Advertisement

ಅಧಿಕಾರಿಗಳ ವಿರುದ್ಧ ಸಂಸದ ಪ್ರಜ್ವಲ್‌ ರೇವಣ್ಣ ಆಕ್ರೋಶ

09:48 PM Jan 20, 2020 | Lakshmi GovindaRaj |

ಹಾಸನ: ಸಮರ್ಪಕ ಮಾಹಿತಿ ನೀಡದ ಹಾಗೂ ಸಭೆಗೆ ಗೈರು ಹಾಜರಾದ ರೈಲ್ವೆ ಹಾಗೂ ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಅಧಿಕಾರಿಗಳನ್ನು ಸಂಸದ ಪ್ರಜ್ವಲ್‌ ರೇವಣ್ಣ ಅವರು ಪ್ರಗತಿ ಪರಿಶೀಲನಾ ಸಭೆಯಲ್ಲಿ ತಿವ್ರವಾಗಿ ತರಾಟೆಗೆ ತೆಗೆದುಕೊಂಡರು.

Advertisement

ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಸೋಮವಾರ ನಡೆದ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನೆಯ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ಸಮರ್ಪಕ ಮಾಹಿತಿ ನೀಡದ ವಿವಿಧ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಗೈರು ಹಾಜರಾದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್‌ ನೀಡುವಂತೆಯೂ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಅವರಿಗೆ ಸೂಚನೆ ನೀಡಿದರು.

ಶಾಸಕ ಶಿವಲಿಂಗೇಗೌಡ ಅಸಮಾಧಾನ: ಸಭೆಯ ಪ್ರಾರಂಭದಲ್ಲಿಯೇ ರೈಲ್ವೆ ಅಭಿವೃದ್ಧಿ ವಿಷಯ ಪ್ರಸ್ತಾಪಿಸಿದ ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು, ಅರಸೀಕೆರೆ ರೈಲ್ವೆ ನಿಲ್ದಾಣಕ್ಕೆ ಮೈಸೂರು ವಿಭಾಗೀಯ ಅಧಿಕಾರಿ ಅಪರ್ಣ ಗರ್ಗ್‌ ಭೇಟಿ ನೀಡಿದ ವೇಳೆ ಅಸಭ್ಯವಾಗಿ ವರ್ತಿಸಿದ್ದೇನೆ ಎಂದು ಆರೋಪ ಮಾಡಿದ್ದಾರೆ. ಶಾಸಕರ ಜತೆ ಬಂದವರು ದುಂಡಾವರ್ತನೆ ತೋರಿದ್ದಾರೆ ಎಂದೂ ಹೇಳಿದ್ದಾರೆ.

ಅವರ ಜೊತೆ ಯಾರು ಆ ರೀತಿ ನಡೆದುಕೊಂಡಿದ್ದಾರೆ ಗೊತ್ತಿಲ್ಲ. ಅವರ ಇಂಗ್ಲಿಷ್‌ ನಮಗೆ ಅರ್ಥವಾಗಲ್ಲ, ನಮ್ಮ ಕನ್ನಡ ಅವರಿಗೆ ಅರ್ಥವಾಗಲ್ಲ. ರಾಜ್ಯ ಸರ್ಕಾರಕ್ಕೂ ತಮಗೂ ಸಂಬಂಧ ಇಲ್ಲವೆಂಬಂತೆ ರೈಲ್ವೆ ಇಲಾಖೆ ಅಧಿಕಾರಿಗಳು ವರ್ತಿಸುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ನನ್ನ ತೇಜೋವಧೆ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈಲ್ವೆ ನಿರ್ಮಾಣ ವಿಭಾಗದ ಅಧಿಕಾರಿ ಸಭೆಗೆ ಮಾಹಿತಿ ನೀಡಲು ತಡವರಿಸಿದರು. ಭಾಷೆ ಸಮಸ್ಯೆಯಿಂದ ಇಂಗ್ಲಿಷ್‌ನಲ್ಲಿ ನೀಡಿದ ವಿವರ ಶಾಸಕರಿಗೆ ಅರ್ಥವಾಗಲಿಲ್ಲ. ಬಳಿಕ ಸಂಸದ ಪ್ರಜ್ವಲ್‌ ರೇವಣ್ಣ ಅವರು ಹೇಳಿಕೆಯನ್ನು ಕನ್ನಡದಲ್ಲಿ ವಿವರಿಸಿದರು.

