ಭೋಪಾಲ್: ದಮೋಹ್ ಜಿಲ್ಲೆಯ ಜೈನ ದೇವಾಲಯದ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ತಪ್ಪುದಾರಿಗೆಳೆಯುವ ಪೋಸ್ಟ್ ಮಾಡಿದ ನಂತರ ಮಧ್ಯಪ್ರದೇಶ ಪೊಲೀಸರು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಪೊಲೀಸ್ ಪ್ರಕರಣದ ನಡುವೆ, ರಾಜ್ಯ ಬಿಜೆಪಿ ಅಧ್ಯಕ್ಷ ವಿಡಿ ಶರ್ಮಾ ಅವರು ಜನರನ್ನು ದಾರಿ ತಪ್ಪಿಸುವ ಕಾರಣಕ್ಕಾಗಿ ಎಕ್ಸ್ ಸಿಂಗ್ ಅವರ ಖಾತೆಯನ್ನು ಅಮಾನತುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
ರಾಜ್ಯಸಭಾ ಸದಸ್ಯ ಸಿಂಗ್ ಅವರು ಆ 27 ರಂದು ತಮ್ಮ ಅಧಿಕೃತ X ಖಾತೆಯ ಪೋಸ್ಟ್‌ನಲ್ಲಿ, ಕೆಲವು “ಬಜರಂಗದಳದ ಸಮಾಜ ವಿರೋಧಿ ಶಕ್ತಿಗಳು” ಆ 26 ರಂದು ಕುಂದಲ್‌ಪುರದಲ್ಲಿರುವ ಜೈನ ಮಂದಿರ ಸಂಕೀರ್ಣವನ್ನು ಧ್ವಂಸಗೊಳಿಸಿ ಶಿವನ ವಿಗ್ರಹವನ್ನು ಇರಿಸಿದ್ದಾರೆ” ಎಂದು ಪೋಸ್ಟ್ ಮಾಡಿದ್ದರು.
ಸಿಂಗ್ ಅವರು ಮಧ್ಯಪ್ರದೇಶ ಮುಖ್ಯಮಂತ್ರಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ಪೋಸ್ಟ್ ಟ್ಯಾಗ್ ಮಾಡಿದ್ದರು. ನಂತರ ಅವರು ಅದನ್ನು ಡಿಲೀಟ್ ಮಾಡಿದ್ದಾರೆ.
ಬಜರಂಗದಳದ ನಗರ ಸಂಚಾಲಕ ಶಂಭು ವಿಶ್ವಕರ್ಮ, ಕುಂದಲ್‌ಪುರ ದೇವಸ್ಥಾನದ ಸಂಕೀರ್ಣದ ಕುರಿತು ಸಿಂಗ್ ಅವರ ದಾರಿ ತಪ್ಪಿಸುವ ಪೋಸ್ಟ್‌ನ ವಿರುದ್ಧ ಪೊಲೀಸರಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಿದ್ದು, ಪೊಲೀಸರು 76 ವರ್ಷದ ಕಾಂಗ್ರೆಸ್ ನಾಯಕನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಕೋಮು ಸೌಹಾರ್ದತೆ ಕದಡುತ್ತಿರುವ ಕಾರಣಕ್ಕಾಗಿ ಸಿಂಗ್ ಅವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.