ಚಿಕ್ಕಬಳ್ಳಾಪುರ: ಕೋವಿಡ್ ಸೋಂಕು ಹಿನ್ನೆಲೆ ಲಾಕ್‌ಡೌನ್ ಇರುವುದರಿಂದ ಜನತೆ ಸಂಕಷ್ಟ ದಲ್ಲಿದ್ದಾರೆ. ಬರದಿಂದ ಕಂಗಲಾಗಿರುವ ಜನತೆಗೆ ನೀರಿನ ದಾಹ ನೀಗುತ್ತಿಲ್ಲ. ರೈತರು ಬೆಳೆದ ಬೆಳೆಗೆ ಮಾರುಕಟ್ಟೆ ಜೊತೆಗೆ ಬೆಲೆ ಕೊಡ ಸಿಗುತ್ತಿಲ್ಲ. ಇಂತಹ ಸಂಕಷ್ಟದ ಸಮಯದಲ್ಲಿಯೂ ಸಂಸದ ಬಿ.ಎನ್.ಬಚ್ಚೇಗೌಡ ಕ್ಷೇತ್ರದ ಕಡೆಗೆ ತಲೆಹಾಕದಿರುವುದು ಚರ್ಚೆಗೆ ಕಾರಣವಾಗಿದೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲ ಅರಳಿಸಿದ ಖಾತೆ ಬಿ.ಎನ್.ಬಚ್ಚೇಗೌಡರಿಗೆ ಇದ್ದರೂ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಅವರ ಮೇಲಿನ ಜನರ
ನಿರೀಕ್ಷೆಗಳು ಈಗ ಹುಸಿಯಾಗಿದ್ದು, ಅವರ ಕಾರ್ಯವೈಖರಿ ಬಗ್ಗೆ ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಬೇಸರ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ ಗೌರಿಬಿದನೂರು, ಚಿಕ್ಕಬಳ್ಳಾಪುರ
ತಾಲೂಕುಗಳಲ್ಲಿ ಕೋವಿಡ್ ಸೋಂಕಿತರು ಕಾಣಿಸಿಕೊಂಡು ಜನರು ತಲ್ಲಣಗೊಂಡಿದ್ದಾರೆ. ಮತ್ತೂಂದೆಡೆ ಲಾಕ್‌ಡೌನ್‌ನಿಂದಾಗಿ ಜನ ಸಾಮಾನ್ಯರು, ವಲಸಿಗರು, ಕಾರ್ಮಿಕರು, ಬಡವರು, ಮಧ್ಯಮ ವರ್ಗದ ಜನತೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಕ್ಷೇತ್ರದ ಸಂಸದರಾಗಿ ಜನರ ಸಂಕಷ್ಟಗಳಿಗೆ ಧ್ವನಿಯಾಗಿ ಜಿಲ್ಲಾಡಳಿತಕ್ಕೆ ಸೂಕ್ತ ಮಾರ್ಗದರ್ಶನ ನೀಡಿ ಕ್ಷೇತ್ರದ ಜನರ ಆಶೋತ್ತರಗಳಿಗೆ ಆಸರೆಯಾಗಬೇಕಿದ್ದ ಸಂಸದರು ಈಗ ತಮ್ಮ ಪುತ್ರ ಶಾಸಕರಾಗಿರುವ ಹೊಸಕೋಟೆಗೆ ಸೀಮಿತವಾಗಿರುವುದು ಟೀಕೆಗೆ ಗುರಿಯಾಗಿದೆ.
ಲಾಕ್‌ಡೌನ್ ಘೋಷಣೆಯಾಗಿ ತಿಂಗಳು ಕಳೆದರೂ ಸಂಸದ ಬಿ.ಎನ್.ಬಚ್ಚೇಗೌಡ, ಇದುವರೆಗೂ ಅಧಿಕಾರಿಗಳ ಸಭೆ ಕರೆದು ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಿಲ್ಲಾಡಳಿತದೊಂದಿಗೆ ಚರ್ಚೆ ನಡೆಸಿಲ್ಲ. ಒಮ್ಮೆ ಮಾತ್ರ ಉಸ್ತುವಾರಿ ಸಚಿವರಾಗಿದ್ದ ಉಪ ಮುಖ್ಯಮಂತ್ರಿ ಸಿ.ಎನ್.ಅಶ್ವತ್ಥನಾರಾಯಣ ಕರೆದಿದ್ದ ಸಭೆಯಲ್ಲಿ ಭಾಗವಹಿಸಿ ಹೋಗಿರುವುದು ಬಿಟ್ಟರೆ ಇದುವರೆಗೂ ಕ್ಷೇತ್ರಕ್ಕೆ ಕಾಲಿಟ್ಟಿಲ್ಲ.
ಸಂಸದರ ಕಚೇರಿ ಭಣ ಭಣ: ಜಿಲ್ಲಾಡಳಿತ ಭವನದಲ್ಲಿ ಸಂಸದರ ಕಾರ್ಯಾಲಯ ಇದ್ದರೂ ಜನರ ಪಾಲಿಗೆ ಇದ್ದೂ ಇಲ್ಲದಂತಾಗಿದೆ. ಸಂಸದರು ಹೊಸಕೋಟೆ ಕ್ಷೇತ್ರದಲ್ಲಿ ಬೀಡುಬಿಟ್ಟು ಅಲ್ಲಿನ ಶಾಸಕರಾಗಿರುವ ತಮ್ಮ ಪುತ್ರ ಶರತ್ ಬಚ್ಚೇಗೌಡ ಜೊತೆ ಕಾಣಿಸಿಕೊಳ್ಳುತ್ತಿರುವುದು ಬಿಟ್ಟರೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಸೇರಿದ ಕ್ಷೇತ್ರಗಳಲ್ಲಿ ತಲೆ ಹಾಕುತ್ತಿಲ್ಲ ಎನ್ನುವ ಆರೋಪ ಕ್ಷೇತ್ರದ ಮತದಾರರಿಂದ ಕೇಳಿ ಬರುತ್ತಿದೆ.
ಸಂಸದರಿಗೆ ಕ್ಷೇತ್ರದ ಜನರ ಬಗ್ಗೆ ಕಾಳಜಿ ಇಲ್ಲ. ಕೋವಿಡ್ ಸೋಂಕು ಸಂಕಷ್ಟದಿಂದ ಜನ ಸಾಮಾನ್ಯರು, ಕೂಲಿ ಕಾರ್ಮಿಕರು, ರೈತರು ಪರಿತಪಿಸುವಂತಾಗಿದೆ. ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿ ಕುಡಿಯುವ ನೀರು, ರೈತರ ಸಮಸ್ಯೆಗಳನ್ನು ಬಗೆಹರಿಸಬೇಕಿತ್ತು.
● ಎಂ.ಪಿ.ಮುನಿವೆಂಕಟಪ್ಪ, ಕೃಷಿ ಕೂಲಿಕಾರರ ಸಂಘದ ರಾಜ್ಯ ಮುಖಂಡರು