ವಿಜಯಪುರ : ವಿಜಯಪುರ ಮೀಸಲು ಕ್ಷೇತ್ರದಿಂದ ನನ್ನ ಪರವಾಗಿ ಟಿಕೆಟ್‌ಗಾಗಿ ಕೇಂದ್ರಕ್ಕೆ ಪತ್ರ ಬರೆಯುವಂತೆ ನಾನೇನು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಹೇಳಿಲ್ಲ. ಅವರು ಪತ್ರ ಬರೆದಿರುವುದೂ ನನಗೆ ಗೊತ್ತಿಲ್ಲ. ನಾನೇ ಬೆಳೆಸಿದ ಕಾರಜೋಳ ನನಗೆ ಕಾಂಪೀಟೇಟರ್ ಕೂಡ ಅಲ್ಲ ಎಂದು ವಿಜಯಪುರ ಸಂಸದ ರಮೇಶ ಜುಗಜಿಣಗಿ ಪ್ರತಿಕ್ರಿಯಿಸಿದ್ದಾರೆ.
ಬುಧವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನನ್ನ ಪರವಾಗಿ ಕೇಂದ್ರಕ್ಕೆ ಪತ್ರ ಬರೆಯುವಂತೆ ನಾನೇನು ಅವರಿಗೆ ಹೇಳಿದ್ದೆನಾ ಎಂದು ಪ್ರಶ್ನಿಸಿದ ಜಿಗಜಿಣಗಿ, ನೀವೇನಾದ್ರೂ ಬರೆಯಲು ಹೇಳಿದ್ದೀರಾ. ತಾವೇ ಪತ್ರ ಬರೆದುಕೊಂಡು ಹೋದರೆ ನಾನೇನು ಮಾಡಲಿ ಎಂದು ಸಿಡುಕಿದರು.
ಅವರು ವಿಜಯಪುರ ಕ್ಷೇತ್ರದಿಂದ ಟಿಕೆಟ್ ಕೇಳಿರಬಹುದು. ನಾನೇ ಬೆಳೆಸಿದ ಮನುಷ್ಯ ನನಗೆ ಕಾಂಪೀಟೇಟರ್ ಆಗುತ್ತಾರಾ? ಹಣ ಇದ್ದ ಮಾತ್ರಕ್ಕೆ ಕಾಂಪೀಟೇಟರ್ ಆಗಿಬಿಡುತ್ತಾರಾ? ನಾನು ಬಡವ, ನಿಮ್ಮಂಥವರನ್ನು ಕಟ್ಟಿಕೊಂಡು ರಾಜಕಾರಣ ಮಾಡುವ ವ್ಯಕ್ತಿ ಎಂದು ಹರಿಹಾಯ್ದರು.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ದಲಿತ ಮುಖ್ಯಮಂತ್ರಿ ವಿಷಯ ಬೇಡ ಎಂದ ಜಿಗಜಿಣಗಿ, ಮುಂದಿನ ಯಾವುದೋ ಸಂದರ್ಭದಲ್ಲಿ ರಾಜ್ಯದಲ್ಲಿ ಇತಿಹಾಸ ನಿರ್ಮಾಣ ಮಾಡಿಸಿಯೇ ತೀರುತ್ತೇನೆ ಎಂದರು.
ಕಾರಜೋಳ ಬಿಜೆಪಿ ಟಿಕೆಟ್ ಕೇಳಿರುವ ವಿಷಯ ನನಗೆ ಗೊತ್ತಿಲ್ಲ, ಕೇಳಿರಬಹುದು. ನನ್ನ ಪರವಾಗಿ ತಾವಾಗಿಯೇ ಪತ್ರಬರೆದುಕೊಂಡು ಹೋದರೆ ನಾನೇನು ಮಾಡಲಿ ಎಂದರು.