ಕೊಪ್ಪಳ: ಬಹು ನಿರೀಕ್ಷಿತ ಬಹದ್ದೂರಬಂಡಿ- ನವಲಕಲ್ ಏತ ನೀರಾವರಿ ಗೊಂದಲವು ಮತ್ತೆ ಸೃಷ್ಟಿಯಾಗಿದ್ದು ಸಂಸದ ಸಂಗಣ್ಣ ಕರಡಿ ಅವರು, ನಾಲ್ಕೈದು ಹಳ್ಳಿಗಳ ರೈತರು ಸೇರಿದಂತೆ ನೀರಾವರಿ ಇಲಾಖೆ ಇಂಜನಿಯರ್‌ಗಳು 2ನೇ ಬಾರಿಗೆ ನವಲಕಲ್ ಮಟ್ಟಿಯ ಕಾಮಗಾರಿ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.
ಬಹದ್ದೂರಬಂಡಿ ಏತ ನೀರಾವರಿ ಮೂಲ ಉದ್ದೇಶವನ್ನು ತಪ್ಪಿಸಿ ಬೇರೆ ಭಾಗಕ್ಕೆ ನೀರಾವರಿ ಮಾಡಲಾಗುತ್ತಿದೆ ಎನ್ನುವ ಆಪಾದನೆ ಹಲವು ದಿನಗಳಿಂದ ಕೇಳಿ ಬರುತ್ತಿತ್ತು. ಕೊರೊನಾ ಉಲ್ಬಣದ ಹಿನ್ನೆಲೆಯಲ್ಲಿ ಕಾಮಗಾರಿ ಸಹಿತ ಸ್ಥಗಿತ ಮಾಡಲಾಗಿತ್ತು. ಲಾಕ್‌ಡೌನ್ ತೆರವಾದ ಬಳಿಕ ಜನರು ಕಾಮಗಾರಿ ಸ್ಥಳಕ್ಕೆ ಪದೇ ಪದೆ ಭೇಟಿ ನೀಡಿ ನೀರಾವರಿಯ ಮಾಹಿತಿ ಪಡೆಯಲಾರಂಭಿಸಿದ್ದರು. ನೀರಾವರಿ ಯೋಜನೆಯನ್ನು ಈ ಮೊದಲು ಉದ್ದೇಶಿತ ಮೂಲ ಸ್ಥಳದಲ್ಲೇ ನಡೆಸುವಂತೆ ಬಹದ್ದೂರಬಂಡಿ, ಹೊಸಳ್ಳಿ, ಮುದ್ದಾಬಳ್ಳಿ ಹಾಗೂ ಹ್ಯಾಟಿ ಭಾಗದ ರೈತರು ಒತ್ತಾಯಿಸಿದ್ದರು. ಈಚೆಗೆ ಸಂಸದ ಸಂಗಣ್ಣ ಕರಡಿ ಅವರು ಸಹಿತ ಸ್ಥಳ ಪರಿಶೀಲಿಸಿ ರೈತರ ಅಹವಾಲು ಆಲಿಸಿದ್ದರು.
ಗುರುವಾರ ಮತ್ತೆ ರೈತರೊಂದಿಗೆ ಚರ್ಚೆ ನಡೆಸಿದ ಸಂಸದರು, ನೀರಾವರಿ ಇಲಾಖೆಯ ಇಂಜನಿಯರ್ ಗಳ ಜೊತೆ ನೀಲನಕ್ಷೆಯೊಂದಿಗೆ ನವಲಕಲ್ ಮಟ್ಟಿ ಸ್ಥಳಕ್ಕೆ ಭೇಟಿ ನೀಡಿ, ಅಧಿ ಕಾರಿಗಳಿಂದ ರೈತರ ಸಮ್ಮುಖದಲ್ಲೇ ವಿವರಣೆ ಪಡೆದರು. ಈ ವೇಳೆ ಅಧಿಕಾರಿಗಳು ವೈ ಆಕಾರದಲ್ಲಿ ನೀರಾವರಿ ಯೋಜನೆಯು ಇದಾಗಿದೆ. ಎಡ ಹಾಗೂ ಬಲ ಭಾಗಕ್ಕೆ ನೀರಾವರಿ ಕಲ್ಪಿಸಬೇಕಿದೆ ಎಂದು ಸಂಸದರ ಗಮನಕ್ಕೆ ತಂದರು.
