ಬೆಳಗಾವಿ: ನೆರೆ ಪರಿಹಾರ ತರುವಲ್ಲಿ ವಿಫಲವಾದ ಬಿಜೆಪಿ ಸಂಸದರು ಬಳೆ ತೊಡಬೇಕು ಎನ್ನುವ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಅವರು ನಾಲಿಗೆ ಬಿಗಿ ಹಿಡಿದು ಮಾತನಾಡಲಿ. ನಮ್ಮ ಸಂಸದರೇನು ಬಳೆ ತೊಟ್ಟು ಕುಳಿತಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಎಚ್ಚರಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಕೇಂದ್ರ ಸರ್ಕಾರ ರಾಜ್ಯದ ನೆರೆ ಹಾನಿ ಪರಿಹಾರಕ್ಕೆ 1,200 ಕೋಟಿ ರೂ.ಗಳ ಮಧ್ಯಂತರ ಪರಿಹಾರ ನೀಡಿದೆ.
ಇದಲ್ಲದೆ ಪ್ರಧಾನಿ ಮೋದಿ ಇನ್ನೂ ಹೆಚ್ಚಿನ ಪರಿಹಾರ ಬಿಡುಗಡೆ ಮಾಡುವ ವಿಶ್ವಾಸವಿದೆ ಎಂದರು. ರಾಜ್ಯದ ಬಿಜೆಪಿ ಸಂಸದರು ಮೋದಿ ಅವರಿಗೆ ರಾಜ್ಯದ ನೆರೆ ಸ್ಥಿತಿ ಹಾಗೂ ಹಾನಿಯ ಕುರಿತು ಮನವರಿಕೆ ಮಾಡಿದ ಮೇಲೆ 1,200 ಕೋಟಿ ರೂ.ಬಂದಿದೆ. ಇದಲ್ಲದೆ ರಾಜ್ಯ ಸರ್ಕಾರ ಸಹ ಸಾಕಷ್ಟು ಅನುದಾನವನ್ನು ಈಗಾಗಲೇ ಬಿಡುಗಡೆ ಮಾಡಿದೆ. ಅಧಿ ವೇಶನದಲ್ಲಿಯೂ ಸರ್ಕಾರ ಕೆಲವು ತೀರ್ಮಾನಗಳನ್ನು ಕೈಗೊಂಡಿದೆ. ಎಲ್ಲ ಸಂಸದರೂ ಸಮರ್ಥರಾಗಿದ್ದಾರೆ ಎಂದರು.
ಅಂಗನವಾಡಿ ಕೇಂದ್ರಗಳಲ್ಲಿ ಇಂಗ್ಲಿಷ್ ಮಾಧ್ಯಮ ಬೇಕೋ, ಬೇಡವೋ ಎಂಬುದರ ಬಗ್ಗೆ ಚಿಂತನೆ ನಡೆದಿದೆ. ಇಂದಿನ ದಿನಗಳಲ್ಲಿ ಮಕ್ಕಳಿಗೆ ಭಾರತೀಯ ಸಂಸ್ಕೃತಿ, ಸಂಪ್ರದಾಯದ ಜತೆಗೆ ಇಂಗ್ಲಿಷ್ ಕಲಿಕೆ ಅಗತ್ಯವಾಗಿದೆ. ಈ ವಿಚಾರವಾಗಿ ಅಧಿಕಾರಿಗಳೊಂದಿಗೆ ಈಗಾಗಲೇ ಒಂದು ಹಂತದ ಸಭೆ ನಡೆಸಲಾಗಿದೆ. ಶೀಘ್ರವೇ ಶಿಕ್ಷಣ ತಜ್ಞರ ಅಭಿಪ್ರಾಯ ಸಂಗ್ರಹಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು.
-ಶಶಿಕಲಾ ಜೊಲ್ಲೆ, ಸಚಿವೆ