Advertisement

ಅರಸೀಕೆರೆ ರೈಲು ನಿಲ್ದಾಣ ಪರಿಶೀಲನೆಗೆ ಹಿರಿಯ ಅಧಿಕಾರಿ ಭೇಟಿ ನೀಡುವ ವಿಷಯವನ್ನು ಸಂಸದ ಹಾಗೂ ಜಿಲ್ಲಾಧಿಕಾರಿಗೆ ಏಕೆ ತಿಳಿಸಲಿಲ್ಲ? ಮಾಹಿತಿ ನೀಡಿದ್ದರೆ ಭೇಟಿ ನೀಡುತ್ತಿದ್ದೆ. ಅಧಿಕಾರಿಗಳು ಜವಾಬ್ದಾರಿಯಿಂದ ವರ್ತಿಸುತ್ತಿಲ್ಲ. ಈ ಬಗ್ಗೆ ಮೈಸೂರು ಮತ್ತು ಬೆಂಗಳೂರು ವಿಭಾಗದ ಹಿರಿಯ ಅಧಿಕಾರಿಗೆ ಪತ್ರ ಬರೆಯುವೆ ಎಂದು ಪ್ರಜ್ವಲ್‌ ಆಕ್ರೋಶ ವ್ಯಕ್ತಪಡಿಸಿದರು.

ರೈಲ್ವೆ ಕಾಮಗಾರಿ ಮಹಿತಿಯಿಲ್ಲ: ಶಾಸಕ ಎಚ್‌.ಡಿ.ರೇವಣ್ಣ ಮಾತನಾಡಿ, 36 ಕೋಟಿ ರೂ. ಯೋಜನೆ ವೆಚ್ಚದ ಹಾಸನ ಬೇಲೂರು ಹಾಗೂ ಬೇಲೂರು -ಚಿಕ್ಕಮಗಳೂರು ರೈಲ್ವೆ ಮಾರ್ಗಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಆದರೆ ಕಾಮಗಾರಿ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಆಲೂರಿನಲ್ಲಿ ರೈಲು ನಿಲುಗಡೆ ಮಾಡಿ: ಆಲೂರು ತಾಲೂಕು ಕೇಂದ್ರದಲ್ಲಿ ರೈಲು ನಿಲ್ದಾಣವಿದ್ದರೂ ಸಿಬ್ಬಂದಿ ಇಲ್ಲ. ರೈಲುಗಳ ನಿಲುಗಡೆಯೂ ಇಲ್ಲ. ಹಾಗಾಗಿ ಅಲ್ಲಿ ನಿಲ್ದಾಣದ ಏಕೆ ಬೇಕು ಈ ಬಗ್ಗೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಬೇಕು ಎಂದು ಆಲೂರು – ಸಕಲೇಶಪುರ ಕ್ಷೇತ್ರದ ಶಾಸಕ ಎಚ್‌.ಕೆ.ಕುಮಾರಸ್ವಾಮಿ ಪಟ್ಟು ಹಿಡಿದರು. ಈ ಎಲ್ಲ ಸಮಸ್ಯೆಗಳ ಬಗ್ಗೆ ವಿಭಾಗೀಯ ಅಧಿಕಾರಿ ಜತೆ ಸಮಾಲೋಚನೆ ನಡೆಸಿ ಸಮಸ್ಯೆ ಪರಿಹರಿಸಲು ಪ್ರಯತ್ನಿಸಲಾಗುವುದು ಎಂದು ಪ್ರಜ್ವಲ್‌ ರೇವಣ್ಣ ಅವರು ಭರವಸೆ ನೀಡಿ ಚರ್ಚೆಗೆ ತೆರೆ ಎಳೆದರು.

