ಪಿರಿಯಾಪಟ್ಟಣ: ನರೇಗಾ ಯೋಜನೆಯನ್ನು ಯುಪಿಎ ಸರ್ಕಾರವೇ ಜಾರಿಗೆ ತಂದರೂ ಅದನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ವಿಫಲವಾಗಿ ಅದರಲ್ಲಿದ್ದ ಅನುದಾನವನ್ನು ಲೋಟಿ ಮಾಡಿದ ಪರಿಣಾಮ ಗ್ರಾಮಗಳು ಸಮರ್ಪಕವಾಗಿ ಅಭಿವೃದ್ದಿಯಾಗಲು ಸಧ್ಯವಾಗಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಆರೋಪಿಸಿದರು.
ತಾಲ್ಲೂಕಿನ ಪುನಾಡಹಳ್ಳಿ ಗ್ರಾಮದಲ್ಲಿ ಭಾರತ್ ನಿರ್ಮಾಣ್ ಸೇವಾ ಕೇಂದ್ರಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಗ್ರಾಪಂಗಳಿಗೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ 14 ನೇ ಹಣಕಾಸು ಯೋಜನೆಯಡಿ ಹೆಚ್ಚಿನ ಅನುದಾನ ಬಿಡುಗಡೆಗೊಂಡ ನಂತರ ಗ್ರಾಮ ಪಂಚಾಯಿತಿಗಳ ಸ್ವರೂಪವೇ ಬದಲಾಗಿದೆ. ಹಿಂದೆ 2006 ರಲ್ಲಿ ನರೇಗಾ ಯೋಜನೆಯನ್ನು ಯುಪಿಎ ಸರ್ಕಾರವೇ ಜಾರಿಗೊಳಿಸಿತ್ತು ಆದರೆ ಅದಕ್ಕೆ ಬಿಡುಗಡೆಯಾದ ಅನುದಾನವನ್ನು ಮಾತ್ರ ಲೂಟಿ ಮಾಡಲಾಯಿತೇ ವಿನಃ ಯಾವುದೇ ಅಭಿವೃದ್ದಿ ಕೆಲಸಗಳು ಮಾತ್ರ ನಡೆಯಲಿಲ್ಲ. ಕೇಂದ್ರದಲ್ಲಿ ಮೋದಿ ಬಂದ ನಂತರ ಗ್ರಾಪಂಗಳಿಗೆ ಹೆಚ್ಚಿನ ಅನುದಾನ ಬಿಡುಗಡೆಯಾಗಿ ದೇಶದ ಎಲ್ಲ ಗ್ರಾಮಗಳು ಅಭಿವೃದ್ದಿ ಹೊಂದುತ್ತಿವೆ. ಇದಕ್ಕೆ ಗ್ರಾಪಂ ಸದಸ್ಯರು ಹೆಚ್ಚಿನ ಕಾಳಜಿಯನ್ನು ವಹಿಸಿದಲ್ಲಿ ಗ್ರಾಮಗಳ ಅಭಿವೃದ್ದಿ ಮತ್ತಷ್ಟು ಸಾಧ್ಯ, ಅದನ್ನು ಬಿಟ್ಟು ವಿನಃ ಕಾರಣ ಆರೋಪದಲ್ಲಿ ಮುಳುಗಿದರೆ ಗ್ರಾಮಗಳ ಅಭಿವೃದ್ದಿ ಕುಂಠಿತಗೊಂಡು ಸಾರ್ವಜನಿಕರಿಂದ ಛೀಮಾರಿ ಹಾಕಿಸಿಕೊಳ್ಳಬೇಕಾಗುತ್ತದೆ. ನಾನು ಸಂಸದನಾಗಿ ಆಯ್ಕೆಯಾದ ನಂತರ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ 31 ನೂತನ ರಾಜೀವ್ ಗಾಂಧಿ ಸೇವಾ ಕೇಂದ್ರಗಳನ್ನು ನಿರ್ಮಿಸಲಾಗಿದ್ದು, ಮೋದಿ ಪ್ರಧಾನಿಯಾದ ನಂತರ 14 ನೇ ಹಣಕಾಸು ಆಯೋಗದ ಯೋಜನೆಯಡಿ ನೇರವಾಗಿ ಗ್ರಾಮ ಪಂಚಾಯಿತಿಗಳಿಗೆ ಅನುದಾನವನ್ನು ನೀಡಲಾಗುತ್ತಿದೆ ಎಂದರು.
ಶಾಸಕ ಕೆ.ಮಹದೇವ್ ಮಾತನಾಡಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಅನುದಾನದಿಂದ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿರುವ ರಸ್ತೆಗಳ ನಿರ್ಮಾಣಕ್ಕೆ ಸದಸ್ಯರು ಹೆಚ್ಚು ಒತ್ತು ನೀಡಿದರೆ ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಚಂದ್ರಮೌಳಿ, ತಾಪಂ ಇಒ ಕೃಷ್ಣಕುಮಾರ್, ಗ್ರಾಪಂ ಅಧ್ಯಕ್ಷೆ ಪ್ರಭಾವತಿ, ಉಪಾಧ್ಯಕ್ಷ ರವಿ, ಪಿಡಿಒ ಪರಮೇಶ್, ಸದಸ್ಯರಾದ ಯೋಗಾನಂದ, ಜಯಂತಿ, ಮಂಜುಳ ಲತಾ, ಸಿದ್ದೇಗೌಡ, ಶಿವ, ನಂಜುಂಡ ಸೇರಿದಂತೆ ಮತ್ತಿತರರು ಹಾಜರಿದ್ದರು.