ಮುಂಬಯಿ: ಮೀರಾ-ಭಾಯಂದರ್ ಪರಿಸರದಲ್ಲಿನ ಅಕ್ರಮವೆಂಬ ನೆಲೆಯಲ್ಲಿ ಹೊಟೇಲ್‌ಗಳ ವಿರುದ್ಧ ಮೀರಾ-ಭಾಯಂದರ್ ನಗರ ಪಾಲಿಕೆಯು ಆರಂಭಿಸಿರುವ ನೆಲಸಮ ಕಾರ್ಯಾಚರಣೆಗೆ ಪಾಲಿಕೆ ಆಯುಕ್ತ ನರೇಶ್ ಗೀತೆ ಅವರು ತಡೆ ನೀಡಿದ್ದಾರೆ.
ಉತ್ತರ ಮುಂಬಯಿ ಲೋಕಸಭಾ ಸದಸ್ಯ ಗೋಪಾಲ್ ಶೆಟ್ಟಿ ಅವರು ಮೀರಾ-ಭಾಯಂದರ್‌ನಶಾಸಕ ನರೇಂದ್ರ ಮೆಹ್ತಾ ಅವರ ಮೂಲಕ ಪಾಲಿಕೆಯ ಆಯುಕ್ತರನ್ನು ಸಂಪರ್ಕಿಸಿ ಹೊಟೇಲ್‌ಗಳು ಅಕ್ರಮ ಇಲ್ಲವೆ ಅನಧಿಕೃತವಾಗಿದ್ದರೆ ಅವರಿಗೆ ಯಾವುದೇ ನೋಟೀಸ್ ನೀಡದೆ ಇದ್ದಕ್ಕಿದ್ದಂತೆ ನೆಲಸಮ ಕಾರ್ಯಾಚರಣೆ ಕೈಗೊಂಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಆಯುಕ್ತರು ಈ ನಿರ್ಧಾರ ಪ್ರಕಟಿಸಿದ್ದಾರೆ.
ಮೀರಾ-ಭಾಯಂದರ್ ಪರಿಸರದ ಹೊಟೇಲಿಗರು ಐಕಳ ಹರೀಶ್ ಶೆಟ್ಟಿ, ಗಂಧರ್ವ ಸುರೇಶ್ ಶೆಟ್ಟಿ, ಉದಯ್ ಶೆಟ್ಟಿ, ಸುರೇಶ್ ಶೆಟ್ಟಿ, ಬಾಬಾ ರಂಜನ್ ಶೆಟ್ಟಿ, ರವೀಂದ್ರ ಶೆಟ್ಟಿ, ನಿತಿನ್ ಶೆಟ್ಟಿ, ಪರಮೇಶ್, ಶೇಖರ್ ಶೆಟ್ಟಿ, ಪ್ರಕಾಶ್ ಶೆಟ್ಟಿ, ರಾಮನಾಥ್, ಎರ್ಮಾಳ್ ಹರೀಶ್ ಶೆಟ್ಟಿ ನೇತೃತ್ವದಲ್ಲಿ ನ. 6ರಂದುಬೆಳಗ್ಗೆ ಸಂಸದ ಗೋಪಾಲ್ ಶೆಟ್ಟಿ ಅವರನ್ನು ಭೇಟಿಯಾಗಿ ಹೊಟೇಲ್‌ಗಳ ವಿರುದ್ದ ನಡೆಯುತ್ತಿರುವ ನೆಲಸಮ ಕಾರ್ಯಾಚರಣೆಯ ಬಗ್ಗೆ ಮನವಿ ಸಲ್ಲಿಸಿದ್ದರು.
ಮನವಿಯನ್ನು ಸ್ವೀಕರಿಸಿದ ಗೋಪಾಲ್ ಶೆಟ್ಟಿಆಯುಕ್ತರನ್ನು ಸಂಪರ್ಕಿಸಿ ಹೊಟೇಲಿಗರಿಗೆ ಯಾವುದೇ ರೀತಿಯ ನೋಟೀಸ್ ನೀಡದೆ ಇದ್ದಕ್ಕಿಂದಂತೆ ಅಕ್ರಮವೆಂಬ ನೆಲೆಯಲ್ಲಿ ನೆಲಸಮ ಕಾರ್ಯಾಚರಣೆ ಆರಂಭಿಸಿರುವುದಕ್ಕೆ ತಮ್ಮ ಆಕ್ಷೇಪ ವ್ಯಕ್ತ ಪಡಿಸಿದ್ದರು. ಅಕ್ರಮ ಇಲ್ಲವೆ, ಅನಧಿಕೃತವಿದ್ದರೆ ಅದನ್ನು ಸರಿಪಡಿಸಿಕೊಳ್ಳಲು ಅಂತಹ ಹೊಟೇಲ್‌ಗಳಿಗೆ ಸಮಯಾವಕಾಶ ನೀಡಬೇಕು ಎಂದು ಆಯುಕ್ತರಿಗೆ ತಿಳಿಸಿದ್ದರು. ಈ ರೀತಿಯ ಯಾವುದೇ ನೋಟೀಸ್ ನೀಡದೆ ನೆಲಸಮ ಕಾರ್ಯಾಚರಣೆ ನಡೆಸಿದರೆ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಹೊಟೇಲಿಗರಿಗೆ ಸಂಸದ ಗೋಪಾಲ್ ಶೆಟ್ಟಿ ಅವರು ಸಲಹೆ ನೀಡಿದರು.