ಆದರೆ ಸ್ಥಳದಲ್ಲಿದ್ದ ರೈತರು ಮೂಲ ಉದ್ದೇಶಿತ ಎಡಭಾಗಕ್ಕೆ ಹೆಚ್ಚಿನ ಮಟ್ಟದಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಬೇಕು. ತಾಲೂಕಿನ ಹ್ಯಾಟಿ, ಮುದ್ದಾಬಳ್ಳಿ, ಬಹದ್ದೂರಬಂಡಿ, ಹೊಸಳ್ಳಿ ಭಾಗವು ಹಲವು ವರ್ಷಗಳಿಂದ ನೀರಾವರಿಯನ್ನೇ ಕಂಡಿಲ್ಲ. ಒಣ ಬೇಸಾಯದಿಂದ ಸಂಕಷ್ಟ ಎದುರಿಸುತ್ತಿದ್ದೇವೆ. ಆದರೆ ಪ್ರಸ್ತುತ ಯೋಜನೆಯಲ್ಲಿ ಬಲ ಭಾಗಕ್ಕೆ ಹೆಚ್ಚು ನೀರಾವರಿ ಪ್ರದೇಶ ತೋರಿಸಲಾಗಿದೆ. ಆದರೆ ಕುಣಕೇರಿ ಭಾಗದಲ್ಲಿ ಕೈಗಾರಿಕೆಗಳು ಹೆಚ್ಚಿವೆ. ಅಲ್ಲಿ ಭೂಮಿಯನ್ನು ಕಾರ್ಖಾನೆಗಳು ಖರೀದಿ ಮಾಡಿವೆ. ಕೈಗಾರಿಕೆಗಳು ಇರುವ ಪ್ರದೇಶದಲ್ಲಿ ನೀರಾವರಿ ಮಾಡಿದರೆ ಹೇಗೆ? ರೈತರ ಜಮೀನು ಇರುವ ಭಾಗಕ್ಕೆ ಮೊದಲು ನೀರಾವರಿಯನ್ನು ಕಲ್ಪಿಸಿ. ಸುಮ್ಮನೆ ಯೋಜನೆಯ ದಾರಿ ತಪ್ಪಿಸುವ ಕೆಲಸ ಮಾಡಬೇಡಿ ಎಂದು ಅಧಿ ಕಾರಿಗಳ ಮುಂದೆ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಮಧ್ಯ ಪ್ರವೇಶಿಸಿದ ಸಂಸದ ಸಂಗಣ್ಣ ಕರಡಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿ, ಮೊದಲು ಮೂಲ ಉದ್ದೇಶಿತ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಿ, ಎಡ ಭಾಗದಲ್ಲಿ ರೈತರ ಜಮೀನು ತುಂಬಾ ಇದೆ. ಬಲ ಭಾಗಕ್ಕೆ ಕೈಗಾರಿಕೆಗಳು ಭೂಮಿ ಖರೀದಿ ಮಾಡಿವೆ. ಅಲ್ಲಿ ಕೈಗಾರಿಕೆಗಳು ಖರೀದಿ ಮಾಡಿದ ಭೂಮಿಯನ್ನು ನೀರಾವರಿ ಪ್ರದೇಶದಿಂದ ಕೈ ಬಿಡಬೇಕು. ಬಲ ಭಾಗದ ರೈತರಿಗೂ ಅನ್ಯಾಯವಾಗಬಾರದು. ಅವರೂ ನಮ್ಮವರೆ, ಅಲ್ಲಿ ರೈತರ ಜಮೀನಿಗೆ ಮಾತ್ರ ನೀರಾವರಿ ವ್ಯಾಪ್ತಿಗೆ ತರಬೇಕು. ಎಡಭಾಗಕ್ಕೆ 6 ಸಾವಿರ ಎಕರೆ ಪ್ರದೇಶವಿದ್ದು, ಈ ನೀರಾವರಿ ಪ್ರದೇಶವನ್ನು ಇನ್ನಷ್ಟು ಹೆಚ್ಚಿಸಬೇಕು. ಪುನಃ ಸರ್ವೇ ಮಾಡಿ ರೈತರಿಗೆ ಅನ್ಯಾಯವಾಗದಂತೆ ನೀರಾವರಿಯಿಂದ
ವಂಚಿತರಾಗದಂತೆ ಸರ್ವೇ ನಡೆಸಬೇಕು ಎಂದು ಸ್ಥಳದಲ್ಲೇ ಸೂಚನೆ ನೀಡಿದರು. ಅಲ್ಲದೇ, ಮುಖ್ಯ ಚೇಂಬರ್‌ನ್ನು ನವಲಕಲ್ ಮಟ್ಟಿ ಎಡಭಾಗಕ್ಕೆ ನಿರ್ಮಾಣ ಮಾಡಿ ಎಲ್ಲ ಪ್ರದೇಶವೂ ನೀರಾವರಿ ವ್ಯಾಪ್ತಿಗೆ ಒಳಪಡುವಂತೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಪಂದಿಸಿ ಪುನಃ ಸರ್ವೇ ನಡೆಸುವುದಾಗಿ ಭರವಸೆ ನೀಡಿದರು.
ತೋಟಪ್ಪ ಕಾಮನೂರು, ಚಂದ್ರುಸ್ವಾಮಿ ಬಹದ್ದೂರಬಂಡಿ, ಖಾಜಾಹುಸೇನ, ಯಮನಗೌಡ ಹೊಸಳ್ಳಿ, ಪ್ರಭುಗೌಡ ಮುದ್ದಾಬಳ್ಳಿ, ಸುಧಾಕರಡ್ಡಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.