Advertisement

ಸಂಸದ ತೇಜಸ್ವಿ ಸೂರ್ಯ ಜನತೆಯ ದಾರಿ ತಪ್ಪಿಸುತ್ತಿದ್ದಾರೆ : ಡಾ.ಶಂಕರ್ ಗುಹಾ

07:55 PM Dec 03, 2021 | Team Udayavani |

ಬೆಂಗಳೂರು : ಶ್ರೀ ಗುರು ರಾಘವೇಂದ್ರ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಡಿಐಸಿಜಿಸಿ ಹಣ ಸಿಗಲು ತಾವೇ ಕಾರಣ ಎಂದು ಹೇಳುವ ಮೂಲಕ ಸಂಸದ ತೇಜಸ್ವಿ ಸೂರ್ಯ ಜನತೆಯ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಮತ್ತು ಬಸವನಗುಡಿ ಎಂ ಎಲ್ ಎ ರವಿಸುಬ್ರಮಣ್ಯ ಅವರು ಜನತೆಯ ಕ್ಷಮೆಯಾಚಿಸಬೇಕು ಎಂದು ಠೇವಣಿದಾರರ ಹಿತರಕ್ಷಣಾ ವೇದಿಕೆ ಮಹಾ ಪೋಷಕರಾದ ಡಾ. ಶಂಕರ್ ಗುಹಾ ಆಗ್ರಹಿಸಿದರು.

Advertisement

ಶ್ರೀ ಗುರು ರಾಘವೇಂದ್ರ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ವಂಚನೆ ಪ್ರಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ವಂಚನೆಗೊಳಗಾದ ಬ್ಯಾಂಕ್ ಠೇವಣಿದಾರರಿಂದ ಪ್ರೆಸ್ ಕ್ಲಬ್ ನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಲಾಯಿತು.

ಈ ಸಂದರ್ಭದಲ್ಲಿ ಠೇವಣಿದಾರರ ಹಿತರಕ್ಷಣಾ ವೇದಿಕೆ ಮಹಾ ಪೋಷಕರಾದ ಡಾ. ಶಂಕರ್ ಗುಹಾ ಮಾತನಾಡಿ, ಮೊನ್ನೆಯಷ್ಟೆ ಬಿಡುಗಡೆಯಾದ ಡಿಐಸಿಜಿಸಿ (ಡೆಪಾಸಿಟ್ ಇನ್ಸೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೋರೇಶನ್ ) 5 ಲಕ್ಷ ರುಪಾಯಿ ಹಣ ರಾಘವೇಂದ್ರ ಬ್ಯಾಂಕ್ ಠೇವಣಿದಾರರಿಗೆ ಬಹುತೇಕ ತಲಪಿದ್ದು, ಇನ್ನೂ ಹಲವು ಗ್ರಾಹಕರಿಗೆ ಬಾಕಿ ಹಣ ಬರಬೇಕಾಗಿದೆ. ಈ ವೇಳೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸದಸ್ಯ ತೇಜಸ್ವಿ ಸೂರ್ಯ ಅವರು ಠೇವಣಿದಾರರಿಗೆ ಡಿಐಸಿಜಿಸಿ ಹಣ ಸಿಗಲು ತಾವೇ ಕಾರಣ ಎಂದು ಹೇಳುವ ಮೂಲಕ ಜನತೆಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.

ಡಿಐಸಿಜಿಸಿ ವಿಮೆಯ ಹಣ ಸಾರ್ವಜನಿಕರ ಹಣ. ದೇಶದ ಎಲ್ಲಾ ಬ್ಯಾಂಕ್ ಗಳು ಈ ವಿಮೆಯನ್ನು ಗ್ರಾಹಕರ ಹಣದಿಂದಲೇ ಕಟ್ಟುತ್ತಿದ್ದು, ಈವರೆಗೂ 1.35 ಲಕ್ಷ ಕೋಟಿ ಹಣ ಡಿಐಸಿಜಿಸಿ ಸಂಸ್ಥೆಯಲ್ಲಿರುತ್ತದೆ. ಅದರಲ್ಲೂ ಈ ವಿಮೆಯ ಹಣ ಠೇವಣಿದಾರರಿಗೆ ಸಿಕ್ಕಿರುವುದು ಹಗರಣ ಬೆಳಕಿಗೆ ಬಂದ ಎರಡು ವರ್ಷಗಳ ನಂತರ. ಈ ಎರಡು ವರ್ಷಗಳಲ್ಲಿ ನೂರಕ್ಕೂ ಹೆಚ್ಚು ಜನ ಠೇವಣಿದಾರರು ಸಾವನ್ನಪ್ಪಿದ್ದು. ಉಳಿದವರು ನಿತ್ಯ ಜೀವನ ಮಾಡಲು ಬೇರೆ ದಾರಿಯಿಲ್ಲದೆ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದಾರೆ ಎಂದರು.

