Advertisement

ಆರೋಗ್ಯ, ಪೊಲೀಸ್‌ ಇಲಾಖೆ ಕಾರ್ಯಕ್ಕೆ ಸಂಸದ ನಳಿನ್‌ ಶ್ಲಾಘನೆ

01:31 AM Apr 14, 2020 | Sriram |

ಉಳ್ಳಾಲ : ದಕ್ಷಿಣ ಕನ್ನಡ ಜಿಲ್ಲೆಗೆ ತಾಗಿಕೊಂಡಿರುವ ರಾಜ್ಯದ ಇತರ ಜಿಲ್ಲೆಗಳ ಹಾಗೂ ಕೇರಳ ರಾಜ್ಯದ ಗಡಿಗಳನ್ನು ಬಂದ್‌ ಮಾಡಿದ್ದರಿಂದ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ನಿಯಂತ್ರಣದಲ್ಲಿಡಲು ಸಾಧ್ಯವಾಗಿದೆ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಹೇಳಿದ್ದಾರೆ.

Advertisement

ಕಾಸರಗೋಡು-ಮಂಗಳೂರು ನಡುವಿನ ಅಂತಾರಾಜ್ಯ ಗಡಿ ಪ್ರದೇಶವಾದ ತಲಪಾಡಿಯಲ್ಲಿ ಪೊಲೀಸ್‌ ಬಂದೋಬಸ್ತ್ ಮತ್ತು ಕಾಸರಗೋಡಿನಿಂದ ಆಗಮಿಸುವ ರೋಗಿಗಳನ್ನು ತಪಾಸಣೆ ಮಾಡುವ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಅವರು, ಕೇರಳದಿಂದ ಬರುವ ರೋಗಿಗಳಿಗೆ ಸುಪ್ರೀಂ ಕೋರ್ಟ್‌ ಆದೇಶದಂತೆ ಜಿಲ್ಲಾಡಳಿತ ನೀಡಿರುವ ಷರತ್ತಿನಂತೆ ಒಂದು ಆಸ್ಪತ್ರೆಯಲ್ಲಿ ಮಾತ್ರ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ತಲಪಾಡಿಯಲ್ಲಿ ಪೊಲೀಸ್‌ ಹಾಗೂ ಆರೋಗ್ಯ ಇಲಾಖೆ ಶ್ಲಾಘನೀಯ ಸೇವೆ ಸಲ್ಲಿಸುತ್ತಿವೆ ಎಂದರು.

ಶೂನ್ಯಕ್ಕಿಳಿಸಲು ಪ್ರಯತ್ನ
ಕಾಸರಗೋಡಿನಲ್ಲಿ ಕೋವಿಡ್ 19 ಬಾಧಿತರ ಸಂಖ್ಯೆ ಜಾಸ್ತಿಯಿದ್ದು, ಕೇರಳ ರಾಜ್ಯವನ್ನು ಸಂಪರ್ಕಿಸುವ 21 ಗಡಿ ಪ್ರದೇಶಗಳನ್ನು ಬಂದ್‌ ಮಾಡಲಾಗಿದೆ. ಇಂತಹ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರಿಂದ ದ.ಕ. ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ನಿಯಂತ್ರಣದಲ್ಲಿದೆ. 12 ಸೋಂಕಿತರ ಪೈಕಿ 7 ಮಂದಿ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯನ್ನು ಶೂನ್ಯಕ್ಕಿಳಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಪೊಲೀಸ್‌ ಹಾಗೂ ಆರೋಗ್ಯ ಇಲಾಖೆಗಳು ಕಾರ್ಯಪ್ರವೃತ್ತವಾಗಿವೆ. ಒಂದು ವಾರದಿಂದ ಯಾವುದೇ ಪಾಸಿಟಿವ್‌ ಪ್ರಕರಣ ಪತ್ತೆಯಾಗಿಲ್ಲ ಎಂದರು.

