Advertisement

ಪ್ರೊ.ಚಂಪಾ ವಿರುದ್ಧ ಸಂಸದ ಪ್ರತಾಪ್‌ ಸಿಂಹ ವಾಗ್ಧಾಳಿ

01:11 PM Nov 28, 2017 | |

ಮೈಸೂರು: ಸಮ್ಮೇಳನಾಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲ ಅವರು ಸಭ್ಯತೆಯ ಗೆರೆ ದಾಟಿ ಬಾಣ ಬಿಟ್ಟಿರಬಹುದು, ನಾವು ಅವರ ವಿರುದ್ಧ ಕಾಪೆಟ್‌ ಬಾಂಬಿಂಗ್‌ (ವ್ಯಾಪಕ ಖಂಡನೆ) ಮಾಡುತ್ತೇವೆ ಎಂದು ಸಂಸದ ಪ್ರತಾಪ್‌ ಸಿಂಹ, ಪ್ರೊ.ಚಂಪಾ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು.

Advertisement

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸಚಿವ ಅನಂತ ಕುಮಾರ್‌ ಸೆಕ್ಯುಲರ್‌ ಪದ ಕೇಳಿದರೆ ನಿದ್ದೆಯಲ್ಲಿ ಉಚ್ಚೆ ಉಯ್ದುಕೊಳ್ಳುತ್ತಾರೆ ಎಂಬ ಪದ ಬಳಕೆ ಮಾಡಿದ್ದಾರೆ. ಸೆಕ್ಯುಲರ್‌ ಅಂದ ಕೂಡಲೇ ಅನಂತಕುಮಾರ್‌ಗೆ ಉಚ್ಚೆ ಬರುತ್ತೋ ಇಲ್ಲವೋ, ನೀವು ಬಾಯಿ ಬಿಟ್ಟರೆ ಉಚ್ಚೆ ವಾಸನೆ ಬರುತ್ತದೆ.

ಸಾಹಿತ್ಯ ಸಮ್ಮೇಳನದ ವೇದಿಕೆಯನ್ನು ರಾಜಕಾರಣ ಮಾಡಲು ಬಳಸಿಕೊಂಡು ಅವರು ಮಾಡಿದ ಉದ್ಘಾಟನಾ ಮತ್ತು ಸಮಾರೋಪ ಭಾಷಣ ಗಬ್ಬೆದ್ದು ನಾರುತ್ತಿತ್ತು.  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಾಲಬಡುಕನಾಗಿ ಇಂದಿರಾ ಸೆಕ್ಯುಲರಿಸಂ ಬಗ್ಗೆ ಮಾತನಾಡುತ್ತಿದ್ದೀರಿ ಎಂದು ಜರಿದರು.

ಕೇಂದ್ರ ಸಚಿವ ಅನಂತಕುಮಾರ್‌ ಅವರ ಕನ್ನಡ ಪ್ರೇಮದ ಬಗ್ಗೆ ಯಾರಿಂದಲೂ ಸರ್ಟಿಫಿಕೇಟ್‌ ಬೇಕಿಲ್ಲ. ಕನ್ನಡದ ಅಭಿವೃದ್ಧಿ ಬಗ್ಗೆ ಸಮ್ಮೇಳನದ ವೇದಿಕೆಯಲ್ಲಿ ಸಾಕಷ್ಟು ವಿಷಯಗಳನ್ನು ಪ್ರಸ್ತಾಪ ಮಾಡಿ, ಕನ್ನಡದ ಕೆಲಸಕ್ಕಾಗಿ ಯಾವಾಗ ದೆಹಲಿಗೆ ಬಂದರೂ ಜತೆಗಿರುತ್ತೇನೆ ಎಂದು ವಾಗ್ಧಾನ ನೀಡಿದ್ದಾರೆ.

ಸಮ್ಮೇಳನಾಧ್ಯಕ್ಷರಾದವರಿಗೆ ಇದಕ್ಕಿಂತ ಖುಷಿಯಾದ ವಿಚಾರ ಇರಲಿಲ್ಲ. ಚಂಪಾ ಅವರ ಸ್ಥಾನದಲ್ಲಿ ಬೇರೆ ಯಾರೇ ಅಧ್ಯಕ್ಷರಾಗಿದ್ದರೂ ಅನಂತಕುಮಾರ್‌ರ ಬೆನ್ನು ತಟ್ಟುತ್ತಿದ್ದರು. ಆದರೆ, ಚಂಪಾ ಅವರು ಅನಂತ್‌ಕುಮಾರ್‌ರ ಬೆನ್ನಿಗೆ ಕಲ್ಲು ಬಿಸಾಡುವ ಕೆಲಸ ಮಾಡಿದರು. ನಿಮ್ಮ ಕಳಪೆ ವ್ಯಾಖ್ಯಾನ ಕೇಳಿ ಕಲಿಯಬೇಕಾದ ಬೌದ್ಧಿಕ ದಾರಿದ್ರ್ಯ ನಮಗಿಲ್ಲ ಎಂದು ಟೀಕಿಸಿದರು.