ಆದರೇ ಠೇವಣಿದಾರರಿಗೆ ಪರಿಹಾರವನ್ನು ತಾವೇ ಕೊಡಿಸಿದ್ದೇವೆ ಎಂದು ಹೇಳಿಕೊಂಡು. ತೇಜಸ್ವಿ ಸೂರ್ಯ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ ಇದುವರೆಗೆ ನ್ಯಾಯಕ್ಕಾಗಿ ಹೋರಾಡುತ್ತಿದ್ದ ಗ್ರಾಹಕರಲ್ಲಿ ಬಹುತೇಕರು ಡಿಐಸಿಜಿಸಿ ಹಣ ಬಂದ ನಂತರ ಹೊರ ಹೋಗುತ್ತಾರೆ ಅಂತ ಲೆಕ್ಕಾಚಾರ ಹಾಕಿ ತಪ್ಪು ಕಲ್ಪನೆಯಲ್ಲಿ ಇದ್ದಂತಿದೆ. 5 ಲಕ್ಷಕ್ಕಿಂತ ಹೆಚ್ಚು ಹಣ ಠೇವಣಿ ಇಟ್ಟಿರುವ ಸುಮಾರು 10ರಿಂದ 11 ಸಾವಿರ ಗ್ರಾಹಕರಿಗೆ ಯಾವ ರೀತಿ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ತಿಳಿಸಬೇಕು. ಇದರ ಜೊತೆಗೆ ತಕ್ಷಣವೇ ಅವರ ಹಣ ಬಡ್ಡಿ ಸಮೇತ ಕೊಡಿಸುವ ಕೆಲಸ ಮಾಡಬೇಕಾಗಿದೆ ಎಂದು ಡಾ. ಶಂಕರ್ ಗುಹಾ ದ್ವಾರಕನಾಥ್ ಹೇಳಿದರು.

Advertisement

ತೇಜಸ್ವಿ ಸೂರ್ಯ, ಶಾಸಕರಾದ ರವಿ ಸಬ್ರಮಣ್ಯ ಅವರು ಜನತೆಯ ಕ್ಷಮೆಯಾಚಿಸಬೇಕು ಏಕೆಂದರೆ ನೊಂದ ಠೇವಣಿದಾರರಿಗೆ ಪರಿಹಾರ ಕೊಡಿಸಲು ಎರಡು ವರ್ಷಗಳಷ್ಟು ಸಮಯ ತೆಗೆದುಕೊಂಡಿದ್ದಾರೆ. ಯೆಸ್ ಬ್ಯಾಂಕ್, ಲಕ್ಷ್ಮಿ ವಿಲಾಸ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಗಳ ವಿಚಾರದಲ್ಲಿ ಕೇವಲ ಒಂದೇ ವಾರದಲ್ಲಿ ಸಮಸ್ಯೆ ಬಗೆಹರಿಸಲಾಯ್ತು. ಪಿಎಂಸಿ ಪ್ರಕರಣದಲ್ಲೂ ಒಂದು ವರ್ಷದ ಒಳಗೆ ಪರಿಹಾರ ಸಿಕ್ಕಿತು ಎಂದರು.

ಆದರೆ ಆ ರೀತಿಯ ಪರಿಹಾರವನ್ನು ಗುರುರಾಘವೇಂದ್ರ ಬ್ಯಾಂಕ್ ಗ್ರಾಹಕರಿಗೆ ಅವರು ಕೊಡಿಸುವುದರಲ್ಲಿ ವಿಫಲರಾಗಿದ್ದಾರೆ. ಈ ಎರಡು ವರ್ಷದ ಅವಧಿಯಲ್ಲಿ ನೂರಕ್ಕೂ ಹೆಚ್ಚು ಮಂದಿ ಠೇವಣಿದಾರರು ಪ್ರಾಣ ಕಳೆದುಕೊಂಡಿದ್ದರೂ.. ಈ ಇಬ್ಬರಿಂದ ಮೃತರ ಬಗ್ಗೆ, ಅವರ ಕುಟುಂಬಗಳ ಬಗ್ಗೆ ಯಾವುದೇ ತರಹದ ಸಾಂತ್ವನದ ಮಾತುಗಳು ಕೇಳಿಬಂದಿಲ್ಲ. ಇದೀಗ ತಮಗೆ ತಾವೇ ಶಹಭಾಷ್ ಗಿರಿ ಹೇಳಿಕೊಂಡು, ಪ್ರಶಂಸೆ ಮಾಡಿಕೊಂಡು ಜನತೆಗೆ ಅದನ್ನು ನಂಬಿಸಲು ಹೊರಟಿರುವುದು ತೀರಾ ಖಂಡನಾರ್ಹ ಎಂದರು.

ಜನರ ಪರ ನಿಂತು ಸಿಐಡಿ ಸರಿಯಾದ ರೀತಿಯಲ್ಲಿ ತನಿಖೆ ನಡೆಸುವಂತೆ ಒತ್ತಡ ಹಾಕಿ. ವಂಚಕರಿಂದ ಹಣ ವಸೂಲಿ ಮಾಡಿಸಿ ಅದನ್ನ ಠೇವಣಿದಾರರಿಗೆ ಕೊಡಿಸುವುದರ ಜೊತೆಗೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಬಹುದಿತ್ತು. ಆದರೆ ಅವರಿಬ್ಬರು ತನಿಖೆ ಬಗ್ಗೆ ಮಾತೇ ಆಡುತ್ತಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಈ ಹಗರಣಗಳಿಂದ ಜನ ಅನುಭವಿಸುತ್ತಿರುವ ಸಂಕಷ್ಟದ ಬಗ್ಗೆ ಅರಿವು ಮೂಡಿಸುವಲ್ಲಿ ವಿಫಲರಾಗಿದ್ದಾರೆ. ಇದರಿಂದಾಗಿ ವಂಚಕರು ಆರಾಮವಾಗಿ ಎಲ್ಲಾ ಕಡೆ ಓಡಾಡಿಕೊಂಡು ಸುಖವಾಗಿ ಜೀವನ ಸಾಗಿಸುತ್ತಿದ್ದಾರೆ ಎಂದರು.

ಇನ್ನೂ ಕಾಲ ಮಿಂಚಿಲ್ಲ ಶಾಸಕರು, ಸಂಸದರು ಈಗಲಾದರೂ ಎಚ್ಚೆತ್ತುಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ತಂದು, ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಮಾಡಬೇಕು ಎಂದು ಠೇವಣಿದಾರರು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next