ವಾಡಿ (ಚಿತ್ತಾಪುರ): ಮೌರ್ಯ ಸಾಮ್ರಾಜ್ಯದ ದೊರೆ ಸಾಮ್ರಾಟ್ ಅಶೋಕ ಚಕ್ರವರ್ತಿಯ ಕಾಲಘಟ್ಟವನ್ನು ನೆನಪಿಸುವ ಹಾಗೂ ಬುದ್ಧನ ಧಮ್ಮ ಪ್ರಚಾರದ ಇತಿಹಾಸ ಸಾರುವ ಐತಿಹಾಸಿಕ ಸ್ಥಳ ಸನ್ನತಿಗೆ ಶನಿವಾರ ಭೇಟಿ ನೀಡಿದ ಬಿಜೆಪಿ ಸಂಸದ ಡಿ.ಉಮೇಶ ಜಾಧವ ಅವರನ್ನು ದಲಿತರು ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಬೌದ್ಧ ಸ್ತೂಪ ಹಾಗೂ ಬುದ್ಧನ ಮೂರ್ತಿಗಳನ್ನು ವೀಕ್ಷಣೆಗೆ ಮುಂದಾದ ವೇಳೆ ಸಂಸದ ಜಾಧವ್ ಅವರನ್ನು ಸುತ್ತುವರೆದ ದಲಿತರು, ಬಿಜೆಪಿಯವರಿಗೆ ಬಹಳ ಬೇಗ ಸನ್ನತಿ ಅಭಿವೃದ್ಧಿಯ ಕಾಳಜಿ ಬಂದಿದೆಯಲ್ಲ ಎಂದು ವ್ಯಂಗವಾಡುವ ಮೂಲಕ ಅಸಮಾಧಾನ ಹೊರಹಾಕಿದರು.
ಈ ವೇಳೆ ಜಾಧವ್ ಎದುರಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿದ ದಲಿತ ಮುಖಂಡರು, 1994 ರಲ್ಲಿ ಸನ್ನತಿಯ ಕನಗನಹಳ್ಳಿ ಪ್ರದೇಶದ ಸ್ಥಳದಲ್ಲಿ ಉತ್ಖನನ ನಡೆದು ಸುದೀರ್ಘ 20 ವರ್ಷ ಕಳೆದಿವೆ. ಐತಿಹಾಸಿಕ ಬೌದ್ಧ ತಾಣ ಅಭಿವೃದ್ಧಿ ಕಾಣದೆ ನನಗೆಗುದಿಗೆ ಬಿದ್ದಿದೆ. ಕೇಂದ್ರ ಸರಕಾರದ ಆದೀನಕ್ಕೊಳಪಟ್ಟಿರುವ ಸನ್ನತಿಯ ಪ್ರಗತಿಗೆ ಬಿಜೆಪಿ ಸರಕಾರ ಯಾವೂದೇ ಕ್ರಮಕೈಗೊಂಡಿಲ್ಲ. ಅಂತರರಾಷ್ಟ್ರೀಯ ಪ್ರವಾಸಿತಾಣವಾಗಿರುವ ಸನ್ನತಿಗೆ ಹೆದ್ದಾರಿ ಅಭಿವೃದ್ಧಿಯಾಗಿಲ್ಲ. ಬುದ್ಧನ ಮೂರ್ತಿಗಳ ಸಂರಕ್ಷಣೆಗೆ ಯಾವೂದೇ ಕ್ರಮಕೈಗೊಂಡಿಲ್ಲ. ಪ್ರವಾಸಿಗರಿಗಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸಿಲ್ಲ. ಇಷ್ಟುದಿನ ಸನ್ನತಿ ನೆನಪಿಗೆ ಬರಲಿಲ್ವಾ? ಈಗಲಾದರೂ ಕೇಂದ್ರದಿಂದ ಅನುದಾನ ಬಿಡುಗಡೆ ಮಾಡ್ತೀರಾ? ಅಥವ ಕಾಟಾಚಾರದ ವೀಕ್ಷಣೆ ಮಾಡಿ ಹೋಗ್ತಿರಾ? ಎಂದು ವಾಗ್ವಾದ ನಡೆಸಿದರು. ದಲಿತರನ್ನು ಸಮಾಧಾನ ಮಾಡಿ ಮಾತನಾಡಿದ ಸಂಸದ ಡಾ.ಉಮೇಶ ಜಾಧವ, ಸನ್ನತಿ ಎಂಬುದು ಪವಿತ್ರ ಬೌದ್ಧ ತಾಣವಾಗಿದೆ. ಇದರ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ. ಸ್ಥಳವನ್ನು ವಿಕ್ಷಿಸಿ ಇಲ್ಲಿನ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರುತ್ತೇನೆ. ಸನ್ನತಿ ಅಭಿವೃದ್ಧಿಗೆ ಖಂಡಿತಾ ಅನುದಾನ ನೀಡುತ್ತೇನೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ : ಸಂಗೊಳ್ಳಿ ರಾಯಣ್ಣ, ಶಿವಾಜಿ ಪ್ರತಿಮೆ ಹಾನಿಗೆ ಸಚಿವರ ಖಂಡನೆ, ಕಾನೂನು ಕ್ರಮದ ಎಚ್ಚರಿಕೆ
ಸೂರ್ಯಕಾಂತ ರದ್ದೇವಾಡಿ, ಚಂದ್ರಸೇನ ಮೇನಗಾರ, ಪ್ರಕಾಶ, ಶರಣಬಸು ಸಿರೂರಕರ, ಗುರುಪಾದ ದೊಡ್ಡಮನಿ, ರವಿ ಕೋಳಕೂರ, ಚಂದ್ರಶೇಖರ ಧನ್ನೇಕರ, ಶಿವುಕುಮಾರ ಯಲಸತ್ತಿ, ರಮೇಶ ಹೇರೂರ, ಶಶಿಕುಮಾರ, ವಿಜಯಕುಮಾರ ಸಿಂಗೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.