ಶಿವ್ ಪುರಿ(ಮಧ್ಯಪ್ರದೇಶ): ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ…ಇದು ಯಾವುದೇ ಸಂಘಟನೆಯ ಮುಖಂಡರು ಹೇಳಿದ ಆಕ್ರೋಶದ ಮಾತಲ್ಲ, ಖುದ್ದು ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕಿಯೊಬ್ಬರು ತಮ್ಮ ಬೆಂಬಲಿಗರಿಗೆ ಬೆಂಕಿ ಹಚ್ಚಿ ಎಂದು ಹೇಳುತ್ತಿರುವ ವಿಡಿಯೋವನ್ನು ದೆಹಲಿ ಬಿಜೆಪಿ ವಕ್ತಾರ ತೇಜಿಂದರ್ ಪಾಲ್ ಸಿಂಗ್ ಬಗ್ಗಾ ಅವರು ಶುಕ್ರವಾರ ಪೋಸ್ಟ್ ಮಾಡುವ ಮೂಲಕ ಕಾಂಗ್ರೆಸ್ ಬಣ್ಣ ಬಯಲು ಮಾಡಿದ್ದಾರೆ.
ಮಧ್ಯಪ್ರದೇಶದ ಶಿವ್ ಪುರಿ ಜಿಲ್ಲೆಯ ಕರೇರಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಶಕುಂತಲಾ ಖಾಟಿಕ್ ಈಗ ತೀವ್ರ ವಿವಾದಕ್ಕೆ ಸಿಲುಕಿದ್ದಾರೆ. ವಿಡಿಯೋದಲ್ಲಿ, ತಮ್ಮ ಬೆಂಬಲಿಗರೊಂದಿಗೆ ಸುತ್ತುವರಿಯಲ್ಪಟ್ಟಿದ್ದ ಶಾಸಕಿ, ಸ್ಥಳೀಯ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ ಎಂದು ಘೋಷಣೆ ಕೂಗುತ್ತಿರುವುದು ದಾಖಲಾಗಿದೆ.
ಪ್ರತಿಭಟನೆ ನಡೆಸುತ್ತಿದ್ದ ಮಂದಸೌರ್ ರೈತರ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿ ಹತ್ಯೆಗೈದಿರುವುದನ್ನು ಖಂಡಿಸಿ ಕಾಂಗ್ರೆಸ್ ಶಾಸಕಿ ಶಕುಂತಲಾ ತಮ್ಮ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿ ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರ ಪ್ರತಿಕೃತಿಯನ್ನು ದಹಿಸಿದರು. ಏತನ್ಮಧ್ಯೆ ಮಾರ್ಗಮಧ್ಯೆ ಶಾಸಕಿಯನ್ನು ಪೊಲೀಸರು ತಡೆದಾಗ ಆಕ್ರೋಶಗೊಂಡ ಶಾಸಕಿ ಶಕುಂತಲಾ ಅವರು ತಮ್ಮ ಬೆಂಬಲಿಗರ ಬಳಿ ಠಾಣೆಗೆ ಬೆಂಕಿ ಹಚ್ಚುವಂತೆ ಪ್ರಚೋದನೆ ನೀಡಿರುವುದಾಗಿ ವರದಿ ತಿಳಿಸಿದೆ.
ಠಾಣೆಗೆ ಬೆಂಕಿ ಹಚ್ಚಿ ಎಂದು ಕೂಗುತ್ತಿರುವ ಕಾಂಗ್ರೆಸ್ ಶಾಸಕಿಯ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವಂತೆಯೇ ಎಚ್ಚೆತ್ತುಕೊಂಡಿದ್ದು, ನಾನು ಆ ರೀತಿ ಪ್ರಚೋದನೆ ನೀಡಿಲ್ಲ. ಪೊಲೀಸರು ತನ್ನ ಜೊತೆ ಅನುಚಿತವಾಗಿ ವರ್ತಿಸಿರುವುದಾಗಿ ಆರೋಪಿಸಿ ಸಮಜಾಯಿಷಿ ನೀಡಿದ್ದಾರೆ. ಏತನ್ಮಧ್ಯೆ ರಾಜ್ಯದಲ್ಲಿ ಕಾಂಗ್ರೆಸ್ ಕೀಳುಮಟ್ಟದ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ಮುಖಂಡ ನಿತೇಶ್ ಬಾಜಪೈ ತಿರುಗೇಟು ನೀಡಿದ್ದಾರೆ.