Advertisement

ಸಂಸದೆ ಸುಮಲತಾ ಇಂದು ಬಿಜೆಪಿಗೆ, ಬಿಜೆಪಿ ತೊರೆದ ಪುಟ್ಟಣ್ಣ ಕಾಂಗ್ರೆಸ್‌ಗೆ

10:35 PM Mar 09, 2023 | Team Udayavani |

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಈಗ ಪಕ್ಷಾಂತರ ಪರ್ವ ಜೋರಾಗಿ ಸದ್ದು ಮಾಡುತ್ತಿದೆ. ಆಡಳಿತಾರೂಢ ಬಿಜೆಪಿಗೆ ಈ ವಿಚಾರ ಈಗ ತೀವ್ರ ಪ್ರಮಾಣದಲ್ಲಿ ಒಳ ಏಟು ನೀಡಲಾರಂಭಿಸಿದ್ದು, ಪ್ರಬಲ “ವಿಕೆಟ್‌’ಗಳು ಉರುಳದಂತೆ ನೋಡಿಕೊಳ್ಳುವುದು ಕೇಸರಿ ಪಡೆಗೆ ಸವಾಲಾಗಿದೆ.

Advertisement

ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಸ್ಕ್ರೀನಿಂಗ್‌ ಕಮಿಟಿ ಸಭೆ ನಡೆಯುತ್ತಿರುವಾಗಲೇ ಬಿಜೆಪಿಯಿಂದ ವಲಸೆ ವಿಚಾರ ಸುದ್ದಿಯಾಗುತ್ತಿದೆ. ಈಗಾಗಲೇ ಪಕ್ಷದಿಂದ ಒಂದು ಕಾಲು ಹೊರಗಿಟ್ಟಿರುವ ಸಚಿವ ನಾರಾಯಣ ಗೌಡ ಜತೆಗೆ ಇನ್ನೂ ಮೂವರು ಸಚಿವರು ಬಿಜೆಪಿ ತೊರೆಯಲಿದ್ದಾರೆ ಎಂಬ ಸುದ್ದಿ ಬಲವಾಗಿದೆ. ಇದೆಲ್ಲದರ ನಡುವೆ ಮಂಡ್ಯ ಸಂಸದೆ ಸುಮಲತಾ ಬಿಜೆಪಿ ಸೇರುವುದಕ್ಕೆ ವೇದಿಕೆ ಸಿದ್ಧವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಮಂಡ್ಯ ಭೇಟಿಗೆ ಮುಂಚಿತವಾಗಿ ಈ ಪ್ರಕ್ರಿಯೆ ಪೂರ್ಣಗೊಳಿಸುವುದಕ್ಕೆ ಸಿದ್ಧತೆ ನಡೆದಿದೆ.

ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ 3 ಬಾರಿ ಜೆಡಿಎಸ್‌ ಹಾಗೂ ಒಮ್ಮೆ ಬಿಜೆಪಿಯಿಂದ ಆಯ್ಕೆಯಾಗಿದ್ದ ಪುಟ್ಟಣ್ಣ ಗುರುವಾರ ದಿಢೀರನೇ ಬಿಜೆಪಿ ಹಾಗೂ ಮೇಲ್ಮನೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ದಿಗ್ಗಜರ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರಿದ್ದಾರೆ. ಪುಟ್ಟಣ್ಣ ಸದಸ್ಯತ್ವದ ಅವಧಿ 2026ರ ನವೆಂಬರ್‌ವರೆಗೂ ಇತ್ತು. ಇಷ್ಟೊಂದು ದೀರ್ಘ‌ ಅವಧಿ ಇದ್ದರೂ ರಾಜೀನಾಮೆ ನೀಡಿ ಕಾಂಗ್ರೆಸ್‌ ಸೇರಿರುವುದು ಅಚ್ಚರಿ ತಂದಿದೆ. ಅವರು ರಾಜಾಜಿನಗರ ಇಲ್ಲವೇ ಚನ್ನಪಟ್ಟಣದಿಂದ ಅಭ್ಯರ್ಥಿಯಾಗುವ ಸಾಧ್ಯತೆಗಳಿವೆ.

