಜವಾಗಿಯೇ ನಮ್ಮ ಸಂಸದರು, ಶಾಸಕರು ಮಾತನಾಡಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಮಾಜಕ್ಕೆ ಸ್ಪಂದಿಸಬೇಕು. ಸಂತ್ರಸ್ತರಿಗೆ ಧೈರ್ಯ, ವಿಶ್ವಾಸ ತುಂಬಬೇಕು. ರಾಜ್ಯ ಸರ್ಕಾರ ಎಲ್ಲಿಯೂ ವಿಫಲವಾಗಿಲ್ಲ. ವ್ಯವಸ್ಥೆ ಹೇಗಿದೆ ಎಂಬುದನ್ನು ನೋಡಿ ಮಾತನಾಡಬೇಕೆಂದು ಹೇಳಿದರು.
ಬಿಜೆಪಿ ಭಿನ್ನ ಪಕ್ಷ ಎಂಬುದು ಸ್ಪಷ್ಟ. ಆದರೆ ಪಕ್ಷ ಸರ್ಕಾರ ನಡೆಸುವುದಲ್ಲ. ಪಕ್ಷದ ಸರ್ಕಾರವಿದೆ. ಸರ್ಕಾರ ಹಾಗೂ ಪಕ್ಷಕ್ಕೆ ತನ್ನದೇ ನಿಯಮಗಳಿವೆ. ನಿಯಮಗಳನ್ನು ಅದಲು ಬದಲು ಮಾಡಿಕೊಳ್ಳಲಾಗು ವುದಿಲ್ಲ. ಸರ್ಕಾರದಲ್ಲಿ ಸಾಂವಿಧಾನಿಕ, ಕಾನೂನು ಬದ್ಧವಾಗಿ ಅನುದಾನ ಬಿಡುಗಡೆಯಾಗುತ್ತದೆ. ಭ್ರಷ್ಟಾಚಾರ ತಡೆಗೆ ಕಾನೂನು, ನಿಯಮಾವಳಿ ರೂಪಿಸಲಾಗುತ್ತದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಎನ್‌ಡಿಆರ್‌ಎಫ್ ನಿಯಮಾವಳಿ ರಚನೆಯಾಗಿತ್ತು. ನಿಯಮಾನುಸಾರ ಅನುದಾನ ನೀಡಬೇಕೆ ಹೊರತು, ನಿಯಮ ಮೀರಿ ಹಣ ಬಿಡುಗಡೆ ಮಾಡಲು ಸಾಧ್ಯವಿಲ್ಲ. ಸದ್ಯ ಅನುಭವ ನೋಡಿಕೊಂಡು ಎನ್‌ಡಿಆರ್‌ಎಫ್ ನಿಯಮಾವಳಿಗೆ ತಿದ್ದುಪಡಿ ಬಗ್ಗೆ ನಂತರ ಚಿಂತಿಸಲಾಗುವುದು ಎಂದು ಹೇಳೀದರು.
ಖಜಾನೆ ಲೂಟಿಯಾಗಿದೆ: ರಾಜ್ಯ ಸರ್ಕಾರದ ಖಜಾನೆ ಸದ್ಯ ಖಾಲಿಯಾಗಿದ್ದರೆ ನೆರೆ ಪರಿಹಾರಕ್ಕೆ 3,000 ಕೋಟಿ ರೂ. ಪರಿಹಾರ ಕೊಡಲು ಸಾಧ್ಯವಾಗುತ್ತಿತ್ತೆ. ಪಕ್ಷದ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ಅವರು, ಹಿಂದೆ ಖಜಾನೆ ಲೂಟಿಯಾಗಿತ್ತು. ಇದೀಗ ಸರ್ಕಾರ ಖಜಾನೆ ತುಂಬಿಸುತ್ತಿದೆ ಎಂದು ಸರಿಯಾಗಿಯೇ ಹೇಳಿಕೆ ನೀಡಿದ್ದಾರೆ. ಹಿಂದೆ ರಾಜ್ಯದ ಖಜಾನೆ ಹೇಗೆಲ್ಲಾ ಲೂಟಿಯಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ಅದನ್ನು ಹೇಳುವುದಿಲ್ಲ. ಯಡಿಯೂರಪ್ಪ ಸಿಎಂ ಆದ ಮೇಲೆ ಖಜಾನೆ ತುಂಬಿಸುತ್ತಿದ್ದಾರೆ. ನಮಗೆ ತಾಕತ್ತಿದೆ, ಖಜಾನೆ ತುಂಬಿಸುತ್ತೇವೆ ಎಂದು ತಿರುಗೇಟು ನೀಡಿದರು.
