Advertisement

16ನೇ ಮಗುವಿಗೆ ಜನ್ಮ, ತಾಯಿ ಸಾವು; ಕೆಲವೇ ಗಂಟೆಗಳಲ್ಲಿ ಮಗುವೂ ಮರಣ

01:32 AM Oct 14, 2020 | mahesh |

ಭೋಪಾಲ: ಮಧ್ಯಪ್ರದೇಶದ ದಮೋಹ್‌ ಜಿಲ್ಲೆಯಲ್ಲಿ ವಲಸಿಗ ಕಾರ್ಮಿಕ ಮಹಿಳೆ 16ನೇ ಮಗುವಿಗೆ ಜನ್ಮವಿತ್ತು ಕೊನೆಯುಸಿರೆಳೆದಿದ್ದಾಳೆ. ಅತ್ಯಂತ ದುಃಖದಾಯಕ ವಿಚಾರವೆಂದರೆ ಮಗುವೂ ಕೂಡ ಅಸುನೀಗಿದೆ. ಅಸುನೀಗಿದ ಮಹಿಳೆಯನ್ನು ಸುಖೀರಾಣಿ ಅಹಿವಾರ್‌ ಎಂದು ಗುರುತಿಸಲಾಗಿದೆ. ಆಕೆ ಈ ಹಿಂದೆ ಹಡೆದಿದ್ದ ಎಂಟು ಮಕ್ಕಳು ಜೀವಂತವಾಗಿ ದ್ದರು. ಹಿಂದಿನ ಆರು ಸಂದರ್ಭಗಳಲ್ಲಿ ಆಕೆಗೆ ಗರ್ಭಪಾತ ವಾಗಿತ್ತು. ಮಹಿಳೆಯ ಕುಟುಂಬ ಸದಸ್ಯರು ಹೇಳಿದ ಪ್ರಕಾರ “ಪ್ರತಿಯೊಂದು ಗರ್ಭಧಾರಣೆಯ ಹಿಂದೆ ದೇವರ ಕೈವಾಡ ಇದೆ’ ಎಂದು ಹೇಳಿಕೊಂಡಿದ್ದಾರೆ.

Advertisement

ತಾಯಿ ಮತ್ತು ಮಗು ಅಸುನೀಗಿರುವ ಬಗ್ಗೆ ದಮೋಹ್‌ ಜಿಲ್ಲಾ ಆರೋಗ್ಯಾಧಿಕಾರಿ ಡಾ| ಸಂಗೀತಾ ತ್ರಿವೇದಿ ತನಿಖೆಗೆ ಆದೇಶಿಸಿದ್ದಾರೆ. ಜತೆಗೆ ಸ್ಥಳೀಯ ದಾದಿಯನ್ನು ಅಮಾನತು ಮಾಡಲು ಸೂಚಿಸಿದ್ದಾರೆ. ಜುಲೈನಲ್ಲಿ ಅಸುನೀಗಿದ ಮಹಿಳೆ ಆಸ್ಪತ್ರೆಗೆ ಬಂದು ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದಳು. ಎಚ್ಚರಿಕೆಯಿಂದ ಅವರ ಆರೋಗ್ಯ ಸ್ಥಿತಿ ಗಮನಿಸಬೇಕೆಂದು ಸೂಚಿಸ ಲಾಗಿತ್ತು. ಇಷ್ಟಾಗಿದ್ದರೂ, ಕೂಡ ದಾದಿ ಮಾಹಿತಿ ನೀಡಿರಲಿಲ್ಲ. ಹೀಗಾಗಿ, ಅವರನ್ನು ಅಮಾನತು ಮಾಡಲು ಸೂಚಿಸಿದ್ದೇನೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

ಭಟಿಯಾಘರ್‌ ಬ್ಲಾಕ್‌ನ ಪದಜಿಹ್ರಿ ಗ್ರಾಮಕ್ಕೆ ಸೇರಿದವಳಾಗಿರುವ ಕಾರ್ಮಿಕ ಮಹಿಳೆ ಕೆಲಸಕ್ಕಾಗಿ ಹಲವು ನಗರಗಳಿಗೆ ಭೇಟಿ ನೀಡಿದ್ದಳು. ಆಕೆ ರಕ್ತ ಹೀನತೆಯಿಂದ ಬಳಲುತ್ತಿದ್ದ ಆ ಮಹಿಳೆ, ಸರಕಾರಿ ಆಸ್ಪತ್ರೆಯಲ್ಲಿ ಅವಧಿಗಿಂತ ಮೊದಲೇ ಮಗುವಿಗೆ ಜನ್ಮ ನೀಡಿದಳು. ಹೀಗಾಗಿ, ಆಕೆಯ ಸ್ಥಿತಿ ಗಂಭೀರವಾಗಿತ್ತು ಎಂದು ಆರೋಗ್ಯಾಧಿಕಾರಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next