Advertisement

ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕೇರಳದಲ್ಲಿ ಪ್ರಕರಣ

11:19 PM Jan 24, 2020 | Lakshmi GovindaRaj |

ಮಲಪ್ಪುರಂ/ಬೆಂಗಳೂರು: ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕೇರಳ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಎರಡು ಸಮುದಾಯಗಳ ವಿರುದ್ಧ ದ್ವೇಷಮಯ ವಾತಾವರಣ ಉಂಟಾಗಲು ಕುಮ್ಮಕ್ಕು ನೀಡಿದ್ದಾರೆಂಬ ಆರೋಪವನ್ನು ಬಿಜೆಪಿ ನಾಯಕಿ ಮೇಲೆ ಹೊರಿಸಲಾಗಿದೆ.

Advertisement

ಮುಸ್ಲಿಂ ಬಾಹುಳ್ಯದ ಮಲಪ್ಪುರಂ ಜಿಲ್ಲೆಯ ಕುಟ್ಟಿಪ್ಪುರಂ ಪಂಚಾಯಿತಿ ವ್ಯಾಪ್ತಿಯಲ್ಲಿ ಹಿಂದೂಗಳು ವಾಸಿಸುವ ಪ್ರದೇಶಕ್ಕೆ ನೀರು ಸರಬರಾಜು ಮಾಡದೇ ಇದ್ದ ನಿಲುವನ್ನು ಖಂಡಿಸಿ ಅವರು ಟ್ವೀಟ್‌ ಮಾಡಿದ್ದರು. ಇತ್ತೀಚೆಗೆ ಸಿಎಎ ಪರ ನಡೆದಿದ್ದ ಕಾರ್ಯಕ್ರಮದಲ್ಲಿ ಸ್ಥಳೀಯ ನಿವಾಸಿಗಳು ಭಾಗವಹಿಸಿದ್ದರಿಂದ ಸ್ಥಳೀಯ ಗ್ರಾಪಂ ನೀರು ಪೂರೈಕೆ ಮಾಡಲಿಲ್ಲ ಎಂದು ಟ್ವೀಟ್‌ ಮಾಡಿದ್ದರು. ಕಾಶ್ಮೀರದಲ್ಲಿರುವಂಥ ಪರಿಸ್ಥಿತಿ ಕೇರಳದಲ್ಲಿ ನಿಧಾನಕ್ಕೆ ಶುರುವಾಗಿದೆ ಎಂದೂ ಅವರು ಬರೆದುಕೊಂಡಿದ್ದರು. ಅವರಿಗೆ ಕೊನೆಗೆ ಸೇವಾ ಭಾರತಿ ನೀರೊದಗಿಸಬೇಕಾಯಿತು ಎಂದು ಆಕ್ರೋಶ ಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕೇಸು ದಾಖಲಾಗಿದೆ.

ಪೊಲೀಸರ ಕ್ರಮ ಖಂಡಿಸಿ ಶುಕ್ರವಾರ ಟ್ವೀಟ್‌ ಮಾಡಿರುವ ಬಿಜೆಪಿ ನಾಯಕಿ “ಚೇರ್ಕುನ್ನುವಿನಲ್ಲಿ ದಲಿತ ಕುಟುಂಬಗಳಿಗೆ ಉಂಟಾಗಿರುವ ತಾರತಮ್ಯ ನಿವಾರಿಸಬೇಕಾಗಿರುವ ಕೇರಳದ ಎಡಪಂಥೀಯ ಸರ್ಕಾರ ನನ್ನ ಮೇಲೆ ಕೇಸು ದಾಖಲಿಸಿದೆ. ಯಾವುದೇ ಸಾಧನೆ ಮಾಡದ ಕೇರಳ ಸರ್ಕಾರದ ವಿರುದ್ಧ ಸಂಘಟಿತವಾಗಿ ಎದ್ದು ನಿಲ್ಲುವ ಸಮಯ ಬಂದಿದೆ’ ಎಂದು ಬರೆದುಕೊಂಡಿದ್ದಾರೆ. ಶೋಭಾ ಕರಂದ್ಲಾಜೆ ಪರವಾಗಿ ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವೀಯ, ವಕ್ತಾರ ಸಂಬಿತ್‌ ಪಾತ್ರಾ, ಕರ್ನಾಟಕ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಟ್ವೀಟ್‌ ಮಾಡಿದ್ದಾರೆ.

ಆರೋಪ ನಿರಾಕರಣೆ: ಬಿಜೆಪಿ ಸಂಸದೆ ಮಾಡಿರುವ ಆರೋಪವನ್ನು ಕುಟ್ಟಿಪ್ಪುರಂ ಪಂಚಾಯತ್‌ ಉಪಾಧ್ಯಕ್ಷ ಸಿದ್ದೀಕ್‌ ನಿರಾಕರಿಸಿದ್ದಾರೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಈಗ ಕುಡಿವ ನೀರಿನ ಸಮಸ್ಯೆ ಇದೆ. ಅದಕ್ಕೆ ಪರಿಹಾರ ಕಂಡುಕೊಳ್ಳಲು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದೇವೆ. ಸದ್ಯಕ್ಕೆ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next