ಮಾತನಾಡುವಾಗ ಗಮನವಿರಲಿ!: ಕೇಂದ್ರ ಪರಿ ಹಾರ ಕೊಟ್ಟಿಲ್ಲ ಎಂಬ ಚರ್ಚೆ ವಿಪರೀತವಾದ ಕಾರಣ ರಾಜ್ಯ ಸರ್ಕಾರ ಕೊಟ್ಟ ಪರಿಹಾರದ ಬಗ್ಗೆ ಜನರಿಗೆ ಗೊತ್ತಾಗಿಲ್ಲ. ಹಿಂದಿನ ಸರ್ಕಾರಗಳು ಮಾಡದ ಕಾರ್ಯ ವನ್ನು ಬಿಜೆಪಿ ಸರ್ಕಾರ ಮಾಡಿದೆ. ಮಾಜಿ ಮುಖ್ಯಮಂತ್ರಿಯೊಬ್ಬರು ಬಹಳ ಕನಿಕರ ವ್ಯಕ್ತಪಡಿಸಿ ದ್ದಾರೆ. ಅವರ ಕಾಲದಲ್ಲಿ ಮನೆ ನಿರ್ಮಾಣಕ್ಕೆ ಘೋಷಿಸಿದ್ದ ಪರಿಹಾರ 92,000ರೂ. ಇನ್ನೂ ಮನೆಗೆ ಬಂದಿಲ್ಲ. ಅವರು ಹೇಳಿದ ಮನೆಗಳನ್ನು ಕಟ್ಟಿಕೊಟ್ಟಿಲ್ಲ. ಆದರೆ ಯಡಿಯೂರಪ್ಪ ಸಂತ್ರಸ್ತರ ಬ್ಯಾಂಕ್ ಖಾತೆಗೆ ಒಂದು ಲಕ್ಷ ರೂ. ಮುಂಗಡ ಹಾಕಿದ್ದಾರೆ. ನೆರೆ ಪರಿಹಾರ ವಿಚಾರದಲ್ಲಿ ರಾಜಕಾರಣ ಮಾಡದೆ ಸ್ಪಂದಿಸಬೇಕೆಂದು ಎಚ್ಚರಿಸಿದರು.
“ಶಾಸಕರು, ಸಚಿವರು ಪರಿಹಾರ ಬಿಟ್ಟರೆ ಒಳ್ಳೆಯದು’
ಬೆಂಗಳೂರು: ಪ್ರವಾಹ ಸಂದರ್ಭದಲ್ಲಿ ಶಾಸಕರು ಸೇರಿದಂತೆ ಜನಪ್ರತಿನಿಧಿಗಳ ಹೊಲ, ತೋಟಗಳಲ್ಲಿನ ಬೆಳೆ ನಷ್ಟವಾಗಿದ್ದರೆ, ಪರಿಹಾರ ಪಡೆಯುವ ಬಗ್ಗೆ ವೈಯಕ್ತಿಕವಾಗಿ ಅವರೇ ಯೋಚಿಸಿ ತೀರ್ಮಾನ ಕೈಗೊಳ್ಳುವುದು ಸೂಕ್ತ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯಪಟ್ಟಿದ್ದಾರೆ. ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಇತ್ತೀಚೆಗೆ ತಮ್ಮದೂ 100 ಎಕರೆಯಲ್ಲಿ ಬೆಳೆದ ಬೆಳೆ ನಾಶವಾಗಿದ್ದು, ಪರಿಹಾರ ಕೊಟ್ಟರೆ ಒಂದು ಕೋಟಿ ರೂ.ಸಿಗಬೇಕು ಎಂದು ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ನಳೀನ್, ಈ ಬಗ್ಗೆ ಶಾಸಕರು, ಜನಪ್ರತಿನಿಧಿಗಳು ಯೋಚಿಸಬೇಕು. ವೈಯಕ್ತಿಕವಾಗಿ ಪರಿಹಾರ ಪಡೆಯದಿದ್ದರೆ ಒಳ್ಳೆಯದು. ಹಾಗೆಂದು ಪಕ್ಷ ಯಾವುದೇ ಸೂಚನೆ ನೀಡುವುದಿಲ್ಲ. ಅವರವರು ಸಮಾಜಕ್ಕೆ ಏನು ಬೇಕಾದರೂ ತ್ಯಾಗ ಮಾಡಬಹುದು ಎಂದರು.
ಶಿಸ್ತು ಮೀರಿದ ವರ್ತನೆಗೆ ವಿವರ ಕೇಳಲಾಗಿದೆ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ನೋಟಿಸ್ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ನಳಿನ್ ಕುಮಾರ್ ಕಟೀಲ್, ಪಕ್ಷ ಶಿಸ್ತು ಮತ್ತು ನಿಯಮದಡಿ ನಡೆಯುತ್ತದೆ. ಪಕ್ಷದ ನಿಯಮ, ಶಿಸ್ತು ಅಡಿಯಲ್ಲಿ ಎಲ್ಲರೂ ಸಂಯಮದಿಂದ ವರ್ತಿಸಬೇಕು. ಆ ರೀತಿಯ ವರ್ತನೆ ತೋರದಿದ್ದರೆ ಕೆಲವೊಮ್ಮೆ ವಿವರಣೆ ಕೇಳಲಾಗುತ್ತದೆ ಎಂದು ಹೇಳಿದರು.