ದಾವಣಗೆರೆ: ಹೊನ್ನಾಳಿ ಕ್ಷೇತ್ರದ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಕಾಂಗ್ರೆಸ್ ಸೇರುವುದಿಲ್ಲ. ಶನಿವಾರ ಭೇಟಿ ಸಂದರ್ಭದಲ್ಲಿ ಯಾವುದೇ ರಾಜಕೀಯದ ಚರ್ಚೆ ನಡೆದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಸ್ಪಷ್ಟಪಡಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇಣುಕಾಚಾರ್ಯ ಮತ್ತು ನಮ್ಮ ಭೇಟಿ ಸೌಹಾರ್ದ ಭೇಟಿ ಅಷ್ಟೇ. ರಾಜಕೀಯದ ಯಾವುದೇ ವಿಷಯ ಚರ್ಚೆಯಾಗಿಲ್ಲ. ಅಷ್ಟಾಗಿ ರೇಣುಕಾಚಾರ್ಯ ಕಾಂಗ್ರೆಸ್ ಸೇರುವುದೂ ಇಲ್ಲ. ಟೀ ಕುಡಿದು ಹೋದರು ಅಷ್ಟೇ ಎಂದರು.
ರೇಣುಕಾಚಾರ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರನ್ನ ಭೇಟಿ ಮಾಡಿದ ನಂತರ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ತಮ್ಮನ್ನು ಭೇಟಿ ಮಾಡಿದ್ದಾರೆ. ಶುಭ ಕೋರಲು ಬಂದಿದ್ದರು. ಕಾಂಗ್ರೆಸ್ ಸೇರ್ಪಡೆ ಕುರಿತಂತೆ ಯಾವುದೇ ವಿಷಯ ಚರ್ಚೆ ನಡೆದೇ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇದನ್ನೂ ಓದಿ:Karnataka Politics; ಧಾರವಾಡದ 2 ಮಾಜಿ ಶಾಸಕರು ಕಾಂಗ್ರೆಸ್ ಗೆ ಸೇರುತ್ತಾರೆ: ಸಚಿವ ಲಾಡ್
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪಕ್ಷ ಅನ್ಯಾಯ ಮಾಡಿತು. ತಾವೂ ಸಹ ಮುಂದಿನ ಲೋಕ ಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿ ಎಂಬುದನ್ನು ತಿಳಿಸಿದರು. ಅಷ್ಟಾಗಿ ರಾಜಕೀಯದ ಬಗ್ಗೆ ಇತರೆ ಯಾವುದೇ ಚರ್ಚೆ ನಡೆದಿಲ್ಲ ಎಂದು ತಿಳಿಸಿದರು.
ನನ್ನ ಮೊಬೈಲ್ ಸದಾ ಆನ್ ಇದ್ದೇ ಇರುತ್ತದೆ. ಯಾರೇ ಕರೆ ಮಾಡಿದರೂ ಸ್ವೀಕರಿಸುತ್ತೇನೆ. ಚನ್ನಗಿರಿ ಶಾಸಕ ಬಸವರಾಜ ಶಿವಗಂಗಾ ಅವರಿಂದ ಯಾವುದೇ ಕರೆ ಬಂದಿಲ್ಲ. ನನ್ನ ಹಾಗೂ ಬಸವರಾಜ್ ಶಿವಗಂಗಾ ನಡುವೆ ಯಾವುದೇ ರೀತಿಯ ವೈಮನಸ್ಸು ಇಲ್ಲವೇ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.