Advertisement

ಜಿಲ್ಲೆಯ ಜನತೆಗೆ ಸದಾ ಋಣಿ: ಬಿವೈಆರ್‌

06:28 PM Aug 17, 2021 | Shreeram Nayak |

ಶಿಕಾರಿಪುರ: ಜಿಲ್ಲೆಯ ಸಂಸದ ಬಿ. ವೈ. ರಾಘವೇಂದ್ರ ಅವರ ಜನ್ಮದಿನದ ಪ್ರಯುಕ್ತ ಪಟ್ಟಣದ ಕುಮುದ್ವತಿ ವಿದ್ಯಾಸಂಸ್ಥೆಯಲ್ಲಿ ಸಾರ್ಥಕ
ಸಂವತ್ಸರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಅವರಿಗೆ ಶುಭಾಶಯ ತಿಳಿಸಲು ಗೃಹ ಸಚಿವ ಆರಗ ಜ್ಞಾನೇಂದ್ರ, ಶಾಸಕ ಹರತಾಳು ಹಾಲಪ್ಪ ಸೇರಿದಂತೆ ವಿವಿಧ ಕ್ಷೇತ್ರಗಳ ಮುಖಂಡರ ಮಹಾಪೂರವೇ ಹರಿದುಬಂದಿತ್ತು.

Advertisement

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸದ ಬಿ. ವೈ. ರಾಘವೇಂದ್ರ, ತಂದೆ ಬಿ ಎಸ್‌ ಯಡಿಯೂರಪ್ಪ ಅವರಿಗೆ ರಾಜಕೀಯ ನೆಲೆ ನೀಡಿರುವ ತಾಲೂಕು ಹಾಗೂ ಜಿಲ್ಲೆಯ ಜನತೆಯ ಋಣ ತೀರಿಸಲು ಎಷ್ಟು ಕೃತಜ್ಞತೆಗಳನ್ನು ಸಲ್ಲಿಸಿದರು ಸಾಲದು. ಪುರಸಭಾ ಸದಸ್ಯರಿಂದ ಹಿಡಿದು ರಾಜ್ಯದ ಮುಖ್ಯಮಂತ್ರಿ ಯಾಗುವವರೆಗೂ ನನ್ನ ತಂದೆಯ ಕೈ ಹಿಡಿದು ಬೆಳೆಸಿದ್ದೀರಿ. ಇಂಥವರ ಮಗನಾಗಿ ಹುಟ್ಟಿದ ನನ್ನನ್ನೂ ಸಹ ಪುರಸಭಾ ಸದಸ್ಯನಿಂದ, ಲೋಕಸಭಾ ಸದಸ್ಯನಾಗಿಸಿದ್ದೀರಿ. ಈ ನಿಮ್ಮ ಪ್ರೀತಿ, ಪ್ರೋತ್ಸಾಹ ಮತ್ತು ಋಣವನ್ನು ತೀರಿಸಲು ಸಾಧ್ಯವಿಲ್ಲ ಎಂದರು.

ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ತಾವು ಸಂಘ ಪರಿವಾರದಿಂದ ಆಗಮಿಸಿದ್ದು, 1973 ರಿಂದ ಬಿ. ಎಸ್‌. ಯಡಿಯೂರಪ್ಪರವರ ಒಡನಾಡಿಯಾಗಿದ್ದೇನೆ. ನನ್ನನ್ನು ಗಮನಿಸಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಂಸದ ಬಿ. ವೈ. ರಾಘವೇಂದ್ರ ಮತ್ತು ಸಂಘ
ಪರಿವಾರದವರು ನನಗೆ ಸಚಿವ ಸ್ಥಾನ ಕೊಡಿಸಲು ಪ್ರಯತ್ನ ಮಾಡಿದ್ದರ ಫಲವಾಗಿ ಈಗ ನನಗೆ ಅತ್ಯಂತ ಜವಾಬ್ದಾರಿಯ ಉತ್ತಮ ಖಾತೆ ಲಭಿಸಿದೆ ಎಂದರು.

ಸಾಗರ- ಹೊಸನಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಮಾತನಾಡಿ, ಜಿಲ್ಲೆಯ ಬಿಜೆಪಿ ಶಾಸಕರಾಗಿರುವ ತಾವು ಸಂಘ ಪರಿವಾರದಿಂದ ಆಗಮಿಸಿದ್ದು, ಬಹುತೇಕ ಹೆಚ್ಚಿನ ರೀತಿಯಲ್ಲಿ ಹೋರಾಟದ ಹಾದಿಯಲ್ಲಿ ಬಂದವರು. ಬಿ ಎಸ್‌. ಯಡಿಯೂರಪ್ಪ ಅವರು ಪ್ರಥಮ ಬಾರಿಗೆ ರಾಜ್ಯದ
ಮುಖ್ಯಮಂತ್ರಿಯಾಗಿದ್ದಾಗಲೇ ಆರಗ ಜ್ಞಾನೇಂದ್ರ ಅವರು ಸಚಿವರಾಗಬೇಕಿತ್ತು. ಆ ಸಮಯದಲ್ಲಿ ಅವರು ಸೋಲು ಕಂಡ ಕಾರಣ ಆ ಅವಕಾಶ ನನಗೆ ಸಿಕ್ಕಿತ್ತು. ಆಗ ಅವರು ಸೋತರೂ ಪರವಾಗಿಲ್ಲ. ಈಗ ಉತ್ತಮ ಜವಾಬ್ದಾರಿಯುತ ಖಾತೆಯನ್ನೇ ಪಡೆದಿದ್ದಾರೆ. ಅವರಿಗೆ ಶುಭವಾಗಲಿ ಎಂದರು.

ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ. ಬಿ. ಅಶೋಕ್‌ ನಾಯಕ್‌, ಬೈಂದೂರು ಶಾಸಕ ಶಿವಕುಮಾರ್‌ ಶೆಟ್ಟಿ, ರಾಣೆಬೆನ್ನೂರು ಶಾಸಕ ಅರುಣ್‌ ಕುಮಾರ್‌, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ, ಎಂಎಡಿಬಿ ಅಧ್ಯಕ್ಷ ಕೆ. ಎಸ್‌. ಗುರುಮೂರ್ತಿ, ವಿಧಾನ ಪರಿಷತ್‌ ಸದಸ್ಯ ರುದ್ರೇಗೌಡ, ರಾಜ್ಯ ಅರಣ್ಯ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ ಕೆ. ರೇವಣಪ್ಪ, ಜಿಲ್ಲಾ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಚನ್ನವೀರಪ್ಪ, ಉರ್ದು ಸಾಹಿತ್ಯ
ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮೌಲಾನ ಅಮ್ಜದ್‌ ಹುಸೇನ್‌ ಕರ್ನಾಟಕ, ತಾಲೂಕು ಬಿಜೆಪಿ ಅಧ್ಯಕ್ಷ ವೀರೇಂದ್ರ ಪಾಟೀಲ್‌, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ. ಎಸ್‌. ಷಡಾಕ್ಷರಿ ಸೇರಿದಂತೆ ಅನೇಕ ಮುಖಂಡರು ಇದ್ದರು.

Advertisement

ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಶಿಕಾರಿಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸನ್ಮಾನಿಸಲಾಯಿತು ವಿವಿಧ ಇಲಾಖೆಗಳ ಆಡಳಿತ ಅಧಿಕಾರಿಗಳು, ಅಭಿಮಾನಿಗಳು ಅಭಿನಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next