ಉಡುಪಿ: ನಶಿಸುತ್ತಿರುವ ಸಾಂಪ್ರದಾಯಿಕತೆಗೆ ಪ್ರಾಶಸ್ತ್ಯ ನೀಡುತ್ತಿರುವ ಶ್ರೀಕೃಷ್ಣ ಮಠ ಪರ್ಯಾಯ ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಕಾಳಜಿಗೆ ಸಂಸದೆ ಶೋಭಾ ಕರಂದ್ಲಾಜೆ ಟ್ವೀಟ್ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ.
“ಇಂದು ನನಗೆ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಕೈಮಗ್ಗದ ಉಡುಪಿ ಸೀರೆಯನ್ನು ಪ್ರಸಾದವಾಗಿ ನೀಡಿದರು. ಪರ್ಯಾಯೋತ್ಸವವನ್ನು ಅವರು ಪ್ಲಾಸ್ಟಿಕ್‌ಮುಕ್ತ ಉತ್ಸವವಾಗಿ ಆಚರಿಸಿದರು. ಇವರಿಗೆ ಪಾರಂಪರಿಕ ಕೃಷಿ ಮತ್ತು ಸಂಸ್ಕೃತಿಯ ಬಗೆಗೆ ವಿಶೇಷ ಒಲವಿದೆ. ಇಂತಹ ಕ್ರಾಂತಿಕಾರಿ ಚಿಂತನೆಯನ್ನು ಅವರು ಹೊಂದಿದ್ದಾರೆ’ ಎಂದು ಶೋಭಾ ತಿಳಿಸಿದ್ದಾರೆ.
ಶೋಭಾ ಅವರು ಸೋಮವಾರ ರಾತ್ರಿ 7 ಗಂಟೆಗೆ ಟ್ವೀಟಿಸಿದ್ದರು. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರದ ಜವುಳಿ ಖಾತೆ ಸಚಿವೆ ಸ್ಮತಿ ಇರಾನಿ, ಉದ್ಯಮಿ ಟಿ.ವಿ. ಮೋಹನದಾಸ್ ಪೈ ಮೊದಲಾದ ಗಣ್ಯರು ಈ ಪೋಸ್ಟನ್ನು ವೀಕ್ಷಿಸಿದ್ದಾರೆ.
ಈ ಸೀರೆಯನ್ನು ಕಿನ್ನಿಗೋಳಿ ತಾಳಿಪಾಡಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ಆನಂದ ಶೆಟ್ಟಿಗಾರ್ ತಯಾರಿಸಿದ್ದರು. ಆರೋಗ್ಯಕ್ಕೆ ಉತ್ತಮವಾದ ಕೈಮಗ್ಗದ ಸೀರೆಗಳಿಗೆ ಕಳೆದ ಎರಡು ಮೂರು ದಶಕಗಳಿಂದ ಬೇಡಿಕೆ ಕುಸಿದಿತ್ತು. ಆದರೆ ಇತ್ತೀಚಿಗೆ ಇದರ ಮೌಲ್ಯವನ್ನು ಅರಿತ ಕೆಲವರು ಮತ್ತೆ ಪ್ರಚಾರಕ್ಕೆ ತರುತ್ತಿದ್ದಾರೆ.