Advertisement

ಸಮ್ಮೇಳನಾಧ್ಯಕ್ಷರಾಗಿ ಭುವನೇಶ್ವರಿಗೆ ಪೂಜೆ ಮಾಡಲು ನಿರಾಕರಿಸಿದರು. ಮೈಸೂರು ಪೇಟ ಧರಿಸಲು ನಿರಾಕರಿಸುವ ಮೂಲಕ ಮೈಸೂರಿಗೇ ಅಪಮಾನ ಮಾಡಿ ಹೋಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್‌ ಹುಟ್ಟುಹಾಕಿದ ನಾಲ್ವಡಿ ಕೃಷ್ಣರಾಜ ಒಡೆಯರ್‌ರ ವಂಶಸ್ಥರಿಗೆ ಸಮ್ಮೇಳನಕ್ಕೆ ಆಹ್ವಾನ ಕೊಡಲಿಲ್ಲ. ಕನ್ನಡಕ್ಕೆ ಸರಸ್ವತಿ ಸಮ್ಮಾನ್‌ ತಂದಿರುವ, ಅಪಾರ ಓದುಗ ಅಭಿಮಾನಿಗಳನ್ನು ಹೊಂದಿರುವ ಎಸ್‌.ಎಲ್‌.ಭೈರಪ್ಪ ಅವರನ್ನೂ ಕರೆಯಲಿಲ್ಲ ಎಂದು ದೂರಿದರು. 

ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್‌ ಹತ್ಯೆ ತನಿಖೆ ಏನಾಯ್ತು ಎಂದು ವೇದಿಕೆಯಲ್ಲೇ ಮುಖ್ಯಮಂತ್ರಿಯವರನ್ನು ಕೇಳುವ ಕೆಲಸ ಮಾಡಲಿಲ್ಲ. ಮೈಸೂರಿನಲ್ಲಿರುವ ಶಾಸ್ತ್ರೀಯ ಸ್ಥಾನಮಾನದ ಕೇಂದ್ರದ ಸ್ಥಳಾಂತರ ಬಗ್ಗೆ ಮಾತನಾಡದೆ ಇರುವ ನಿಮ್ಮನ್ನು ರಾಜ್ಯದ ಜನತೆ ಕ್ಷಮಿಸಲ್ಲ. ನಮಗೆ ಸೆಕ್ಯುಲರ್‌ ಪಾಠ ಹೇಳಲು ಬರಬೇಡಿ, ನಿಮ್ಮ ವಯಸ್ಸಿಗೆ ತಕ್ಕಹಾಗೆ ಮಾತನಾಡುವ ಪ್ರಬುದ್ಧತೆ ತೋರಿ ಎಂದರು. 

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಟಿಪ್ಪು ಸುಲ್ತಾನ್‌ ಬಗ್ಗೆ ಮಾತನಾಡುವುದು ಕನ್ನಡಕ್ಕೆ ಮಾಡಿದ ಅಪಮಾನ, ಮೈಕ್‌ ಸಿಕ್ಕ ಕೂಡಲೇ ಬಾಯಿಗೆ ಬಂದಂತೆ ಮಾತನಾಡುವುದಲ್ಲ. ನನ್ನನ್ನು ಬಸವನ ಹಿಂದಿನ ಬಾಲ ಎಂದು ಕರೆದಿದ್ದೀರಿ, ಒಬ್ಬರು ಕೇಂದ್ರ ಸಚಿವರು ಬಂದಾಗ ಸ್ಥಳೀಯ ಸಂಸದನಾಗಿ ಅವರೊಂದಿಗೆ ಇರಬೇಕಾದ್ದು ಶಿಷ್ಟಾಚಾರ. ಅದನ್ನು ಪಾಲಿಸಿದ್ದೇನೆ. ಸಾಹಿತ್ಯ ಬರವಣಿಗೆ ನಿಮ್ಮೊಬ್ಬರಿಗೇ ಸಿದ್ಧಿಸಿಲ್ಲ. ನಾನೂ 22 ಪುಸ್ತಕ ಬರೆದಿದ್ದೇನೆ.
-ಪ್ರತಾಪಸಿಂಹ, ಸಂಸದ

Advertisement

Udayavani is now on Telegram. Click here to join our channel and stay updated with the latest news.

Next