ಭೋಪಾಲ್(ಮಧ್ಯಪ್ರದೇಶ): ಅತ್ತೆಯನ್ನು ಸುಮಾರು ನೂರು ಬಾರಿ ಕಡಿದು, ಕೊಚ್ಚಿ ಕೊಂದಿದ್ದ 24 ವರ್ಷದ ಸೊಸೆಗೆ ಮಧ್ಯಪ್ರದೇಶದ ರೇವಾ ಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿರುವುದಾಗಿ ಜಿಲ್ಲಾ ಪಬ್ಲಿಕ್ ಪ್ರಾಸಿಕ್ಯೂಟರ್ ತಿಳಿಸಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:ಜಗ್ಗೇಶ್, ರಮ್ಯಾ, ರಕ್ಷಿತಾ ಟ್ವೀಟ್: ದರ್ಶನ್ ಬಂಧನದ ಬಗ್ಗೆ ಸೆಲೆಬ್ರಿಟಿಗಳು ಹೇಳಿದ್ದೇನು?
51 ವರ್ಷದ ಅತ್ತೆ ಸರೋಜ್ ಅವರನ್ನು ಹರಿತವಾದ ಕುಡುಗೋಲಿನಿಂದ ಕೊಚ್ಚಿ ಕೊಂದಿದ್ದ ಅಟ್ರಾಲಿಯಾ ಗ್ರಾಮದ ನಿವಾಸಿ ಆರೋಪಿ ಕಾಂಚನ್ ಕೋಲ್ (ಸೊಸೆ)ಗೆ ರೇವಾದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಜಡ್ಜ್ ಪದ್ಮ ಜಾಟವ್ ಗಲ್ಲುಶಿಕ್ಷೆ ವಿಧಿಸಿರುವುದಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ವಿಕಾಸ್ ದ್ವಿವೇದಿ ತಿಳಿಸಿದ್ದಾರೆ.
ಸರೋಜ್ ಅವರ ತಲೆಗೆ ದೋಸೆ ಕಾವಲಿಯಿಂದ ಹೊಡೆದು ನಂತರ ಹರಿತವಾದ ಕುಡುಗೋಲಿನಿಂದ 100 ಬಾರಿ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಪತಿ ಉತ್ತರಪ್ರದೇಶದ ಮೀರತ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅತ್ತೆ ತನಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದುದ್ದಲ್ಲದೇ ಹೊಡೆಯುತ್ತಿರುವುದಾಗಿ ಪೊಲೀಸರ ವಿಚಾರಣೆ ವೇಳೆ ಕಾಂಚನ್ ತಿಳಿಸಿದ್ದಾಳೆ.
ಪ್ರಾಸಿಕ್ಯೂಷನ್ ಹೇಳಿಕೆ ಪ್ರಕಾರ, ಮಾವ ಬಾಲ್ಮಿಕಿ ಕೋಲ್ ಕೂಡಾ ಪತ್ನಿಯನ್ನು ಕೊಲ್ಲುವಂತೆ ಕಾಂಚನ್ ಗೆ 4,000 ಸಾವಿರ ರೂಪಾಯಿ ಹಾಗೂ ಕುಡುಗೋಲನ್ನು ನೀಡಿರುವುದಾಗಿ ವಾದಿಸಿತ್ತು. ಆದರೆ ಸೂಕ್ತವಾದ ಸಾಕ್ಷ್ಯಾಧಾರ ಇಲ್ಲದ ಕಾರಣ ಕೋರ್ಟ್ ಬಾಲ್ಮಿಕಿ ಕೋಲ್ ಅವರನ್ನು ಖುಲಾಸೆಗೊಳಿಸಿದೆ.
2022ರ ಜುಲೈ 11ರಂದು ಕಾಂಚನ್ ಮತ್ತು ಸರೋಜ್ ನಡುವೆ ಕೆಲವು ವಿಚಾರಗಳಿಗಾಗಿ ವಾಗ್ವಾದ ನಡೆಯುತ್ತಿತ್ತು. ಏತನ್ಮಧ್ಯೆ ಕಾಂಚನ್ ದೋಸೆ ಕಾವಲಿಯಿಂದ ತಲೆಗೆ ಹೊಡೆದುಬಿಟ್ಟಿದ್ದಳು. ಆಗ ಸರೋಜ್ ಪ್ರಜ್ಞಾಹೀನರಾಗಿ ನೆಲದ ಮೇಲೆ ಬಿದ್ದಿದ್ದರು. ಈ ಸಂದರ್ಭದಲ್ಲಿ ಕಾಂಚನ್ ಕುಡುಗೋಲಿನಿಂದ ನೂರು ಬಾರಿ ಕೊಚ್ಚಿ ಕೊಂದಿರುವುದಾಗಿ ವರದಿ ತಿಳಿಸಿದೆ.