Advertisement

ನಗರಸಭೆ ಅವ್ಯವಹಾರಗಳ ಸಮಗ್ರ ದಾಖಲೆಗಳಿವೆ

03:07 PM Apr 17, 2023 | Team Udayavani |

ಕೆಜಿಎಫ್‌: ನಗರಸಭೆಯಲ್ಲಿ ಏನೇನು ಅವ್ಯವಹಾರಗಳಾಗಿದೆ ಎಂಬುದರ ಸಮಗ್ರ ದಾಖಲೆಗಳಿದ್ದು, ಎಲ್ಲವನ್ನೂ ಲೋಕಾಯುಕ್ತ ತನಿಖೆಗೆ ಒಳಪಡಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು ಶಿಕ್ಷೆಗೊಳಪಡಿಸಲಾಗುವುದು ಎಂದು ಸಂಸದ ಎಸ್‌. ಮುನಿಸ್ವಾಮಿ ಹೇಳಿದರು.

Advertisement

ನಗರದ ಮೊಯ್ದು ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ,ನಗರಸಭೆ ಅಧ್ಯಕ್ಷರು ಚಿನ್ನದ ಗಣಿ ಪ್ರದೇಶದಲ್ಲಿ ಒತ್ತುವರಿ ಮಾಡಿಕೊಂಡಿರುವ ಜಮೀನುಗಳ ಎಲ್ಲ ದಾಖಲೆಗಳನ್ನು ಬಹಿರಂಗ ಪಡಿಸಲಾಗುವುದು ಎಂದರು.

ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಗೆಲ್ಲಿಸಿಕೊಳ್ಳಬೇಕಾದರೆ ಸ್ಥಳೀಯ ಅಭ್ಯರ್ಥಿಯಾಗಿರಬೇಕೆಂದು ಆಕಾಂಕ್ಷಿಗಳೆಲ್ಲರೂ ಒಮ್ಮತಕ್ಕೆ ಬಂದಿದ್ದರಿಂದ ಮಾಜಿ ಶಾಸಕ ವೈ. ಸಂಪಂಗಿ ಪುತ್ರಿ ಅಶ್ವಿ‌ನಿಯವರನ್ನು ಹೈಕಮಾಂಡ್‌ ಅಭ್ಯರ್ಥಿಯನ್ನಾಗಿ ಘೋಷಿಸಿದ್ದು, ಎಲ್ಲರೂ ಒಟ್ಟಾಗಿ ದುಡಿದು ಬಿಜೆಪಿ ಪಕ್ಷವನ್ನು ಗೆಲ್ಲಿಸಬೇಕೆಂದರು.

ಬಾರಿ ದಿಗ್ಗಜರಿಗೆ ಕೈ ತಪ್ಪಿದ ಟಿಕೆಟ್‌: ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮೋಹನ್‌ಕೃಷ್ಣಗೆ ಬಂಗಾರ ಪೇಟೆಯಲ್ಲಿ ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ಇಲ್ಲವೇ, ಅವರ ಮಗ ಬಿ.ವಿ.ಮಹೇಶ್‌ರವರಿಗೆ ಹೈಕಮಾಂಡ್‌ ಟಿಕೆಟ್‌ ನೀಡಿದರೆ ನಿಮಗೆ ಸಾಮಾಜಿಕ ನ್ಯಾಯ ಪರಿಕಲ್ಪನೆಯಡಿಯಲ್ಲಿ ಕೆಜಿಎಫ್‌ನಲ್ಲಿ ಟಿಕೆಟ್‌ ನೀಡಲಾಗುತ್ತದೆ ಎಂದು ಹೇಳಿದ್ದೆ, ಆದರೆ ಬಂಗಾರಪೇಟೆಯಲ್ಲಿ ಎಂ.ನಾರಾಯಣಸ್ವಾಮಿ ಅವರಿಗೆ ಹೈಕಮಾಂಡ್‌ ಟಿಕೆಟ್‌ ನೀಡಿದ್ದರಿಂದ ಕೆಜಿಎಫ್‌ನಲ್ಲಿ ಮೋಹನ್‌ಕೃಷ್ಣಗೆ ಟಿಕೆಟ್‌ ನೀಡಲಾಗಿಲ್ಲ, ಇದನ್ನು ಅವರು ಅರ್ಥ ಮಾಡಿಕೊಂಡಿಲ್ಲ ಎಂದರು. ಕೆ.ಎಸ್‌.ಈಶ್ವರಪ್ಪ, ಜಗದೀಶ್‌ ಶೆಟ್ಟರ್‌ ಅಂತಹ ದಿಗ್ಗಜರಿಗೇ ಕೆಲವು ಮಾನದಂಡಗಳ ಅಡಿಯಲ್ಲಿ ಈ ಬಾರಿ ಟಿಕೆಟ್‌ ಕೈತಪ್ಪಿದೆ. ದೇವರಿಂದಲೂ ಎಲ್ಲರಿಗೂ ಒಳ್ಳೆಯದನ್ನು ಮಾಡಲು ಸಾಧ್ಯವಿಲ್ಲ, ಇನ್ನು ನಾನು ತಾನೇ ಏನು ಮಾಡಲು ಸಾಧ್ಯ. ದುಡುಕಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಸ್ವತಂತ್ರವಾಗಿ ಹೋದಲ್ಲಿ ಜನತೆಯೇ ನಿಮಗೆ ತಕ್ಕಪಾಠ ಕಲಿಸಲಿದ್ದಾರೆ ಎಂದು ಹೆಸರು ಹೇಳದೆ ಪರೋಕ್ಷವಾಗಿ ಮೋಹನ್‌ ಕೃಷ್ಣಗೆ ಟಾಂಗ್‌ ನೀಡಿದರು.

ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಿ ನಮ್ಮೊಡನೆ ಇದ್ದರೆ ಮುಂದಿನ ದಿನಗಳಲ್ಲಿ ಪಕ್ಷ ನಿಮ್ಮ ಸೇವೆಯನ್ನು ಗುರ್ತಿಸಿ, ನಿಮಗೆ ಸೂಕ್ತ ಸ್ಥಾನಮಾನ ನೀಡಲಾಗುವುದು. ಇಲ್ಲವಾದಲ್ಲಿ ಇಂದು ನಿಮ್ಮ ಹಿಂದೆ ಬರುತ್ತಿರುವವರು ನಿಮ್ಮ ಬಳಿ ಹಣ ಇರುವಷ್ಟು ದಿನ ನಿಮ್ಮೊಡನೆ ಇದ್ದು ಬಳಿಕ ಹೊರಟು ಹೋಗುತ್ತಾರೆ ಎಂದರು.

Advertisement

ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಅನುದಾನ: ಕೆಜಿಎಫ್‌ ನಗರದಲ್ಲಿ 35 ವಾರ್ಡ್‌ ಗಳಿದ್ದು, ಒಂದು ಲಕ್ಷಕ್ಕೂ ಅಧಿಕ ಮತದಾರರಿದ್ದು, ಇದರಲ್ಲಿ 25-30 ಸಾವಿರ ಮತಗಳನ್ನು ಹಾಕಿಸಿದರೆ ಸಾಕು, ನಮ್ಮ ಅಭ್ಯರ್ಥಿ ಗೆದ್ದಂತೆಯೇ. ಕೆಜಿಎಫ್‌ನಲ್ಲಿ ಆಗಿರುವಂತಹ ಅಭಿವೃದ್ಧಿ ಕಾರ್ಯಗಳೆಲ್ಲವೂ ಕೇಂದ್ರ ಸರ್ಕಾರದ ಅನುದಾನದಿಂದ ಆಗಿರುವಂತದ್ದಾಗಿದೆ. ಕೆಜಿಎಫ್‌ನ ಸಮಗ್ರ ಅಭಿವೃದ್ಧಿಗಾಗಿ ಅಮೃತ್‌ ಸಿಟಿ ಯೋಜನೆಯಡಿಯಲ್ಲಿ 147 ಕೋಟಿ ರೂ. ಬಿಡುಗಡೆ ಮಾಡಿರುವುದು ಕೇಂದ್ರ ಸರ್ಕಾರವಾಗಿದೆ. 14 ನೇ ಹಣಕಾಸು, ನಗರೋತ್ಥಾನ, ಸ್ವತ್ಛ ಭಾರತ್‌ ಸೇರಿದಂತೆ ವಿವಿಧಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಿದ್ದು ಕೇಂದ್ರ ಸರ್ಕಾರ. ಇನ್ನು 10 ಜನ್ಮಗಳೆತ್ತಿದರೂ ಕಾಂಗ್ರೆಸ್‌ ಅ ಧಿಕಾರಕ್ಕೆ ಬರುವುದಿಲ್ಲ. ಇವರ ತಂದೆ ಯಾವ ರೀತಿ ನಾಟಕಗಳನ್ನು ಮಾಡುತ್ತಿದ್ದರೋ , ಅದೇ ರೀತಿ ಇವರೂ ಮಾಡುತ್ತಿದ್ದಾರೆ. ಕೆಜಿಎಫ್‌ ಜನತೆಯ ನಾಡಿಮಿಡಿತ ಅವರಿಗೆ ಇನ್ನೂ ಅರ್ಥವಾಗಿಲ್ಲ ಎಂದರು.