ಬಳಿಕ ಸ್ಥಳೀಯ ಶಾಸಕ ನರೇಂದ್ರ ಮೆಹ್ತಾ ಅವರ ಜೊತೆಗೆ ಮಾತನಾಡಿದ ಸಂಸದರು. ಹೊಟೇಲಿಗರಿಗೆ ಆಗಿರುವ ತೊಂದರೆಯನ್ನು ಸರಿಪಡಿಸಲು ಕೂಡಲೇ ಪಾಲಿಕೆ ಆಯುಕ್ತರೊಂದಿಗೆ ಮಾತುಕತೆ ನಡೆಸುವಂತೆ ಸೂಚಿಸಿದ್ದರು. ಹೊಟೇಲಿಗರು ಶಾಸಕ ನರೇಂದ್ರ ಮೆಹ್ತಾ ಮತ್ತು ಸ್ಥಳೀಯ ಎಸ್ಪಿ ಮಹೇಶ್ ಪಾಟೀಲ್ ಅವರನ್ನು ಕೂಡ ಭೇಟಿಯಾಗಿ ಪಾಲಿಕೆ ಅಧಿಕಾರಿಗಳ ನೆಲಸಮ ಕಾರ್ಯಾಚರಣೆಯ ವಿರುದ್ಧ ಅತೃಪ್ತಿ ವ್ಯಕ್ತಪಡಿಸಿದ್ದರು.
ಸಂಸದರ ಸಲಹೆಯಂತೆ ಹೊಟೇಲಿಗರು ಪಾಲಿಕೆಯ ಆಯುಕ್ತ ಗೀತೆ ಅವರನ್ನು ಭೇಟಿ ಮಾಡಿದ್ದು, ಆಯುಕ್ತರು ನೆಲಸಮ ಕಾರ್ಯಾಚರಣೆಗೆ ತಡೆ ನೀಡಿರುವುದಲ್ಲದೆ, ಅಕ್ರಮ ಇಲ್ಲವೆ ಅನಧಿಕೃತ ಹೊಟೇಲಿಗರಿಗೆ ಅದನ್ನು ಅನಧಿಕೃತಗೊಳಿಸಲು ಸಮಯ ನೀಡಿದ್ದಾರೆ ಎನ್ನಲಾಗಿದೆ. ಮೀರಾ-ಭಾಯಂದರ್ ವಲಯದಲ್ಲಿ ಪಾಲಿಕೆ ಆಡಳಿತವು ಈಗಾಗಲೇ ಹಲವು ಲಾಡ್ಜ್ ಹಾಗೂ ಹೊಟೇಲ್‌ಗಳನ್ನು ಅಕ್ರಮವೆಂಬ ಕಾರಣಕ್ಕೆ ನೆಲಸಮಗೊಳಿಸಿದ್ದು, ಇದು ಹೊಟೇಲಿಗರ ಆತಂಕಕ್ಕೆ ಕಾರಣವಾಗಿತ್ತು. ಸಂಸದ ಗೋಪಾಲ್ ಶೆಟ್ಟಿ ಅವರ ಮಧ್ಯಪ್ರವೇಶದಿಂದ ಹೊಟೇಲಿಗರ ಆತಂಕ ದೂರವಾಗಿ ನಿಟ್ಟುಸಿರುಬಿಡುವಂತಾಗಿದೆ.
ಮಂಗಳವಾರ ಕನ್ನಡಿಗ ನಗರ ಸೇವಕ ಅರವಿಂದ ಎ. ಶೆಟ್ಟಿ ಹಾಗೂ ಶಾಸಕ ನರೇಂದ್ರ ಮೆಹ್ತಾ ಅವರ ನೇತೃತ್ವದಲ್ಲಿ ಪಾಲಿಕೆಯ ಆಯುಕ್ತರ ಕಚೇರಿಯಲ್ಲಿ ವಿಶೇಷ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮೀರಾ-ಭಾಯಂದರ್‌ನಲ್ಲಿರುವ ಅಕ್ರಮ ಮತ್ತು ಅನಧಿಕೃತ ಹೊಟೇಲಿಗರಿಂದ ಸಂಬಂಧಪಟ್ಟ ದಾಖಲೆಗಳನ್ನು ಪಾಲಿಕೆಯ ಮುಂದಿಡಲಾಗಿದ್ದು, ದಾಖಲೆಗಳನ್ನು ಪರಿಶೀಲಿಸಿದ ಆಯುಕ್ತ ಗೀತೆ ಅವರು, ಅಕ್ರಮ ಮತ್ತು ಅನಧೀಕೃತ ಹೊಟೇಲ್, ಲಾಡ್ಜ್ಗಳನ್ನು ಅಧಿಕೃತಗೊಳಿಸಲು ಹೊಟೇಲಿಗರಿಗೆ ಒಂದು ತಿಂಗಳ ಕಾಲ ಗಡುವು ನೀಡಿದ್ದಾರೆ ಎನ್ನಲಾಗಿದೆ.