ಕಾಸರಗೋಡಿಗೆ ಅಗತ್ಯ ವಸ್ತು ಮತ್ತು ತುರ್ತು ಸೇವೆಯ ವಾಹನಗಳಿಗೆ ಅವಕಾಶ ನೀಡಿದ್ದು, ತುರ್ತು ಅಗತ್ಯವಿರುವ ಕೋವಿಡ್ 19 ಹೊರತುಪಡಿಸಿದ ರೋಗಿಗಳಿಗೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದರು.

ಮಂಗಳೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಅಧ್ಯಕ್ಷ ಚಂದ್ರಹಾಸ ಪಂಡಿತ್‌ ಹೌಸ್‌, ಮಾಜಿ ಅಧ್ಯಕ್ಷ ಸಂತೋಷ್‌ ಕುಮಾರ್‌ ರೈ ಬೋಳಿಯಾರ್‌, ಜಿ.ಪಂ. ಸದಸ್ಯೆ ಧನಲಕ್ಷ್ಮೀ ಗಟ್ಟಿ, ತಲಪಾಡಿ ಗ್ರಾ.ಪಂ. ಅಧ್ಯಕ್ಷ ಸುರೇಶ್‌ ಆಳ್ವ ಸಾಂತ್ಯಗುತ್ತು, ಕ್ಷೇತ್ರ ಪ್ರ. ಕಾರ್ಯದರ್ಶಿ ಹೇಮಂತ್‌ ಶೆಟ್ಟಿ ದೇರಳಕಟ್ಟೆ, ಕೋಶಾಧಿಕಾರಿ ಜಿತೇಂದ್ರ ಶೆಟ್ಟಿ ತಲಪಾಡಿ, ಕಾರ್ಯದರ್ಶಿ ನವೀನ್‌ ಶೆಟ್ಟಿ ಕುರ್ನಾಡು ಉಪಸ್ಥಿತರಿದ್ದರು.

Advertisement

ದುರ್ಬಳಕೆ ಮಾಡಿದರೆ ಕ್ರಮ: ಕೋಟ
ಕಾಸರಗೋಡಿನಿಂದ ಮಂಗಳೂರಿಗೆ ತುರ್ತು ಚಿಕಿತ್ಸೆಗೆ ಆಗಮಿಸುವ ರೋಗಿಗಳಿಗೆ ಸುಪ್ರಿಂ ಕೋರ್ಟ್‌ನ ಆದೇಶದಂತೆ ಜಿಲ್ಲಾಡಳಿತ ಷರತ್ತಿನ ಮೇಲೆ ಮಂಗಳೂರಿನಲ್ಲಿ ಚಿಕಿತ್ಸೆಗೆ ಅವಕಾಶ ನೀಡಿದೆ. ಈ ಅವಕಾಶವನ್ನು ದುರುಪಯೋಗ ಪಡಿಸುವ ಪ್ರಯತ್ನ ನಡೆದರೆ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ತಲಪಾಡಿಯಲ್ಲಿ ಕೇರಳದಿಂದ ಆಗಮಿಸುವ ರೋಗಿಗಳನ್ನು ಆರೋಗ್ಯ ಇಲಾಖೆಯ ತಂಡ ಪರೀಕ್ಷೆ ಮಾಡಿ ಆಸ್ಪತ್ರೆಗೆ ಕಳುಹಿಸುತ್ತಿದೆ. ಕೆಲವು ರೋಗಿಗಳ ಕಡೆಯವರು ಆಸ್ಪತ್ರೆಯಲ್ಲಿ ಅನುಚಿತವಾಗಿ ವರ್ತಿಸಿರುವ ಕುರಿತು ದೂರುಗಳು ಬಂದಿವೆ.ಪೊಲೀಸರು ತನಿಖೆ ನಡೆಸಿ, ಕಠಿನ ಕ್ರಮ ಕೈಗೊಳ್ಳಲಿದ್ದಾರೆ. ಜಿಲ್ಲೆಯಲ್ಲಿ ಗಡಿಪ್ರದೇಶಗಳನ್ನು ಕಟ್ಟು ನಿಟ್ಟಾಗಿ ನಿರ್ವಹಿಸಿದರಿಂದ ಕೋವಿಡ್ 19 ಸೋಂಕನ್ನು ತಡೆಯಲು ಸಾಧ್ಯವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next