ಬಿಎಸ್‌ಎನ್‌ಎಲ್‌ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಎ.ಟಿ.ರಾಮಸ್ವಾಮಿ ಮತ್ತು ಕೆ.ಎಂ.ಶಿವಲಿಂಗೇಗೌಡ ಅವರು ಅಧಿಕಾರಿಗಳ ಅದಕ್ಷತೆ, ಅಪ್ರಮಾಣಿಕತೆಯಿಂದ ಸಂಸ್ಥೆ ಸುಧಾರಣೆ ಕಾಣದೇ ಮುಚ್ಚುವ ಹಂತ ತಲುಪಿದೆ. ದೂರವಾಣಿ ಸಂಪರ್ಕ ಸಿಗದೇ ಸಾರ್ವಜನಿಕರು ಪರದಾಡುತ್ತಿದ್ದಾರೆ ಎಂದು ಕಿಡಿ ಕಾರಿದರು. ಜಿಲ್ಲೆಯಲ್ಲಿ ಅಗತ್ಯರುವ ಕಡೆ ಟವರ್‌ ಅಳವಡಿಸಬೇಕು.

ಪ್ರಧಾನಿ ನರೇಂದ್ರ ಮೋದಿ ಅವರು ನಗದು ರಹಿತ ವ್ಯವಸ್ಥೆ, ಡಿಜಟಲೀಕರಣ ಮಾಡುತ್ತಿರುವಾಗ ಸಂಪರ್ಕ ಇಲ್ಲದಿದ್ದರೆ ಏನು ಮಾಡಲು ಸಾಧ್ಯವಿಲ್ಲ. ಸಮಸ್ಯೆ ಪರಿಹರಿಸುವಂತೆ ಬಿಎಸ್‌ಎನ್‌ಎಲ್‌ ಅಧಿಕಾರಿಗೆ ಸಂಸದ ಪ್ರಜ್ವಲ್‌ ಅವರು ಸೂಚಿಸಿದರು. ಸಭೆಯಲ್ಲಿ ಶಾಸಕರಾದ ಕೆ.ಎಸ್‌.ಲಿಂಗೇಶ್‌, ಸಿ.ಎನ್‌.ಬಾಲಕೃಷ್ಣ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ.ಪರಮೇಶ್‌, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎನ್‌.ನಂದಿನಿ ಉಪಸ್ಥಿತರಿದ್ದರು.

ಎನ್‌ಎಚ್‌ಎಐ ಯೋಜನಾ ನಿರ್ದೇಶಕರ ಗೈರು – ತರಾಟೆ: ರಾಷ್ಟ್ರೀಯ ಹೆದ್ದಾರಿ – 75ರ ದೇವರಾಯಪಟ್ಟಣದಿಂದ ಮಾರನಹಳ್ಳಿವರೆಗೆ ಹೆದ್ದಾರಿ ದುರಸ್ತಿ ಕಾಮಗಾರಿ 8 ಕಿ.ಮೀ.ವರೆಗೂ ನಡೆದಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಿರಿಯ ಎಂಜಿನಿಯರ್‌ ಅಜಿತ್‌ ಅವರು ಸಭೆ ಗಮನಕ್ಕೆ ತಂದರು. ಮಧ್ಯೆ ಪ್ರವೇಶಿಸಿದ ಪ್ರಜ್ವಲ್‌ರೇವಣ್ಣ ಅವರು ಎನ್‌ಎಚ್‌ಎಐ ಯೋಜನಾ ನಿರ್ದೇಶಕರು ಸಭೆಗೆ ಏಕೆ ಬಂದಿಲ್ಲ.

ಮೂರು ಬಾರಿ ಪತ್ರ ಬರೆಯಲಾಗಿದೆ. ದಿಶಾ ಸಭೆ ನಿತ್ಯ ನಡೆಯುವುದಿಲ್ಲ. ಮೂರು ತಿಂಗಳಿಗೊಮ್ಮೆ ನಡೆಯುವ ಸಭೆಗೆ ಬರುವುದಿಲ್ಲ ಎಂದರೆ ಏನರ್ಥ ಎಂದು ಆಕ್ರೋಶ ವ್ಯಕ್ತಪಡಿಸಿದರು. ಶಾಸಕ ರೇವಣ್ಣ ಅವರು ಸಂಸದರಿಗೆ ದನಿಗೂಡಿಸಿ ಒಂದು ತಿಂಗಳ ಮುಂಚಿತವಾಗಿ ಸಭೆ ನಡೆಯುವ ಬಗ್ಗೆ ಅಧಿಕಾರಿಗಳಿಗೆ ಪತ್ರ ಕಳುಹಿಸಲಾಗಿದೆ. ಆದರೂ ಅಧಿಕಾರಿಗಳು ಗೈರು ಹಾಜರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next