ಬಹಿರಂಗ ಚರ್ಚೆಗೆ ಆಹ್ವಾನ: ಡಿಸಿಸಿ ಬ್ಯಾಂಕ್‌ನಿಂದ ಸಾಲವನ್ನು ವಿತರಿಸಿ ತಾವು ಗೆದ್ದಲ್ಲಿ ಸಾಲವನ್ನು ಮರುಪಾವತಿ ಮಾಡುವಂತಿಲ್ಲ ಎಂದು ಆಶ್ವಾಸನೆಗಳನ್ನು ನೀಡಿ, ಚುನಾವಣೆ ಮುಗಿದ ಬಳಿಕ ಸಾಲ ವಸೂಲಾತಿಗೆ ಅಮಾಯಕ ಹೆಣ್ಣುಮಕ್ಕಳ ಮನೆಗಳಿಗೆ ಪೊಲೀಸರನ್ನು ಕಳುಹಿಸಿದ್ದನ್ನು ಕ್ಷೇತ್ರದ ತಾಯಂದಿರು ಇನ್ನೂ ಮರೆತಿಲ್ಲ, ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಈ ಬಾರಿ ಅಶ್ವಿ‌ನಿಯವರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು. ನಾವು ಏನೇನು ಅನುದಾನಗಳನ್ನು ತಂದಿದ್ದೇವೆ ಎಂಬುದನ್ನು ನಾವು ಹೇಳುತ್ತೇವೆ, ನೀವು ಏನೇನು ಅನುದಾನಗಳನ್ನು ತಂದಿದ್ದೀರ ಎಂಬುದನ್ನು ಚರ್ಚಿಸಲು ಬಹಿರಂಗವಾಗಿ ಚರ್ಚಿಸೋಣ ಎಂದು ಪಂಥಾಹ್ವಾನ ನೀಡಿದರು.

ಒಗ್ಗಟ್ಟಿನಿಂದ ಗೆಲುವಿಗೆ ಶ್ರಮಿಸಿ: ಮಾಜಿ ಶಾಸಕ ವೈ.ಸಂಪಂಗಿ ಮಾತನಾಡಿ, ಕ್ಷೇತ್ರದಲ್ಲಿ ಹಲವು ಮಂದಿ ಟಿಕೆಟ್‌ ಆಕಾಂಕ್ಷಿಗಳಿದ್ದರು, ನಾವು ಯಾರಿಗೂ ತೊಂದರೆ ಕೊಟ್ಟಿಲ್ಲ, ನಮ್ಮ ಪ್ರಯತ್ನಗಳು ನಿರಂತರ ವಾಗಿ ನಡೆಯುತ್ತಿತ್ತು, ಅಂತಿಮವಾಗಿ ಹೈಕಮಾಂಡ್‌ ನಮಗೆ ಟಿಕೆಟ್‌ ನೀಡಿದೆ, ಎಲ್ಲರೂ ಒಟ್ಟಾಗಿ ಕೆಲಸ ಮಾಡಿದಲ್ಲಿ ವಿರೋಧಿ ಗಳನ್ನು ಸೋಲಿಸಬಹುದಾಗಿದೆ ಎಂದರು.

ಮುಂದೆ ಸರ್ಕಾರ ಬಂದಾಗ ಪಕ್ಷಕ್ಕಾಗಿ ದುಡಿದವರಿಗೆ ಸೂಕ್ತ ಸ್ಥಾನಮಾನ ದೊರೆಯಲಿದೆ, ಎಲ್ಲರೂ ಕೋಪವನ್ನು ಬಿಡಿ, ನಗರ ಘಟಕದ ಅಧ್ಯಕ್ಷ ಕಮಲ್‌ ನಾಥನ್‌ ಮತ್ತು ಗ್ರಾಮಾಂತರ ಘಟಕ ಅಧ್ಯಕ್ಷ ಬುಜ್ಜಿ ನಾಯ್ಡು ಎಲ್ಲರೂ ಬನ್ನಿ ನಿಮ್ಮ ಸಲಹೆ ಸೂಚನೆಗಳು ನಮಗೆ ಅಗತ್ಯವಾಗಿದೆ ಎಂದರು.

ಬಿಜೆಪಿ ಅಭ್ಯರ್ಥಿ ಅಶ್ವಿ‌ನಿ ಸಂಪಂಗಿ, ಮಾಜಿ ಅಧ್ಯಕ್ಷ ವೆಂಕಟೇಶ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಶ್ರೀನಿವಾಸ್‌, ಜನಾರ್ಧನ್‌, ನವೀನ್‌, ನಗರ ಘಟಕದ ಮಾಜಿ ಅಧ್ಯಕ್ಷ ಕುಮಾರ್‌, ಮಹದೇವಪುರ ಚಲಪತಿ, ಗೋಪಾಲ್‌, ರಾಜಗೋಪಾಲ್‌, ಮುರುಗೇಶ್‌ ಮೊದಲಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next