ಛತ್ತರ್‌ಪುರ: ಶಾಲೆಯಲ್ಲಿ ಆಫ್‌ಲೈನ್ ಪರೀಕ್ಷೆ ನಡೆಸುತ್ತಿರುವುದರಿಂದ ಒತ್ತಡಕ್ಕೆ ಒಳಗಾಗಿದ್ದ 10ನೇ ತರಗತಿ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಛತ್ತರ್‌ಪುರ ನಗರದಲ್ಲಿ ಬುಧವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
17 ವರ್ಷದ ವಿದ್ಯಾರ್ಥಿ ಹನುಮಾನ್ ಟೋರಿಯಾ ಪ್ರದೇಶದಲ್ಲಿರುವ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಕೊತ್ವಾಲಿ ಪೊಲೀಸ್ ಠಾಣಾಧಿಕಾರಿ ಅನುಪ್ ಯಾದವ್ ಹೇಳಿದ್ದಾರೆ.
ಸರ್ಕಾರಿ ಶಾಲೆಯೊಂದರಲ್ಲಿ ಓದುತ್ತಿದ್ದ ಬಾಲಕನಿಗೆ ಮಂಗಳವಾರ ಗಣಿತ ಪರೀಕ್ಷೆ ಇತ್ತು. ಮನೆಯಲ್ಲಿ ಪ್ರತ್ಯೇಕ ಕೋಣೆಯಲ್ಲಿ ಮಲಗಿದ್ದ. ಪರೀಕ್ಷೆಯ ದಿನ ಓದಲು ಎದ್ದೇಳಲು ಬೆಳಿಗ್ಗೆ 5 ಗಂಟೆಗೆ ಅಲಾರಂ ಇಟ್ಟಿದ್ದರು ಎಂದು ಅವರ ಚಿಕ್ಕಪ್ಪ ಅನುಪಮ್ ತಾಮ್ರಕರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ:ಹಿಜಾಬ್ ಗಲಾಟೆಗೂ ಶಿವಮೊಗ್ಗ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ: ಕುಮಾರಸ್ವಾಮಿ
ಬೆಳಿಗ್ಗೆ ಅಲಾರಾಂ ಆಗುತ್ತಿದ್ದಾಗ, ಹುಡುಗನ ಮನೆಯವರು ಕೋಣೆಗೆ ಹೋಗಿ ನೋಡಿದಾಗ ಅವನು ಸೀಲಿಂಗ್‌ಗೆ ಫ್ಯಾನ್‍ಗೆ ನೇಣು ಹಾಕಿಕೊಂಡಿದ್ದನು ಎಂದು ತಿಳಿಸಿದ್ದಾರೆ.
ಕೋವಿಡ್ ಹಿನ್ನೆಲೆ ಕಳೆದ ಎರಡು ವರ್ಷಗಳಿಂದ ಆನ್‌ಲೈನ್ ಕ್ಲಾಸ್ ಮೂಲಕ ತರಗತಿಗೆ ಹಾಜರಾಗುತ್ತಿದ್ದನು. ಆದರೆ ಈಗ ಆಫ್‍ಲೈನ್ ತರಗತಿಗೆ ಹಾಜರಾಗಲು ಸೂಚಿಸಲಾಗಿತ್ತು. ಪರೀಕ್ಷೆಯ ಸ್ವರೂಪದಲ್ಲಿ ಬದಲಾವಣೆಯಿಂದಾಗಿ ಬಾಲಕ ಖಿನ್ನತೆಗೆ ಒಳಗಾಗಿದ್ದ ಎಂದು ಬಾಲಕನ ತಂದೆ ಅಮಿತ್ ತಾಮ್ರಕರ್ ಹೇಳಿದ್ದಾರೆ.
ಘಟನೆ ಕುರಿತು ಸಂಪೂರ್ಣವಾಗಿ ಮಾಹಿತಿ ಕಲೆ ಹಾಕುತ್ತಿದ್ದೇವೆ. ನಿಖರ ಕಾರಣ ಪತ್ತೆ ಹಚ್ಚಲು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.