ಆರದ ಸೋಮಣ್ಣ ಬೆಂಕಿ
ವಸತಿ ಸಚಿವ ವಿ.ಸೋಮಣ್ಣ ಕಾಂಗ್ರೆಸ್‌ ಸೇರ್ಪಡೆ ವಿಚಾರ ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಆತಂಕದ ಸನ್ನಿವೇಶ ನಿರ್ಮಾಣ ಮಾಡಿದೆ. ಸೋಮಣ್ಣ ಅವರನ್ನು ಪಕ್ಷಕ್ಕೆ ಕರೆತಂದು ರಾಜಾಜಿನಗರದಿಂದ ಕಣಕ್ಕಿಳಿಸುವ ಬಗ್ಗೆ ಸ್ಕ್ರೀನಿಂಗ್‌ ಕಮಿಟಿ ಸಭೆಯಲ್ಲಿ ಪ್ರಸ್ತಾವಿಸಲಾಗಿತ್ತು. ಇದು ಅಂತಿಮ ಹಂತದಲ್ಲಿದ್ದಾಗ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್‌, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸಹಿತ ಪ್ರಮುಖ ಲಿಂಗಾಯತ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದರು ಎನ್ನಲಾಗಿದೆ. ಗುರುವಾರ ಕಾಂಗ್ರೆಸ್‌ ಸೇರ್ಪಡೆಯಾಗಿರುವ ಪುಟ್ಟಣ್ಣ ಅವರನ್ನು ರಾಜಾಜಿನಗರದ ಸಂಭಾವ್ಯ ಅಭ್ಯರ್ಥಿ ಪಟ್ಟಿಯಲ್ಲಿ ಇಡಲಾಗಿದೆ.

ಸೋಮಣ್ಣ ಜತೆಗೆ ಸಿಎಂ ಚರ್ಚೆ
ಇನ್ನೊಂದೆಡೆ ಸಚಿವ ಸೋಮಣ್ಣ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ನಿವಾಸಕ್ಕೆ ಕರೆಸಿ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಕೂಡ ಅವರ ಜತೆ ಸಂಧಾನ ನಡೆಸುವ ನಿರೀಕ್ಷೆ ಇದೆ.

Advertisement

ನಂದೀಶ್‌ ರೆಡ್ಡಿ ಗೈರು
ಕೆ.ಆರ್‌.ಪುರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಗೆ ಮಾಜಿ ಶಾಸಕ ನಂದೀಶ್‌ ರೆಡ್ಡಿ ಗೈರಾಗಿದ್ದಾರೆ. ಅವರು ಕಾಂಗ್ರೆಸ್‌ ಸೇರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಬಿಜೆಪಿ ಸೇರ್ಪಡೆ?
ಮಂಡ್ಯ ಜಿಲ್ಲಾ ರಾಜಕಾರಣದಲ್ಲೂ ಕುತೂಹಲಕಾರಿ ಬೆಳವಣಿಗೆಗಳು ನಡೆಯುತ್ತಿವೆ. ಸಚಿವ ನಾರಾಯಣ ಗೌಡ ಬಿಜೆಪಿ ತೊರೆಯುವುದು ಬಹುತೇಕ ಖಾತ್ರಿ ಎನ್ನಲಾಗುತ್ತಿದೆ. ಇದಕ್ಕೆ ಪ್ರತಿಯಾಗಿ ಸಂಸದೆ ಸುಮಲತಾ ಅಂಬರೀಷ್‌ ಅವರನ್ನು ಸೇರಿಸಿಕೊಳ್ಳಲು ಬಿಜೆಪಿ ನಿರ್ಧರಿಸಿದೆ. ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಸುಮಲತಾ ತಮ್ಮ ನಿಲುವು ಪ್ರಕಟಿಸುವ ನಿರೀಕ್ಷೆಯಿದೆ. ಮಾ.11ರಂದು ಅವರು ಬೆಂಗಳೂರಿನಲ್ಲಿ ಬಿಜೆಪಿ ಸೇರುವುದು ನಿಶ್ಚಿತ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಬೆಲ್ಲದ್‌ ವಿರುದ್ಧ ಲಿಂಬಿಕಾಯಿ
ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದ ಹುಬ್ಬಳ್ಳಿ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ್‌ ವಿರುದ್ಧ ಮೇಲ್ಮನೆಯ ಮಾಜಿ ಸದಸ್ಯ ಮೋಹನ್‌ ಲಿಂಬಿಕಾಯಿ ಅವರನ್ನು ಕಣಕ್ಕಿಳಿಸುವ ಪ್ರಯತ್ನ ಬಿರುಸಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಹಿರಿಯ ಕಾಂಗ್ರೆಸ್‌ ನಾಯಕರ ಜತೆಗೆ ಲಿಂಬಿಕಾಯಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ರಾಜ್ಯ ನಾಯಕರು ಬಹುತೇಕ ಈ ಪ್ರಸ್ತಾವವನ್ನು ಒಪ್ಪಿಕೊಂಡಿದ್ದಾರೆ ಎಂದು ಕಾಂಗ್ರೆಸ್‌ನ ಮೂಲಗಳು ತಿಳಿಸಿವೆ. ಮೋಹನ್‌ ಲಿಂಬಿಕಾಯಿ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಈ ಹಿಂದೆ ಅತ್ಯಾಪ್ತರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next