ಕುಂದಾಪುರ: ಬೈಂದೂರು ವ್ಯಾಪ್ತಿಯ ಕಡಲ ತೀರ ಪ್ರದೇಶದಲ್ಲಿ ಪ್ರತಿ ವರ್ಷ ಪ್ರಾಕೃತಿಕ ವಿಕೋಪದಿಂದಾಗಿ ಸಾಕಷ್ಟು ಹಾನಿಯಾಗುತ್ತಿದೆ. ಮುಂಬರುವ ಸಂಸತ್ ಅಧಿವೇಶನದ ವೇಳೆ ಶಾಸಕ ಸುಕುಮಾರ್ ಶೆಟ್ಟಿ ಅವರೊಂದಿಗೆ ದಿಲ್ಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿಯಾಗಿ, ಶಾಶ್ವತ ಯೋಜನೆಗಾಗಿ ಬೇಡಿಕೆ ಇಡಲಾಗುವುದು. ತುರ್ತು ಪರಿಹಾರ ಕಾರ್ಯ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಗುರುವಾರ ಮರವಂತೆಯ ಕರಾವಳಿಯ ತೀರ ಪ್ರದೇಶದಲ್ಲಿ ಉಂಟಾದ ಕಡಲ್ಕೊರೆತ ಪ್ರದೇಶಗಳಿಗೆ ಭೇಟಿ ನೀಡಿದ ಅವರು ಹಾನಿಯನ್ನು ಪರಿಶೀಲಿಸಿ ಮಾತನಾಡಿದರು.
ಕಾಮಗಾರಿಗಳ ನಿರ್ವಹಣೆ ವೇಳೆ ಜನರ ದುಡ್ಡನ್ನು ದುರುಪಯೋಗಪಡಿಸಿಕೊಳ್ಳುವುದು ಕಂಡಲ್ಲಿ ಅಂತವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಮರವಂತೆಯ ಕಿರು ಬಂದರು ಅಭಿವೃದ್ಧಿಗಾಗಿ ಈಗಾಗಲೇ 84 ಕೋ. ರೂ. ಯೋಜನೆ ಮಂಜೂರಾತಿ ದೊರಕಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿದೆ. ಕೋವಿಡ್ ಕಾರಣದಿಂದ ಹಿಂದಿನ ಕಾಮಗಾರಿಗಳ ಪಾವತಿ ಬಾಕಿ ಇರುವುದರಿಂದ, ಅನುದಾನ ಇಲ್ಲದೆ ಗುತ್ತಿಗೆದಾರರು ಕಾಮಗಾರಿ ನಿರ್ವಹಿಸಲು ಮುಂದೆ ಬರುತ್ತಿಲ್ಲ. ಬಂದರು ಹಾಗೂ ಮೀನುಗಾರಿಕಾ ಇಲಾಖೆಯಿಂದ ಅಗತ್ಯ ಸ್ಥಳಗಳಲ್ಲಿ ತುರ್ತು ಕಾಮಗಾರಿ ಕೈಗೊಳ್ಳಲು ಸೂಚಿಸಲಾಗಿದೆ. ಡಕ್‌ಫುಟ್ ತಂತ್ರಜ್ಞಾನದಂತೆ ತಡೆಗೋಡೆ ನಿರ್ಮಾಣ ಮಾಡುವ ಪ್ರಸ್ತಾವವಿದೆ ಎಂದು ಹೇಳಿದರು.
ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಡಿಸಿ ಎಂ.ಕೂರ್ಮರಾವ್, ಸಿಇಒ ಪ್ರಸನ್ನ, ಬಂದರು ಇಲಾಖೆಯ ಎಂಜಿನಿಯರ್ ಉದಯ್ ಕುಮಾರ್, ಡಿವೈಎಸ್ಪಿ ಶ್ರೀಕಾಂತ್ ಕೆ., ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ ಶೆಟ್ಟಿ, ಜಿ.ಪಂ. ಮಾಜಿ ಸದಸ್ಯರಾದ ಬಾಬು ಹೆಗ್ಡೆ ತಗ್ಗರ್ಸೆ, ಶಂಕರ ಪೂಜಾರಿ ಯಡ್ತರೆ, ಸುರೇಶ್ ಬಟವಾಡಿ, ರೋಹಿತ್ ಕುಮಾರ ಶೆಟ್ಟಿ ಸಿದ್ದಾಪುರ, ಉದ್ಯಮಿ ವೆಂಕಟೇಶ್ ಕಿಣಿ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಪಕ್ಷದ ಮುಖಂಡರುಉಪಸ್ಥಿತರಿದ್ದರು.
ಸ್ಥಳೀಯರ ಆಕ್ರೋಶ:
ಕಳೆದ 10- 15 ದಿನಗಳಿಂದ ಕಡಲ್ಕೊರೆತದಿಂದಾಗಿ ಆತಂಕ ದಲ್ಲಿಯೇ ಕಳೆಯುತ್ತಿದ್ದೇವೆ. ನಮ್ಮ ಸಂಕಷ್ಟ ಕೇಳಲು ಯಾರೂ ಬಂದಿಲ್ಲ. ತುರ್ತು ಕಾಮಗಾರಿಗೆ ದುಡ್ಡಿಲ್ಲ ಎನ್ನುತ್ತಾರೆ. ನಾವು ಮನೆ – ಮನೆಗೆ ತೆರಳಿ ಹಣ ಸಂಗ್ರಹಿಸಿ, ಕಡಲ್ಕೊರೆತ ತಡೆಯಲು ತುರ್ತು ಕಾಮಗಾರಿಗಳನ್ನು ನಡೆಸಲು ಶ್ರಮ ಪಡೆಯುತ್ತಿದ್ದೇವೆ. ಈಗ ದುಡ್ಡಿಲ್ಲ ಎನ್ನುವವರು ಮುಂದೆ ಗಂಜಿ ಕೇಂದ್ರಕ್ಕೂ ದುಡ್ಡಿಲ್ಲ ಎಂದರೆ ಏನು ಮಾಡುವುದು. ಸಂಜೆಯಾದರೇ ನೀರು ರಸ್ತೆಗೆ ಬರುತ್ತದೆ. ಕೂಡಲೇ ತುರ್ತು ಕಾಮಗಾರಿ ಆರಂಭಿಸುವಂತೆ ಸ್ಥಳೀಯರು ಒತ್ತಾಯಿಸಿದರು.
ಸರಕಾರದ ಗಮನಕ್ಕೆ :
ಪ್ರಕೃತಿ ವಿಕೋಪ ವೇಳೆ ಉಂಟಾಗುವ ಕೃಷಿ ಹಾನಿಗಳಿಗೆ ಸರಕಾರ ನೀಡುವ ಪರಿಹಾರ ಹಣವನ್ನು ಕರಾವಳಿಯ ಭಾಗಗಳ ಮಾರುಕಟ್ಟೆ ಧಾರಣೆಗೆ ಅನುಗುಣವಾಗಿ ನೀಡುವ ಬಗ್ಗೆ ಸರಕಾರದ ಗಮನಕ್ಕೆ ತರಲಾಗುವುದು. ಕೊಂಕಣ ರೈಲ್ವೆ ಹಳಿಗಳ ನಿರ್ಮಾಣದ ವೇಳೆ ನೀರಿನ ಸುಗಮ ಹರಿಯುವಿಕೆಗೆ ತೊಡಕಾಗಿ ಕೃತಕ ನೆರೆ ಉಂಟಾಗುತ್ತಿರುವ ಕುರಿತು ಸಮಗ್ರ ವರದಿ ತರಿಸಿ, ಪರಿಹಾರ ಕ್ರಮ ಕೈಗೊಳ್ಳಲು ಕೊಂಕಣ ರೈಲ್ವೇ ನಿಗಮದ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡುವುದಾಗಿ ಸಂಸದರು ತಿಳಿಸಿದರು.