Advertisement
ಸಂಸದ ಡಿ.ಕೆ.ಸುರೇಶ್ 106 ಕೋಟಿ ರೂ. ಮೌಲ್ಯದ ಚರಾಸ್ತಿ, 486.33 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಜತೆಗೆ 150 ಕೋಟಿ ರೂ. ಸಾಲವನ್ನೂ ಹೊಂದಿದ್ದಾರೆ. ವಿವಿಧ ಬ್ಯಾಂಕ್ ಮತ್ತು ವಿಮಾ ಪಾಲಿಸಿ ಸೇರಿ 1.66 ಕೋಟಿ ರೂ. ಠೇವಣಿ ಇರಿಸಿದ್ದು, ವಿವಿಧ ಸಂಸ್ಥೆಗಳಲ್ಲಿ 2.14 ಕೋಟಿ ರೂ. ಷೇರು ಬಂಡವಾಳ ಹೊಂದಿದ್ದಾರೆ.
Related Articles
Advertisement
ಪ್ರಕರಣಗಳ ಉಲ್ಲೇಖ:
ದ್ವಿತೀಯ ಪಿಯುಸಿವರೆಗೆ ಓದಿರುವ ಸುರೇಶ್ ವಿರುದ್ಧ ಕೋವಿಡ್ ನಿಯಮ ಉಲ್ಲಂಘನೆಗೆ ಸಂಬಂಧಿಸಿ ಎರಡು, ನೀತಿಸಂಹಿತೆ ಉಲ್ಲಂಘನೆ ಸಂಬಂಧಿಸಿ ರಾಜರಾಜೇಶ್ವರಿ ನಗರದಲ್ಲಿ ಒಂದು ಪ್ರಕರಣ ದಾಖಲಾಗಿದೆ. ಆದಾಯ ತೆರಿಗೆ, ಬಿಬಿಎಂಪಿಗೆ ಆಸ್ತಿ ತೆರಿಗೆ ಸಹಿತ 64.44 ಕೋಟಿ ರೂ. ತೆರಿಗೆ ಪಾವತಿಸಬೇಕಾಗಿದೆ. ಈ ಪೈಕಿ 7.16 ಕೋಟಿ ರೂ. ತೆರಿಗೆ ಪಾವತಿಸಿದ್ದು, 57.27 ಕೋಟಿ ರೂ. ಬಾಕಿ ಇದೆ. ತೆರಿಗೆ ಪಾವತಿಗೆ ಸಂಬಂಧಿಸಿ ಆದಾಯ ತೆರಿಗೆ ಇಲಾಖೆಯಲ್ಲಿ ಪ್ರಕರಣವಿದೆ.
ಹೆಚ್ಚಿದ ಆಸ್ತಿ ಮೌಲ್ಯ:
ಸಂಸದ ಡಿ.ಕೆ.ಸುರೇಶ್ ಮೌಲ್ಯ ಪ್ರತಿ ಚುನಾವಣೆಯಿಂದ ಚುನಾವಣೆಗೆ ಹೆಚ್ಚುತ್ತಿದೆ. 2013ರಲ್ಲಿ ಆಸ್ತಿ ಮೌಲ್ಯ 47.29 ಕೋಟಿ ರೂ. ಇತ್ತು. 2014ರಲ್ಲಿ ಲೋಕಸಭೆಗೆ ಸ್ಪರ್ಧಿಸಿದಾಗ 85.87 ಕೋಟಿ ರೂ. ಗಳಿಗೆ ಹೆಚ್ಚಿತ್ತು. 2019ರಲ್ಲಿ 338.89 ಕೋಟಿ ರೂ. ಇದ್ದದ್ದು 592 ಕೋಟಿ ರೂಪಾಯಿಗೆ ಏರಿಕೆಯಾಗಿದೆ.
ಸಾಲವೂ ಹೆಚ್ಚಳ:
ಆಸ್ತಿ ಜತೆಗೆ ಅವರ ಸಾಲವೂ ಹೆಚ್ಚಳವಾಗಿದೆ. 2013ರಲ್ಲಿ 17.70 ಕೋಟಿ ರೂ. ಇದ್ದ ಸಾಲ, 2014ರಲ್ಲಿ 18.48 ಕೋಟಿ ರೂ. ಇತ್ತು. 2019ರಲ್ಲಿ 51,93 ಕೋಟಿ ರೂ. ಇದ್ದ ಸಾಲ, ಈಗ 150 ಕೋಟಿ ರೂ. ಗಳಿಗೆ ತಲುಪಿದೆ.
ಕುಟುಂಬದವರಿಗೆ ಸಾಲ:
ಸಂಸದ ಸುರೇಶ್ 86.37 ಕೋಟಿ ರೂ. ಸಾಲ ನೀಡಿದ್ದಾರೆ. ಈ ಪೈಕಿ ತಮ್ಮ ಕುಟುಂಬದವರಿಗೆ ಹೆಚ್ಚಿನ ಸಾಲ ನೀಡಿದ್ದಾರೆ ಎಂಬುದು ವಿಶೇಷ. ಅಣ್ಣ ಡಿ.ಕೆ.ಶಿವಕುಮಾರ್‌ಗೆ 30 ಕೋಟಿ ರೂ., ಅಣ್ಣನ ಮಗಳು ಐಶ್ವರ್ಯ ಡಿಕೆಎಸ್ ಹೆಗ್ಡೆಗೆ 7.94 ಕೋಟಿ ರೂ., ತಾಯಿ ಗೌರಮ್ಮಗೆ 4.75 ಕೋಟಿ ರೂ., ಅಣ್ಣನ ಮಗ ಆಕಾಶ್ ಕೆಂಪೇಗೌಡಗೆ 1.06 ಕೋಟಿ ರೂ., ತಮ್ಮ ಸಂಬಂಧಿ ಡಾ| ಸುಮಾ ರಂಗನಾಥ್‌ಗೆ 30 ಲಕ್ಷ ರೂ. ಸಾಲ ನೀಡಿದ್ದಾರೆ.
ಸಂಸದ ಸುರೇಶ್ ಆಸ್ತಿ ನೋಟ :
106 ಕೋ. ರೂ.- ಚರಾಸ್ತಿ ಮೌಲ್ಯ
486.33 ಕೋ. ರೂ- ಸ್ಥಿರಾಸ್ತಿ ಮೌಲ್ಯ
150 ಕೋ. ರೂ.- ಒಟ್ಟು ಸಾಲ
1.66 ಕೋ. ರೂ.- ಠೇವಣಿಗಳು
2.14 ಕೋ. ರೂ.- ಷೇರುಗಳಲ್ಲಿ ಹೂಡಿಕೆ
210 ಕೋ. ರೂ.- ಕೃಷಿ ಭೂಮಿ, ನಿವೇಶನ ಮೌಲ್ಯ