ಕೋಲಾರ: ದೇಶದ ಉನ್ನತಿ,ರಕ್ಷಣೆಗೆ ಕಾರಣರಾದ ಅನ್ನದಾತ ರೈತ ಹಾಗೂ ಗಡಿ ಕಾಯುವ ಯೋಧರ ಹಿತ ರಕ್ಷಣೆ, ಯುಧ್ದೋಪಕರಗಳ ಉತ್ಪಾದನೆಯಲ್ಲಿ ಸ್ವಾವಲಂಬನೆಯ ಗುರಿ ಸಾಧನೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.
ನಗರ ಹೊರವಲಯದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸೋಮವಾರ ನೂರಾರು ರೈತರೊಂದಿಗೆ ಪ್ರಧಾನಿ ಮೋದಿಜಿರವರ “ಪಿಎಂ ಕಿಸಾನ್ ಸಮ್ಮಾನ್’ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮ, 600 ಪಿಎಂ ಕಿಸಾನ್ ಸಮೃದ್ಧಿ ಕೇಂದ್ರಗಳ ಉದ್ಘಾಟನೆ ಮತ್ತು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 16 ಸಾವಿರ ಕೋಟಿ ರೂ.ಗಳ 12 ನೇ ಕಂತಿನ ಆರ್ಥಿಕ ನೆರವನ್ನು ಫಲಾನುಭವಿ ಕೃಷಿಕರಿಗೆ ವರ್ಗಾವಣೆ ಮಾಡುವ ಕಾರ್ಯಕ್ರಮ ವೀಕ್ಷಿಸಿ ಮಾತನಾಡಿದರು. 12 ಕಂತಿನಲ್ಲಿ ಜಿಲ್ಲೆಯ ರೈತರಿಗೆ 21 ಕೋಟಿ ರೂ ವರ್ಗಾವಣೆಯಾಗಿದೆ. ಕೃಷಿಯಲ್ಲಿ ತಾಂತ್ರಿಕತೆ ತರುವ ಮೂಲಕ ರೈತರ ಆದಾಯ ದ್ವಿಗುಣಗೊಳಿಸುವ ಕಾರ್ಯದಲ್ಲಿ ಮೋದಿ ಕೈಗೊಂಡಿರುವ ಕಾರ್ಯಗಳು ಶ್ಲಾಘನೀಯವಾ ಗಿದ್ದು, ಕಿಸಾನ್ ಸಮ್ಮಾನ್ ಯೋಜನೆ ಮೂಲಕ ರೈತರ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆ ಮಾಡುವ ಮೂಲಕ ಅನ್ನದಾತರ ಕೈಹಿಡಿಯುವ ಕೆಲಸವನ್ನು ಮೋದಿ ಮಾಡಿದ್ದಾರೆ ಎಂದರು.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ 2022-23 ಸಾಲಿನಲ್ಲಿ ಕೇಂದ್ರ ಸರ್ಕಾರದಡಿ 1,31,423 ಫಲಾನುಭವಿ ರೈತರು 26.28 ಕೋಟಿ ರೂ. ಮೊತ್ತದ ಆರ್ಥಿಕ ನೆರವಿನ ಲಾಭ ಪಡೆದರೆ, 2022-23 ರಾಜ್ಯ ಸರ್ಕಾರದಡಿ ಒಟ್ಟು 1,09,303 ಫಲಾನುಭವಿಗಳು 21.86 ಕೋಟಿ ರೂ. ಗಳ ಆರ್ಥಿಕ ಲಾಭವನ್ನು ಪಡೆದಿದ್ದಾರೆ ಎಂದರು.
ಹಿರಿಯ ವಿಜ್ಞಾನಿ ಮತ್ತು ಕೋಲಾರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಕೆ ತುಳಸೀರಾಮ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಡಿ ಎಲ್ ನಾಗರಾಜು, ಕೋಲಾರ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ವಿ.ಡಿ ರೂಪಾದೇವಿ, ಬೆಂಗಳೂರು ಜಿ.ಕೆ.ವಿ.ಕೆ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ ಬಿ ಬೊರಯ್ಯ, ದಿಶಾ ಸಮಿತಿ ಸದಸ್ಯ ಅಪ್ಪಿನಾರಾಯಣಸ್ವಾಮಿ ಮತ್ತು ನೂರಾರು ರೈತರುಗಳು, ಇತರರು ಹಾಜರಿದ್ದರು.
ಯೋಧರ ಹಿತರಕ್ಷಣೆ : ದೇಶದ ಗಡಿ ರಕ್ಷಣೆ ಹೊಣೆ ಹೊತ್ತಿರುವ ಯೋಧರಿಗೆ ಅಗತ್ಯ ಆರ್ಥಿಕ ನೆರವು, ವೇತನ, ಭತ್ಯೆಗಳನ್ನು ನೀಡಿಕೆ ಜತೆಗೆ ಸುರಕ್ಷಿತ ಬುಲೆಟ್ ಪ್ರೂಫ್ ಜಾಕೆಟ್‌ಗಳನ್ನು ಒದಗಿಸುವ ಮೂಲಕ ರಕ್ಷಣ ಉತ್ಪನ್ನಗಳ ತಯಾರಿಕೆಯಲ್ಲೂ ಆತ್ಮನಿರ್ಭರ ಭಾರತದಡಿ ಸ್ವಾವಲಂಬನೆ ಸಾಧಿಸುವಲ್ಲಿಯೂ ಮೋದಿಯು ಮುಂದಡಿ ಇಟ್ಟಿದ್ದಾರೆ ಎಂದರು.