Advertisement

ಜೆಡಿಎಸ್‌, ಎಚ್‌ಡಿಕೆ ವಿರುದ್ಧ ಸಂಸದ ಸುರೇಶ್‌ ವಾಗ್ಧಾಳಿ

01:25 PM Feb 06, 2023 | Team Udayavani |

ರಾಮನಗರ: ರೇಷ್ಮೇನಗರಿ ನಾಲ್ವರು ಮುಖ್ಯಮಂತ್ರಿ ನೀಡಿರುವ ಕ್ಷೇತ್ರ ಆದರೂ, ಮೂಲಭೂತ ಸೌಕರ್ಯಗಳೇ ಇಲ್ಲವಾಗಿರುವುದು ದುರಂತದ ವಿಚಾರವಾಗಿದೆ. ಇನ್ನಾದರೂ ಅಭಿವೃದ್ಧಿ ಚಿಂತನೆಗೆ ನೀವು ಸಹಕಾರ ನೀಡಬೇಕು. ಒಂದೇ ಕುಟುಂಬ ಮತ್ತು ಪಕ್ಷವನ್ನು ನಂಬಿ ಪದೇ ಪದೆ ಮೋಸ ಹೋಗ ಬೇಡಿ ಎಂದು ಸಂಸದ ಡಿ.ಕೆ. ಸುರೇಶ್‌ ಜೆಡಿಎಸ್‌ ಹಾಗೂ ಎಚ್‌ಡಿಕೆ ವಿರುದ್ಧ ವಾಗ್ಧಾಳಿ ನಡೆಸಿದರು.

Advertisement

ತಾಲೂಕಿನ ತುಂಬೇನಹಳ್ಳಿ ಗ್ರಾಮದಲ್ಲಿ ನಡೆದ ಕಾಂಗ್ರೆಸ್‌ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ ಅತ್ಯುನ್ನತ ಹುದ್ದೆಯಾದ ಮುಖ್ಯಮಂತ್ರಿ ಸ್ಥಾನವನ್ನು ನಾಲ್ಕು ಬಾರಿ ರಾಮನಗರ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿದೆ. ನಿಮ್ಮಿಂದ ಮತ ಪಡೆದು ಹುದ್ದೆಗೇರಿದವರು ಕೃತಜ್ಞತೆಗಾದರೂ ನಿಮ್ಮ ಸಮಸ್ಯೆ ಬಗೆಹರಿಸಬೇಕಿತ್ತು. ಆದರೆ, ಇಲ್ಲಿನ ಜನ ಇನ್ನೂ ಸಹ ಮೂಲಭೂತ ಸೌಕರ್ಯಗಳ ಕೊರತೆ ಎದುರಿಸುತ್ತಿದ್ದಾರೆ. ಇದು ಅವರ ಅಭಿವೃದ್ಧಿ ರಹಿತ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ ಎಂದರು.

ಮೂಲಭೂತ ಸೌಕರ್ಯಗಳ ವಿಷಯದಲ್ಲಿ ರಾಮನಗರ ಮತ್ತು ಕನಕಪುರ ಕ್ಷೇತ್ರವನ್ನು ಹೋಲಿಸಿ ಜನತೆ ಮಾತನಾಡುತ್ತಿದ್ದಾರೆ. ಕನಕಪುರ ಕ್ಷೇತ್ರದ ಜನ ನೀಡಿದ ಮತಕ್ಕೆ ಖುಣಿಯಾಗಿ ಕೆಲಸ ಮಾಡಿದ್ದೇವೆ. ಅತ್ಯಂತ ಗುಣಮಟ್ಟದ ಮೂಲಭೂತ ಸೌಕರ್ಯ ಪಡೆದು ನೆಮ್ಮದಿಯಿಂದ ಜೀವನ ಮಾಡುತ್ತಿದ್ದಾರೆ. ಜಿಲ್ಲಾ ಕೇಂದ್ರವಾದ ರಾಮನಗರದಲ್ಲಿ ಸಮರ್ಪಕ ವಾಗಿ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಮೋರಿ, ಚರಂಡಿ, ರಸ್ತೆ ವ್ಯವಸ್ಥೆಗೆ ಇನ್ನೂ ಪರದಾಡ ಬೇಕಾಗಿದೆ. ಇದರಿಂದ ಇಡೀ ಜಿಲ್ಲೆ ಮತ್ತು ರಾಮ ನಗರದ ಜನ ಬೇಸತ್ತು ಬದಲಾವಣೆ ಬಯಸುತ್ತಿದ್ದಾರೆ ಎಂದರು.

ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸಿ: ಡಿ.ಕೆ.ಶಿವಕುಮಾರ್‌ ಅವರು ಮುಖ್ಯಮಂತ್ರಿಯಾಗುವ ಎಲ್ಲಾ ಅವಕಾಶ ದೊರೆತಿದೆ. ರಾಜ್ಯದ ಜನ ಹೊಸ ನಾಯಕತ್ವ ಬಯಸುತ್ತಿದ್ದಾರೆ. ಜಾತಿ, ಮತ, ಧರ್ಮಗಳ ವಿಷಬೀಜ ಭಿತ್ತಿ ರಾಜಕೀಯ ಮಾಡುವವರಿಗೆ ಪಾಠ ಕಲಿಸಬೇಕು. ಸರ್ವರನ್ನೂ ಜೊತೆಗೆ ತೆಗೆದುಕೊಂಡು ಹೋಗುವ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸಿ. ಕೇಂದ್ರದ ಬಿಜೆಪಿ ಸರ್ಕಾರ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದಿದೆ. ಕೇವಲ ಪೊಳ್ಳು ಭರವಸೆಗಳೊಂದಿಗೆ ಅಧಿಕಾರ ಗಿಟ್ಟಿಸಿಕೊಂಡಿದ್ದು, ಕೊಟ್ಟ ಯಾವ ಭರವಸೆಗಳನ್ನು ಈಡೇರಿಸಿಲ್ಲ. ರಾಜ್ಯ ಮತ್ತು ರಾಷ್ಟ್ರಕ್ಕೆ ಏನಾದರೂ ಬಿಜೆಪಿ ಕೊಡುಗೆ ಇದ್ದರೆ ಅದು ಬೆಲೆ ಏರಿಕೆ ಮಾತ್ರ. ಇದರಿಂದ ರಾಜ್ಯದ ಮತ್ತು ದೇಶದ ಬಡ ಮತ್ತು ಮಧ್ಯಮ ವರ್ಗದವರು ಬದುಕು ದುಸ್ತರವಾಗಿದೆ ಎಂದು ಹೇಳಿದರು.

200 ಯೂನಿಟ್‌ವರೆಗೆ ಉಚಿತ ವಿದ್ಯುತ್‌: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಇಂಧನ ಸಚಿವರಾಗಿದ್ದಾಗ ಯಶಸ್ವಿಯಾಗಿ ಖಾತೆಯನ್ನು ಕಾರ್ಯ ನಿರ್ವಹಿಸಿದ್ದಾರೆ. ರೈತರು ಕೇಳದಿದ್ದರೂ ಟಿಸಿಗಳನ್ನು ಹಾಕಿಕೊಟ್ಟಿದ್ದರು. ಜಿಲ್ಲಾದ್ಯಂತ 60 ಸಾವಿರ ರೈತರಿಗೆ ಉಚಿತವಾಗಿ ಟಿಸಿಗಳನ್ನು ಅಳವಡಿಸಿಕೊಟ್ಟರು. ಇದರಿಂದ ಪ್ರತಿ ರೈತರಿಗೆ ವರ್ಷಕ್ಕೆ 15 ಸಾವಿರ ಖರ್ಚು ಉಳಿತಾಯವಾಗಿದೆ ಎಂದರು.

Advertisement

ಮುಂದಿನ ದಿನಗಳಲ್ಲಿ ನೀವೆಲ್ಲಾ ಕಾಂಗ್ರೆಸ್‌ ಪಕ್ಷಕ್ಕೆ ಶಕ್ತಿ ಕೊಡಿ. ಜಿಲ್ಲಾದ್ಯಂತ ಗೃಹ ಬಳಕೆಗೆ 200ಕ್ಕೂ ಅಧಿಕ ಯೂನಿಟ್‌ಗಳನ್ನು ಬಳಸುತ್ತಿರುವುದು ಕೇವಲ 3500 ಜನ ಮಾತ್ರ. ಮುಂದೆ ಉಳಿದೆಲ್ಲಾ ಜನರಿಗೆ ಯಾವುದೇ ತಾರತಮ್ಯ ಇಲ್ಲದೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ನೀಡಲಾಗುವುದು ಎಂದು ಭರವಸೆ ನೀಡಿದರು.

ತುಂಬೇನಹಳ್ಳಿ ಗ್ರಾಪಂ ಸದಸ್ಯ ಪುನೀತ್‌ ಕುಮಾರ್‌ ಸೇರಿದಂತೆ ಹಲವು ಮುಖಂಡರು ಪಕ್ಷ ಸೇರ್ಪಡೆಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next