ಬೆಂಗಳೂರು: “ನೀವು ಜೆಡಿಎಸ್ ಗೆ ಹೋಗಿದ್ದಾಗ ಹಿಂದುತ್ವ ಎಲ್ಲಿ ಹೋಗಿತ್ತು ಸ್ವಾರ್ಥಕ್ಕಾಗಿ ನಿಮಗೆ ಹಿಂದುತ್ವ ಬೇಕಾ? ಜೆಡಿಎಸ್ ನಲ್ಲಿದ್ದಾಗ ಅಲ್ಪಸಂಖ್ಯಾತ ಓಲೈಕೆ ಮಾಡಿಲ್ಲವೇ: ಇದು ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ವಿಜಯಪುರ ಶಾಸಕ ಬಸನಗೌಡ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದ ರೀತಿ.
ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಯತ್ನಾಳ್ ನಡೆಸಿದ ಆರೋಪಗಳಿಗೆ ತಿರುಗೇಟು ನೀಡಿದ ರೇಣುಕಾಚಾರ್ಯ, ಯಡಿಯೂರಪ್ಪನವರ ಸಾಮರ್ಥ್ಯ, ನಾಯಕತ್ವ, ಹೋರಾಟ ದೊಡ್ಡದು. ನೂರಾರು ಪಾದಯಾತ್ರೆ, ಸಾವಿರಾರು ಹೋರಾಟ ಮಾಡಿದ್ದಾರೆ. ಅನೇಕ ಬಾರಿ ಜೈಲಿಗೆ ಹೋದವರು. ಯಾರೋ ಒಬ್ಬರು ಮಾತಾಡಿದರೆ ಗೌರವ ಕಡಿಮೆಯಾಗುವುದಿಲ್ಲ. ಬಿಜೆಪಿಗೆ ಯಡಿಯೂರಪ್ಪ ಬಗ್ಗೆ ಅಪಾರ ಗೌರವ ಇದೆ ಎಂದರು.
ಯಡಿಯೂರಪ್ಪ ಹೋರಾಟದ ಶ್ರಮದಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಇಬ್ಬರಿದ್ದಾಗ ಯಡಿಯೂರಪ್ಪ ಯೋಚಿಸಲಿಲ್ಲ. ಈಗ 120 ಸಂಖ್ಯೆ ತಲುಪಿದೆ. ರಾಷ್ಟ್ರೀಯ ನಾಯಕರಿಗೆ ಗೌರವಿಸಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಯಡಿಯೂರಪ್ಪ ಮೋಜು ಮಸ್ತಿಗಾಗಿ ಅಧಿಕಾರದಲ್ಲಿ ಇರಲಿಲ್ಲ. ಹೈಕಮಾಂಡ್ ಹಾಗೂ ಸಂಘ ಪರಿವಾರದವರು ಯಡಿಯೂರಪ್ಪ ಅವರನ್ನು ಶ್ಲಾಘಿಸಿದ್ದಾರೆ ಯಡಿಯೂರಪ್ಪ ಬಗ್ಗೆ ಮಾತನಾಡುವುದು ಎಷ್ಟು ಸೂಕ್ತ? ಯತ್ನಾಳ್ ಯಡಿಯೂರಪ್ಪನವರ ಕೈಕಾಲು ಹಿಡಿದು ಪಕ್ಷಕ್ಕೆ ಬಂದಿದ್ದಾರೆ ಎಂದು ಟೀಕಿಸಿದರು.
ಇದನ್ನೂ ಓದಿ:ಕೇಂದ್ರದ ನಾಯಕರಿಗೆ ಬೆದರಿಕೆ ಹಾಕಿ ಬಿಎಸ್ ವೈ ನನಗೆ ಸಿಎಂ ಹುದ್ದೆ ತಪ್ಪಿಸಿದ್ದಾರೆ: ಯತ್ನಾಳ್
ಸ್ವಾಮೀಜಿಗಳು ಯಡಿಯೂರಪ್ಪ ಪರ ಸಮಾವೇಶ ಮಾಡಿಲ್ಲ. ಅರಮನೆ ಮೈದಾನದಲ್ಲಿ ಸ್ವಾಮೀಜಿಗಳು ಹೇಳಿದ್ದಾರೆ. ಸ್ವಾಮೀಜಿಗಳು ಮನೆಗೆ ಬಂದಾಗ ಕಾಣಿಕೆ ನೀಡುವುದು ಸಂಸ್ಕೃತಿ. ಕಾಣಿಕೆಯಿಂದಲೇ ಸ್ವಾಮೀಜಿಗಳು ಶಾಲೆ ಕಾಲೇಜು ನಡೆಸುತ್ತಾರೆ. ಮಠಾಧೀಶರಿಗೆ ಮಾಡಿದ ಅವಮಾನವಿದು. ಇದಕ್ಕೆ ಬೇಷರತ್ ಕ್ಷಮೆ ಕೇಳಬೇಕು ಎಂದು ರೇಣುಕಾಚಾರ್ಯ ಆಗ್ರಹಿಸಿದರು.
ದೆಹಲಿಗೆ ಹೋಗುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ದೆಹಲಿಯಿಂದ ಬಂದು ಕ್ಷೇತ್ರಕ್ಕೆ ಹೋಗಿ, ಕೆಲಸ ನಿಮಿತ್ತ ಬೆಂಗಳೂರಿಗೆ ಬಂದಿದ್ದೇನೆ. 40 ಕೆರೆ ಒಡೆದಿತ್ತು, ಅದರ ರಿಪೇರಿ ಮಾಡಲು ಹೇಳಿದ್ದೆ. ಬೆಳೆಗಳು ಹಾಳಾಗಿರುವ ಬಗ್ಗೆ ಜಂಟಿ ಸಮೀಕ್ಷೆ ಮಾಡಿಸುತ್ತೇವೆ. ಕ್ಷೇತ್ರಕ್ಕೆ ತೆರಳಿ ಅಲ್ಲಿ ಪರಿಹಾರ ಕಾರ್ಯ ಮಾಡಲಾಗುವುದು. ಹೊನ್ನಾಳಿ ನ್ಯಾಮತಿ ಅವಳಿ ತಾಲ್ಲೂಕಿಗೆ ಅತಿವೃಷ್ಠಿ, ಅನಾವೃಷ್ಠಿ ಪರಿಹಾರ ಬಿಡುಗಡೆ ಮಾಡಲು ಮನವಿ ಮಾಡುತ್ತೇನೆ. ಹೊಸ ಮುಖ್ಯಮಂತ್ರಿ ಜೊತೆ ಕೂಡ ಮಾತನಾಡಿದ್ದೇನೆ ಎಂದರು.
ದೆಹಲಿಗೆ ಹೋದ ಮಾತ್ರಕ್ಕೆ ಮಂತ್ರಿ ಆಗುತ್ತಾರೆ ಎನ್ನುವುದು ಸುಳ್ಳು. ಯಾರ್ಯಾರಿಗೆ ಅದೃಷ್ಟ ಇದೆಯೋ ಅವರೆಲ್ಲ ಮಂತ್ರಿಯಾಗುತ್ತಾರೆ ಎಂದು ರೇಣುಕಾಚಾರ್ಯ ಹೇಳಿದರು.